ಅನಗತ್ಯ ಸುತ್ತಾಡುವವರ ಫೋನ್ ಕಸಿದು ಠಾಣೆಯ ಹೊರಗೆ ಕುಳ್ಳಿರಿಸಿ!!
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಶುಕ್ರವಾರ ಕೊರೊನಾ ಸೊಂಕಿತರ ಸಂಖ್ಯೆ 1200 ದಾಟಿದೆ. ನಾವು ಇನ್ನು ಕೂಡ ಎಚ್ಚರ ಆಗಿಲ್ಲ ಎನ್ನುವುದಕ್ಕೆ ಈ ಅಂಕಿಅಂಶಗಳೇ ಸಾಕು. ಲಾಕ್ ಡೌನ್, ಕೊರೊನಾ, ವ್ಯಾಕ್ಸಿನ್, ವೆಂಟಿಲೇಟರ್, ರೆಮಿಡಿಸೆವರ್, ಕೋವಿಶೀಲ್ಡ್, ಕೋವ್ಯಾಕ್ಸಿನ್ ನಡುವೆ ಮತ್ತೆ ಬದುಕು ಇಕ್ಕಟ್ಟಿಗೆ ಸಿಲುಕಿದಂತಹ ಅನುಭವ ಜನಸಾಮಾನ್ಯರದ್ದು. ಟಿವಿಯಲ್ಲಿಯೂ ಇದೇ ವಿಷಯ. ಪತ್ರಿಕೆಗಳಲ್ಲಿಯೂ ಇದೇ ವಿಷಯ. ಸಾಮಾಜಿಕ ಜಾಲತಾಣಗಳಲ್ಲಿಯೂ ಇದೇ ವಿಷಯ. ಕೆಲವರು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿದ್ದಾರೆ. ಕೆಲವರು ರಾಜ್ಯ ಸರಕಾರದವರನ್ನು ಹೀಯಾಳಿಸುತ್ತಿದ್ದಾರೆ. ಕೆಲವರು ಅವರಿಗೆ ಯಾರ ಮೇಲೆ ಅಸಮಾಧಾನ ಇದೆಯೋ ಅವರನ್ನು ಖಂಡಿಸುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ನಾಗರಿಕ ಇಷ್ಟು ಮಾಡಿದರೆ ಸಾಕಾ? ಭಾರತೀಯ ಜನತಾ ಪಾರ್ಟಿ ಮತ್ತು ಮೋದಿಯವರನ್ನು ಬೈದರೆ ಸಮಸ್ಯೆ ಪರಿಹಾರವಾಗುತ್ತದೆಯಾ? ಸರಕಾರವನ್ನು ಬೈದು ಕುಳಿತುಕೊಳ್ಳುವುದಕ್ಕೆ ಅದಕ್ಕಾಗಿ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಯಾಕೆಂದರೆ ಮೋದಿಯವರು ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾ ಹೋಗುತ್ತಿದ್ದಾರೆ. ವ್ಯರ್ಥವಾಗುವುದು ಟೀಕಿಸಿದವರ ಎನರ್ಜಿ. ನಾವು ಪ್ರತಿಯೊಬ್ಬರು ಒಂದಲ್ಲ ಒಂದು ಸಂಘಟನೆಯಲ್ಲಿ ಗುರುತಿಸಿಕೊಂಡಿರುತ್ತೇವೆ. ಅದು ಯುವಕ ಮಂಡಲ, ಯುವತಿ ಮಂಡಲದಿಂದ ಹಿಡಿದು ಯಾವುದೇ ಸಕರಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುವಂತೆ ನಾವೇ ನಿರ್ಮಿಸಿಕೊಂಡ ಸಮಾಜಮುಖಿ ಸಂಘಟನೆಗಳ ಮೂಲಕ ನಾವು ಏನು ಮಾಡಬಹುದು ಎನ್ನುವುದನ್ನು ಈಗ ಯೋಚಿಸುವ ಕಾಲ ಬಂದಿದೆ.
