ಯಾರದ್ದೋ ಇಗೋಗೆ ಕಾರ್ಮಿಕರ ಒಲೆ ಆರುತ್ತಾ?
ನೀವು ನಿಮ್ಮ ಹತ್ತು ಬೇಡಿಕೆಗಳನ್ನು ನಿಮ್ಮ ಯಜಮಾನರ ಮುಂದೆ ಇಡುತ್ತೀರಿ. ಅದರಲ್ಲಿ ಅವರು ಒಂಭತ್ತು ಬೇಡಿಕೆಗಳನ್ನು ಈಡೇರಿಸಲು ಒಪ್ಪುತ್ತಾರೆ. ಅದರಲ್ಲಿ ಒಂದು ಬೇಡಿಕೆಯನ್ನು ಈಗ ಬೇಡಾ, ಮುಂದೆ ನೋಡೋಣ ಎಂದು ಹೇಳಿದರೆ ಅದನ್ನು ಸಂತೋಷದಿಂದ ನೀವು ಒಪ್ಪಿಕೊಳ್ಳುತ್ತಿರಿ ಎಂದರೆ ನೀವು ಸರಿಯಾದ ದಾರಿಯಲ್ಲಿ ಇದ್ದಿರಿ ಎಂದು ಅರ್ಥ. ನೀವು ನಿಮ್ಮ ಸಂಸ್ಥೆಯನ್ನು ಕೇವಲ ಉದ್ಯೋಗದ ದೃಷ್ಟಿಯಲ್ಲಿ ಮಾತ್ರ ನೋಡುತ್ತಿಲ್ಲ. ಅದಕ್ಕಿಂತಲೂ ಮಿಗಿಲಾದ ಸಂಬಂಧ ನಿಮಗೆ ಆ ಸಂಸ್ಥೆಯ ಮೇಲೆ ಹುಟ್ಟಿದೆ ಎಂದು ಅರ್ಥ. ಅದು ನಿಜಕ್ಕೂ ನಿಮ್ಮ ಹಾಗೂ ಸಂಸ್ಥೆಗೆ ಇಬ್ಬರಿಗೂ ಒಳ್ಳೆಯದು. ಒಂದು ವೇಳೆ ನೀವು ನಿಮ್ಮ ಬೇಡಿಕೆ ಈಡೇರಿದ ಮೇಲೆಯೂ ಆ ಬಗ್ಗೆ ತೃಪ್ತಿ ಹೊಂದಿದ ಮೇಲೆಯೂ ಪ್ರತಿಭಟನೆಗೆ ಇಳಿದಿದ್ದೀರಿ ಎಂದರೆ ನಿಮ್ಮನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ ಎಂದೇ ಅರ್ಥ.
ಹಾಗೆ ರಾಜ್ಯದಲ್ಲಿ ನಾಲ್ಕು ಸಾರಿಗೆ ನಿಗಮದ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಅದರ ಅರ್ಥ ಅವರು ಯಾರದ್ದೋ ಕೈಗೊಂಬೆಯಾಗುತ್ತಿದ್ದಾರೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿನ ರಾಜ್ಯದ 226 ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಚಾಲಕ, ನಿರ್ವಾಹಕ ಸೇರಿ 1.3 ಲಕ್ಷ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಡಿಸೆಂಬರ್ ನಲ್ಲಿಯೂ ಇವರು ಪ್ರತಿಭಟನೆ ನಡೆಸಿದ್ದರು. ಆ ವೇಳೆಯಲ್ಲಿಯೂ ಸರಕಾರವೂ ನಿಗಮಗಳ ನೌಕರರನ್ನು ಸರಕಾರಿ ನೌಕರರನ್ನಾಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಉಳಿದಂತೆ 9 ಬೇಡಿಕೆಗಳನ್ನು ಈಡೇರಿಸಲು 3 ತಿಂಗಳ ಕಾಲಾವಕಾಶ ಕೇಳಿತ್ತು. ಅದರಂತೆ ಸರಕಾರ ಕರೋನಾದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬದವರಿಗೆ 30 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವುದು, ವಿವಿಧ ಭತ್ಯೆಗಳನ್ನು ಕೊಡುವುದು, ಅಧಿಕಾರಿಗಳ ಕಿರುಕುಳ ತಪ್ಪಿಸಲು ಕ್ರಮ ಸೇರಿ 8 ಬೇಡಿಕೆಗಳನ್ನು ಈಡೇರಿಸಿ ಆದೇಶಿಸಿದೆ. ಆದರೆ 6 ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಲು ಕ್ರಮ ಕೈಗೊಂಡಿಲ್ಲ. ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಿಸಲು ಈಗ ಸರಕಾರಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ನೌಕರರಿಗೆ 6 ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಿದರೆ ನೌಕರರ ಈಗಿನ ಮೂಲ ವೇತನ ಶೇಕಡಾ 70 ರಿಂದ 80 ಹೆಚ್ಚಳವಾಗಲಿದೆ. ಅದರಿಂದ ಸಾರಿಗೆ ನಿಗಮಗಳಿಗೆ ವಾರ್ಷಿಕ ನಾಲ್ಕು ಸಾವಿರ ಕೋಟಿ ರೂಪಾಯಿ ನಷ್ಟವುಂಟಾಗುತ್ತದೆ. ಹೀಗಾಗಿ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೆ ತರಲು ಸರಕಾರ ಹಿಂದೇಟು ಹಾಕುತ್ತಿವೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ಅದರ ಬದಲಿಗೆ ಎಂಟು ಶೇಕಡಾ ವೇತನವನ್ನು ಹೆಚ್ಚಿಸುವುದಾಗಿ ಸರಕಾರ ಭರವಸೆ ನೀಡಿದೆ. ಆದರೆ ಅದನ್ನು ಒಂದು ಇಟ್ಟುಕೊಂಡು ಸಾರಿಗೆ ನೌಕರರು ಮುಷ್ಕರ ಹೂಡುತ್ತಿರುವುದು ಸರಿಯಲ್ಲ ಎನ್ನುವುದಕ್ಕೆ ಒಟ್ಟು ಮೂರು ಕಾರಣಗಳಿವೆ. ಮೊದಲನೇಯದಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿ ಮೂರು ತಿಂಗಳು ಆದಾಯ ಇಲ್ಲದೆ ಎಲ್ಲಾ ನಿಗಮಗಳು ನಷ್ಟ ಅನುಭವಿಸುತ್ತಿವೆ. ಮೊದಲೇ ಸಾರಿಗೆ ನಿಗಮಗಳು ಲಾಭದಲ್ಲಿಲ್ಲ. ಹಾಗಿರುವಾಗ ಕೊರೊನಾ ಗಾಯದ ಮೇಲೆ ಬರೆ ಎಳೆದ ಹಾಗೆ ಆಗಿದೆ. ಹೀಗಿರುವಾಗ ಮೂರು ತಿಂಗಳು ಸಾರಿಗೆ ನೌಕರರಿಗೆ ಸಂಬಳ ಕೊಡುವ ಸ್ಥಿತಿಯಲ್ಲಿ ಅವು ಇರಲೇ ಇಲ್ಲ. ಯಾಕೆಂದರೆ 1.3 ಲಕ್ಷ ನೌಕರರಿಗೆ ಮೂರು ತಿಂಗಳ ಸಂಬಳ ಎಂದರೆ ಎಷ್ಟು ಎನ್ನುವುದು ಸಾಮಾನ್ಯ ಜನರಿಗೆ ಅಂದಾಜಿಗೆ ಸಿಗದ ಮೊತ್ತ. ಆದರೂ ಸರಕಾರದ ಅನುದಾನವನ್ನು ಪಡೆದುಕೊಂಡು ನೌಕರರು ಒಂದು ದಿನವೂ ಕೆಲಸ ಮಾಡದೇ ಇದ್ದರೂ 3 ತಿಂಗಳ ಸಂಬಳ ನೀಡಲಾಗಿದೆ. ಅದನ್ನು ಅರ್ಥ ಮಾಡಿಕೊಂಡ ಚಾಲಕರೊಬ್ಬರು ಧೈರ್ಯವಾಗಿ ಉದ್ಯೋಗಕ್ಕೆ ಬಂದಿದ್ದಾರೆ. ಯಾಕೆಂದರೆ ನಮಗೆ ಸಂಕಷ್ಟ ಇದ್ದಾಗ ಸಂಬಳ ನೀಡಿ ಸಲಹಿದ್ದೀರಿ. ಈಗ ನೀವು 9 ರಲ್ಲಿ ಎಂಟು ಬೇಡಿಕೆಗಳನ್ನು ಈಡೇರಿಸಿದ್ದಿರಿ. ಒಂದು