ನೀರು ಬರುತ್ತಿಲ್ಲ, ಮಣ್ಣು ತೆಗೆಸುವ ಗಂಡಸು ಪಾಲಿಕೆಯಲ್ಲಿ ಇದ್ದಾರಾ?
ಮಂಗಳೂರಿನಲ್ಲಿ ಬುದ್ಧಿವಂತರೆನಿಸಿದ ನಾವು ಏನು ಮಾಡುತ್ತೇವೆ ಎಂದರೆ ಸಮಸ್ಯೆ ಯಾವಾಗ ಉದ್ಭವಿಸುತ್ತದೆಯೋ ಆ ಸಂದರ್ಭದಲ್ಲಿ ಮಾತ್ರ ಯೋಚಿಸುತ್ತೇವೆ ನಂತರ ಅದನ್ನು ಮರೆಯುತ್ತೇವೆ. ನಂತರ ನಾವು ಆ ಸಮಸ್ಯೆ ಮತ್ತೆ ಉದ್ಭವಿಸಿದಾಗ ಛೇ, ಆವತ್ತೇ ಸರಿ ಮಾಡಬೇಕಿತ್ತು ಎಂದು ಅಂದುಕೊಳ್ಳುತ್ತೇವೆ ಮತ್ತು ಪುನ: ಮರೆಯುತ್ತೇವೆ. ಹೀಗೆ ಸಮಸ್ಯೆಗಳನ್ನು ಅನುಭವಿಸುವುದು ಮತ್ತು ಅದನ್ನು ಮರೆಯುವುದು ನಮ್ಮ ಪಾಲಿಗೆ ಯಾವತ್ತೂ ಅಭ್ಯಾಸವಾಗಿ ಹೋಗಿದೆ. ಇದು ಇವತ್ತು ಯಾಕೆ ಹೇಳುತ್ತಿದ್ದೇನೆ ಎಂದರೆ 2015 ರಲ್ಲಿ ಮಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಂದಿತ್ತು. ಅದಕ್ಕೆ ಕಾರಣ ನೀರು ಪೂರೈಕೆ ಆಗುತ್ತಿದ್ದ ನೀರಿನ ಪೈಪ್ ಒಡೆದುಹೋಗಿದ್ದು. ಆ ಒಡೆದುಹೋದ ನೀರಿನ ಪೈಪ್ ಅನ್ನು ಸರಿ ಮಾಡಿ ಮತ್ತೆ ಮಂಗಳೂರಿಗೆ ನೀರು ಪೂರೈಕೆ ಯಥಾಸ್ಥಿತಿಗೆ ತರಲು ಮೂರು ದಿನ ಹಿಡಿದಿತ್ತು. ಆವತ್ತು ನಮಗೆ ಸಮಸ್ಯೆ ಏನು ಮತ್ತು ಯಾಕೆ ಹೀಗೆ ಆಯಿತು ಎಂದು ಗೊತ್ತಿತ್ತು. ಆದರೆ ಸರಿ ಮಾಡಿರಲಿಲ್ಲ.
ಈಗ ಮತ್ತೆ ಅದನ್ನು ಅನುಭವಿಸಿದ್ದೇವೆ. ಯಥಾಪ್ರಕಾರ ಕಥೆ ಅದೇ. ಆವತ್ತು ನೀರಿನ ಪೂರೈಕೆ ನಿಲ್ಲಲು ಮುಖ್ಯ ಕಾರಣವಾಗಿದದ್ದು ನೀರಿನ ಪೈಪುಗಳ ಮೇಲೆ ಭಾರಿ ಲಾರಿಗಳು ಸಂಚರಿಸಿ ಪೈಪುಗಳು ಜೋಡಣೆ ಆಗುತ್ತಿದ್ದ ಕಡೆ ಬಿರುಕು ಬಿಟ್ಟಿತ್ತು. ಆಗ ನಮ್ಮ ಜಿಲ್ಲಾಧಿಕಾರಿಯಾಗಿದ್ದವರು ಎ ಬಿ ಇಬ್ರಾಹಿಂ. ಇಲ್ಲಿ ಒಂದು ವಿಷಯ ನಿಮಗೆ ಹೇಳಲೇಬೇಕು. ಅದೇನೆಂದರೆ ನೀರಿನ ಪೈಪುಗಳು ಹಾದು ಹೋಗುವ ಸ್ಥಳದಲ್ಲಿ ಇರುವ ಭೂಮಿಯನ್ನು ಸರಕಾರ ಸಂಬಂಧಪಟ್ಟ ಮಾಲೀಕರಿಗೆ ನಿರ್ದಿಷ್ಟ ಪರಿಹಾರ ಕೊಟ್ಟು ಸ್ವಾಧೀನಪಡಿಸಿಕೊಂಡಿದೆ. ಆದರೆ ಹಣ ಕೊಡಲಾಗಿದೆ ಮಾತ್ರವಲ್ಲದೆ ಆರ್ ಟಿಸಿ ಪಾಲಿಕೆಯ ಹೆಸರಲ್ಲಿ ಆಗಿರಲಿಲ್ಲ. ಆಗ ಉಪ ಆಯುಕ್ತೆಯಾಗಿದ್ದ ಪ್ರಮಿಳಾ ಅವರು ಅದನ್ನು ಪಾಲಿಕೆಯ ಹೆಸರಿಗೆ ಮಾಡಿದ್ದರು. ಇಷ್ಟೇ ಆಗಿದ್ದರೆ ಪೈಪ್ ಲೈನಿಗೂ ನೀರಿನ ಸಮಸ್ಯೆಗೂ ಸಂಬಂಧ ಎಲ್ಲಿ ಎಂದು ನೀವು ಕೇಳಬಹುದು. ವಿಷಯ ಇರುವುದೇ ಇಲ್ಲಿ. ಹೈವೇ ಬದಿಯಲ್ಲಿ ನೀರಿನ ಪೈಪ್ ಲೈನ್ ಇದೆ. ಅದನ್ನು ನೀವು ಯಾವತ್ತಾದರೂ ನೋಡಿಯೇ ಇರುತ್ತೀರಿ. ಅದರ ಆಚೆಗೆ ಖಾಸಗಿಯವರ ಜಮೀನಿದೆ. ಈಗ ಒಬ್ಬ ವ್ಯಕ್ತಿ ತನ್ನ ಜಮೀನಿಗೆ ಒಂದು ಲಾರಿ ತೆಗೆದುಕೊಂಡು ಹೋಗಬೇಕಾದರೆ ಹೈವೆಯಿಂದ ಹಾರಿ ಆಚೆಗೆ ಹೋಗಲು ಆಗುವುದಿಲ್ಲ. ಅದಕ್ಕೆ ಒಂದು ದಾರಿ ಬೇಕು. ದಾರಿ ಏನೆಂದರೆ ಒಂದು ಕಾಂಕ್ರೀಟ್ ಕಿರುಸೇತುವೆಯನ್ನು ಕಟ್ಟುವುದು. ಆಗ ಯಾವ ವಾಹನವಾದರೂ ಕೂಡ ಹೈವೆಯಿಂದ ಅತ್ತಲಿರುವ ಖಾಸಗಿ ಜಾಗಕ್ಕೆ ಅದೇ ಕಿರುಸೇತುವೆ ಮೇಲಿನಿಂದ ಹೋಗಬೇಕಾಗುತ್ತದೆ. ಆದರೆ ಈ ಅತೀ ಬುದ್ಧಿವಂತ ಜಮೀನಿನ ಮಾಲೀಕರಿದ್ದಾರಲ್ಲ, ಅವರು ಏನು ಮಾಡಿದ್ದರು ಎಂದರೆ ಕಾಂಕ್ರೀಟ್ ಸೇತುವೆ ಕಟ್ಟಲು ಸುಮ್ಮನೆ ಲಕ್ಷಗಟ್ಟಲೆ ಖರ್ಚು. ಅದರ ಬದಲು ಈ ಪೈಪುಗಳ ಮೇಲೆ ಮಣ್ಣು ಸುರಿದು ಮುಚ್ಚಿಬಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅಂದುಕೊಂಡರು. ಈಗ ಏನಾಗಿದೆ ಎಂದರೆ ಆವತ್ತು ಮಣ್ಣು ಹಾಕಿ ಮುಚ್ಚಿದ ಪರಿಣಾಮ ನಾವು ಇವತ್ತಿಗೂ ಶಿಕ್ಷೆ ಅನುಭವಿಸುತ್ತಿದ್ದೇವೆ. ಪ್ರತಿ ಬಾರಿ ಪೈಪು ಒಳಗೊಳಗೆ ಒಡೆಯುತ್ತದೆ. ನಾವು ನೀರಿನ ಸಮಸ್ಯೆ ಅನುಭವಿಸುತ್ತಿದ್ದೇವೆ. ಹಿಂದೆ ಇದ್ದ ವಾಹನಗಳಿಗೂ ಈಗ ಇರುವ ಮಣಭಾರದ ಲಾರಿಗಳಿಗೂ ಗಾತ್ರ, ಭಾರದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಮಣ್ಣು ತೆಗೆದು ಕಿರುಸೇತುವೆ ಕಟ್ಟಿಕೊಳ್ಳಿ ಎಂದು ಎಲ್ಲಾ ಭೂ ಮಾಲೀಕರಿಗೆ ನೋಟಿಸು ಕೊಡಲಾಗಿದೆ. ಆದರೆ ಏನೂ ಪ್ರಯೋಜನವಿಲ್ಲ. ಒಂದಿಬ್ಬರು ಮಾಡಿರಬಹುದು. ಈ ಸಮಸ್ಯೆ ಶುರುವಾದಾಗ ಇದ್ದದ್ದು ಪಾಲಿಕೆಯಲ್ಲಿ ಕಾಂಗ್ರೆಸ್. ದೀಪಕ್ ಪೂಜಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಈಗ ಭಾರತೀಯ ಜನತಾ ಪಾರ್ಟಿ ಇದೆ. ಆವತ್ತು ಭೂಮಾಲೀಕರಿಗೆ ನೋಟಿಸು ಕೊಟ್ಟು ಇವತ್ತಿಗೆ ಏಳು ವರ್ಷ ಆಗಿದೆ. ಒಂದೇ ಒಂದು ಹುಲ್ಲುಕಡ್ಡಿ ಅಲುಗಾಡಿಲ್ಲ. ಮೊನ್ನೆ ಎರಡು ದಿನ ಕುಡಿಯುವ ನೀರು ಇರಲಿಲ್ಲ. ಆವತ್ತೆ ನಮ್ಮ ಪೈಪುಗಳ ಮೇಲೆ ಹಾಕಿದ್ದ ಮಣ್ಣನ್ನು ತೆರವುಗೊಳಿಸಿದ್ದರೆ ಈ ಸಮಸ್ಯೆ ಮತ್ತೆ ಉದ್ಭವಿಸುತ್ತಿರಲಿಲ್ಲ. ಆದರೆ ವಿಷಯ ಇರುವುದು ಆಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈ ಪೈಪುಗಳ ಮೇಲೆ ಮಣ್ಣು ಹಾಕಿರುವ ಹೆಚ್ಚಿನ ಪ್ರದೇಶಗಳು ಬರುವುದು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ. ಮೂರು ವರ್ಷಗಳ ಮೊದಲಿನ ತನಕ ಅಲ್ಲಿ ಇದ್ದದ್ದು ಕಾಂಗ್ರೆಸ್ ಶಾಸಕರು. ಪಾಲಿಕೆಯಲ್ಲಿ ಕೂಡ ಒಂದೂವರೆ ವರ್ಷದ ಹಿಂದಿನ ಇದ್ದದ್ದು ಕಾಂಗ್ರೆಸ್ ಆಡಳಿತ. ಸರಿ, ಕಾಂಗ್ರೆಸ್ಸಿಗರಿಗೆ ಪಾಲಿಕೆ ವ್ಯಾಪ್ತಿಯ ಆರು ಲಕ್ಷ ಜನರಿಗಿಂತ ಆ ಮಣ್ಣು ಹಾಕಿರುವ ಜಾಸ್ತಿ ಎಂದರೆ ನೂರು ಜನರು ಮುಖ್ಯ ಎಂದೇ ಇಟ್ಟುಕೊಳ್ಳೋಣ. ಆ ನೂರು ಜನರಿಗೆ ನೋಟಿಸು ಕೊಟ್ಟರೆ ಅವರು ಬೇಸರಗೊಳ್ಳುತ್ತಾರೆ ಎಂದು ಕಾಂಗ್ರೆಸ್ಸಿಗೆ ಮಮಕಾರ ಇದ್ದಿರಬಹುದು. ಆದರೆ ಈಗ ಬಿಜೆಪಿ ಎಲ್ಲಾ ಕಡೆ ಅಧಿಕಾರದಲ್ಲಿದೆ. ಬಂಟ್ವಾಳದಿಂದ ಪಾಲಿಕೆಯ ಕಟ್ಟಡ ಇರುವ ಲಾಲ್ ಭಾಗ್ ತನಕ ಕೇವಲ ಕೇಸರಿ. ಹಾಗಾದರೆ ಈಗ ಆ ಧೈರ್ಯ ಮಾಡಬಹುದಲ್ಲ. ನೀವಾಗಿ ತೆಗೆಯುತ್ತೀರೋ ಅಥವಾ ನಾವೇ ತೆಗೆದು ಬಿಲ್ ಕಳುಹಿಸಬೇಕೋ ಎಂದು ಲಾಲ್ ಭಾಗ್ ನ ಪಾಲಿಕೆಯ ಅಂಗಳದಲ್ಲಿ ನಿಂತು ಆದೇಶ ಕೊಡುವ ಗಂಡಸರು ಇದ್ದಾರಾ ಅಥವಾ ನಾವು ಪಕ್ಷ ಮಾತ್ರ ಬೇರೆ. ಕಾಂಗ್ರೆಸ್ಸಿಗೂ ನಮಗೂ ವ್ಯತ್ಯಾಸ ಇಲ್ಲ ಎಂದು ನಗುಮುಖದಿಂದ ಹೊಸ ಮೇಯರ್ ಆಗುವವರು ತಣ್ಣಗೆ ಮೇಯರ್ ಕುರ್ಚಿ ಮೇಲೆ ಕೂರಲಿದ್ದಾರಾ? ಯಾಕೋ, ಕಾಂಗ್ರೆಸ್ ಹಣೆಬರಹ ದೂರದಿಂದ ಕಾಣುತ್ತಿತ್ತು. ಬಿಜೆಪಿ ಏನೋ ಮಾಡುತ್ತೆ ಎನ್ನುವ ಭರವಸೆ ಇದ್ದೇ ಇದೆ!
Leave A Reply