ನಾವು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ನಿತ್ಯ 1500 ಜನರಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಉತ್ಪಾದಿಸಿ ಅದನ್ನು ನಮಗಾಗಿ ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಮತ್ತು ಉದ್ಯೋಗವಿಲ್ಲದೆ, ಊಟಕ್ಕೂ ಗತಿಯಿಲ್ಲದೆ ರಸ್ತೆಬದಿ ಮಲಗಿರುವ ಅಸಂಖ್ಯಾತ ಜನರಿಗೆ ದಿನಕ್ಕೆ ಎರಡು ಬಾರಿ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಮಂಗಳೂರು ನಗರ ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಅವರು ಅಧ್ಯಕ್ಷರಾಗಿರುವ ಈ ಟ್ರಸ್ಟಿನಲ್ಲಿ ನಾನು ಕೂಡ ಒಬ್ಬನಾಗಿ ಟ್ರಸ್ಟಿನ ಯುವ ಕಾರ್ಯಕರ್ತಬಂಧುಗಳು ವಾಹನಗಳಲ್ಲಿ ಆಹಾರ ತುಂಬಿಸಿ ಬೇರೆ ಬೇರೆ ಕಡೆ ಹೋಗುವಾಗ ನಾನು ಹೋಗಿ ಊಟ ಉಣಬಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ. ಊಟ ಸ್ವೀಕರಿಸುವಾಗ ಅವರ ಕಣ್ಣುಗಳಲ್ಲಿ ಕಾಣುವ ಆನಂದ ಮತ್ತು ಹೊಟ್ಟೆ ತುಂಬಿದ ನಂತರ ನೀಡುವ ಆರ್ಶೀವಾದವೇ ನಮಗೆ ಶ್ರೀರಕ್ಷೆ. ನಾನು ಆಧ್ಯಾತ್ಮಿಕವಾಗಿ ಮಾತನಾಡುತ್ತಿದ್ದೇನೆ ಎಂದು ಅಂದುಕೊಳ್ಳಬೇಡಿ. ಸನಾತನ ನಮ್ಮ ಪರಂಪರೆಯಲ್ಲಿ ನಾವು ನಂಬಿದ್ದೇ ಕಷ್ಟದಲ್ಲಿರುವವರ ಕಣ್ಣು ಒರೆಸುವ ಕಾಯಕ. ಅದೇ ನಮ್ಮ ಆರೋಗ್ಯಕ್ಕೆ ರಕ್ಷಾಕವಚ. ಹೀಗೆ ಪ್ರತಿ ಸಂಘಟನೆಯವರು ಮಾಡುವ ಮೂಲಕ ನಾವು ನೊಂದ ಮನಸ್ಸುಗಳಲ್ಲಿ ಚೈತನ್ಯ ತುಂಬಬಹುದು. ಹಾಗೆ ನಾವು ಆಹಾರ ಹಂಚುತ್ತಾ ವಾಹನದಲ್ಲಿ ಹೋಗುವಾಗ ಮಧ್ಯಾಹ್ನ ಹಾಗೂ ರಾತ್ರಿಯ ಸಮಯದಲ್ಲಿ ಒಂದು ವಿಷಯ ಗಮನಿಸಿದ್ದೇನೆ. ಬಹಳಷ್ಟು ಯುವಕರು ತಮ್ಮ ಬೈಕುಗಳಲ್ಲಿ, ಕಾರುಗಳಲ್ಲಿ ತಮ್ಮ ಪಾಡಿಗೆ ಸುತ್ತಾಡುತ್ತಿದ್ದಾರೆ. ಇಲ್ಲಿ ವಿಷಯ ಏನೆಂದರೆ ಮಂಗಳೂರಿನಲ್ಲಿ ಪ್ರಜ್ಞಾವಂತರು ಇರುವುದರಿಂದ ಅವರು ಕೊರೊನಾ ಗಂಭೀರತೆಯನ್ನು ಅರ್ಥ ಮಾಡಿಕೊಂಡಿರುತ್ತಾರೆ ಮತ್ತು ಸರಕಾರದ ನಿಯಮಗಳನ್ನು ಪಾಲಿಸುತ್ತಾರೆ ಎನ್ನುವುದು ಪೊಲೀಸ್ ಕಮೀಷನರ್ ಅವರ ಅಭಿಪ್ರಾಯ. ಅದಕ್ಕಾಗಿ ಅವರು ಸುಖಾಸುಮ್ಮನೆ ಲಾಠಿ ಬೀಸುವುದು ಬೇಡಾ. ಚೆಂದ ಮಾಡಿ ಬುದ್ಧಿ ಹೇಳೋಣ ಎಂದು ಅಂದುಕೊಂಡಿರಬಹುದು. ಆದರೆ ಕೆಲವು ಕಪಿಚೇಷ್ಟೆ ಮಾಡುವವರಿಗೆ ಒಂದು ಸಲ ಹೊರಗೆ ಸುತ್ತಾಡುವಾಗ ಯಾರೂ ಕೇಳುವುದಿಲ್ಲವೋ ಅವರು ತಮ್ಮ ಒರಗೆಯ ಗೆಳೆಯರಿಗೆ ಹೇಳುತ್ತಾರೆ. ಮರುದಿನ ಎರಡು ಬೈಕ್ ಹೊರಗೆ ಬೀಳುತ್ತವೆ. ಆಗಲೂ ಯಾರೂ ಕೇಳುವುದಿಲ್ಲವೋ ಮೂರನೇ ಬೈಕ್ ಕೊನೆಗೆ ಆ ಏರಿಯಾದ ಎಲ್ಲ ಬೈಕ್ ಗಳು ರಸ್ತೆಯಲ್ಲಿ ಇರುತ್ತವೆ. ಪೊಲೀಸರು ಲಾಠಿ ಬೀಸಿದರೆ ಅದನ್ನೇ ಸುದ್ದಿ ಮಾಡುವ ಸಾಮಾಜಿಕ ಜಾಲತಾಣಗಳು ಅನಗತ್ಯವಾಗಿ ಓಡಾಡುವವರಿಗೆ ಕೇಳುವುದಿಲ್ಲ. ನಾನು ಹೇಳುವುದೇನೆಂದರೆ ಅನಗತ್ಯ ಓಡಾಡುವವರನ್ನು ನಿಲ್ಲಿಸಿ ಅವರ ಮೊಬೈಲನ್ನು ಮೊದಲು ವಶಕ್ಕೆ ತೆಗೆದುಕೊಳ್ಳಬೇಕು. ಅದರ ನಂತರ ಪಕ್ಕದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಬೇಕು. ಅಲ್ಲಿ ಹೊರ ಆವರಣದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿ ದೂರ ದೂರ ಕುಳ್ಳಿರಿಸಬೇಕು. ರಾತ್ರಿ ನುಸಿಗಳೊಂದಿಗೆ ನಾಲ್ಕು ಗಂಟೆ ಕುಳಿತುಕೊಂಡರೆ ಈ ಜನ್ಮದಲ್ಲಿ ಅನಗತ್ಯವಾಗಿ ಹೊರಗೆ ಬರಲು ಯಾರೂ ಒಪ್ಪುವುದಿಲ್ಲ. ಅದೇ ಅವನ ಫೋನ್ ಅವನ ಕಿಸೆಯಲ್ಲಿಯೇ ಇದ್ದರೆ ಅವನು ತನ್ನ ಕಾರ್ಪೋರೇಟರ್ ನಿಂದ ಮಿನಿಸ್ಟರ್ ತನಕ ಪ್ರತಿಯೊಬ್ಬರಿಗೂ ಫೋನ್ ಮಾಡುತ್ತಾನೆ. ಅದಕ್ಕೆ ಫೋನ್ ಅವನ ಬಳಿ ಇರುವುದು ಬೇಡಾ. ನಂತರ ಅವನಿಗೆ ಐನೂರೋ, ಸಾವಿರವೋ ದಂಡವೋ ಹಾಕಿ ಬಿಡಬಹುದು. ಬೈಕ್ ಲಾಕ್ ಡೌನ್ ನಂತರ ಕೊಡುತ್ತೇವೆ ಎಂದು ಹೇಳಿ ಕಳುಹಿಸಿಬಿಡಬಹುದು. ಅಂತವರಿಗೆ ಹೊಡೆದರೆ ಕೆಲವು ದಿನಗಳ ನಂತರ ಲಾಠಿ ಪೆಟ್ಟಿನ ನೋವು ಮರೆತುಹೋಗಬಹುದು. ದಂಡದ ನೆನಪು ಬರದೇ ಇರಬಹುದು. ಆದರೆ ಠಾಣೆಯ ಹೊರಗೆ ನುಸಿಯೊಂದಿಗೆ ಕಳೆದ ನಾಲ್ಕು ಗಂಟೆ ನೆನಪಿನಲ್ಲಿ ಉಳಿಯುತ್ತೆ. ಅದನ್ನು ಅವನು ಮರುದಿನ ಗೆಳೆಯರೊಂದಿಗೆ ಹಂಚಿಕೊಳ್ಳುತ್ತಾನೆ. ರಸ್ತೆಯಲ್ಲಿ ಹತ್ತು ಇದ್ದ ಬೈಕುಗಳು ರಪ್ಪನೆ ನಾಲ್ಕಕ್ಕೆ ಬಂದು ಇಳಿಯುತ್ತದೆ. ನಂತರ ಯಾರು ಹೊರಗೆ ಬರುವ ಧೈರ್ಯ ಮಾಡುವುದಿಲ್ಲ. ಗಾಂಧಿಗಿರಿಯೊಂದಿಗೆ ಪೊಲೀಸರು ಹೀಗೆ ಮಾಡುವುದರಿಂದ ಹಾವು ಸಾಯದೇ ಕೋಲು ಮುರಿಯದೇ ಕೆಲಸ ಆಗುತ್ತದೆ!
Leave A Reply