ಬೇಡಿಕೆ ಇಟ್ಟುಕೊಂಡು ನಾವು ಹೇಗೆ ಪ್ರತಿಭಟನೆಗೆ ಇಳಿಯುವುದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಇಲ್ಲಿ ಇರುವ ಇನ್ನೊಂದು ವಿಷಯ ಎಂದರೆ ಇವರ ನಾಯಕನ ಬಗ್ಗೆ. ಕೆಲವರಿಗೆ ಪುಗಸಟ್ಟೆಯಲ್ಲಿ ಯಾವಾಗಲೂ ಪ್ರಚಾರದಲ್ಲಿ ಇರಬೇಕು ಎನ್ನುವ ತುಡಿತ ಇರುತ್ತದೆ. ಅಂತವರು ಏನಾದರೂ ವಿಷಯ ಸಿಗುತ್ತಾ ಎಂದು ಕಾಯುತ್ತಾ ಇರುತ್ತಾರೆ. ಅಂತವರಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಒಬ್ಬರು. ರೈತರ ಹೆಸರಿನಲ್ಲಿ ಆದ ಹೋರಾಟದಲ್ಲಿ ಇದ್ದು ಈಗ ಬಿಡುವು ಸಿಕ್ಕಿರುವುದರಿಂದ ಮತ್ತೆ ಸಾರಿಗೆ ನೌಕರರ ಮುಖಂಡತ್ವ ವಹಿಸಿಕೊಂಡಿದ್ದಾರೆ. ಇವರನ್ನು ನಂಬಿ ಸಾರಿಗೆ ನೌಕರರು ಹೋರಾಟಕ್ಕೆ ಇಳಿದಿದ್ದಾರೆ. ಆದರೆ ಸರಕಾರ ಸರಕಾರಿ ಬಸ್ಸು ಚಲಾಯಿಸಲು ಸಿದ್ಧರಿರುವ ಅನೇಕ ಯುವಕರಿಗೆ ಈ ಸಂದರ್ಭದಲ್ಲಿ ಒಂದು ಸ್ಟ್ಯಾಂಡ್ ಬೈ ಇಟ್ಟರೆ ತುಂಬಾ ಒಳ್ಳೆಯದು. ಯಾಕೆಂದರೆ ನಮ್ಮಲ್ಲಿ ನಿರುದ್ಯೋಗಿ ಚಾಲಕರು ತುಂಬಾ ಜನ ಇದ್ದಾರೆ. ಅವರಿಗೆ ದಿನದ ವೇತನ ನೀಡಿ ತಕ್ಷಣಕ್ಕೆ ಕೆಲಸಕ್ಕೆ ನಿಯುಕ್ತಿಗೊಳಿಸಬೇಕು. ಹಿಂದೆ ಮುಂಬೈ ಸೇರಿ ಮಹಾರಾಷ್ಟ್ರದ ಹಲವೆಡೆ ಅತ್ಯಧಿಕ ಸಂಖ್ಯೆಯಲ್ಲಿ ಬಟ್ಟೆ ಮಿಲ್ ಗಳಿದ್ದವು. ಸಾವಿರಾರು ಸಂಖ್ಯೆಯಲ್ಲಿ ಅಲ್ಲಿ ಕಾರ್ಮಿಕರು ದುಡಿಯುತ್ತಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಅವರ ಕುಟುಂಬ ಸದಸ್ಯರ ಹೊಟ್ಟೆ ತುಂಬುತ್ತಿತ್ತು. ಆಗ ನಿಧಾನವಾಗಿ ಅಲ್ಲಿ ದತ್ತ ಸಾವಂತ್ ಎನ್ನುವ ವ್ಯಕ್ತಿ ಕಾರ್ಮಿಕ ನಾಯಕನಾಗುವ ತೆವಲಿನಲ್ಲಿ ಬಟ್ಟೆ ಮಿಲ್ ಗಳ ಮಾಲೀಕರೊಂದಿಗೆ ಜಗಳಕ್ಕೆ ನಿಂತ. ಅದರೊಂದಿಗೆ ಶಿವಸೇನೆ ಕೂಡ ಚಿಗುರು ಒಡೆಯುತ್ತಿದ್ದ ಕಾಲ. ಅವರು ಕೂಡ ಕಾರ್ಮಿಕರ ರಕ್ಷಣೆಯ ಫೋಸ್ ಕೊಟ್ಟು ಮುಷ್ಕರಕ್ಕೆ ಕರೆ ನೀಡಲು ಪ್ರೇರಣೆ ನೀಡಿದವು. ಕಾರ್ಮಿಕ ನಾಯಕರ ಈ ಉಪಟಳದಿಂದ ಬೇಸತ್ತ ಮಾಲೀಕರಲ್ಲಿ ಬಹುತೇಕರು ಮಿಲ್ ಗಳಿಗೆ ಬೀಗ ಹಾಕಿದರು. ಅದರಿಂದ ಬಿದ್ದಿಗೆ ಬಿದ್ದದ್ದು ಕಾರ್ಮಿಕರು. ಯಾರೂ ಕೇಳುವವರಿಲ್ಲ. ಅನಾಥರಾಗಿ ಸತ್ತವರೆಷ್ಟೋ. ಇತಿಹಾಸ ನಮ್ಮ ಮುಂದೆ ಇದೆ. ತಿಳಿದವರಿಗೆ ಅರ್ಥವಾಗುತ್ತದೆ!
Leave A Reply