• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರು ರಸ್ತೆಗಳು ತುಂಡರಿಸಿದ ಹಲಸಿನ ಹಣ್ಣಿನಂತೆ ಆಗಿದೆ!!

Hanumantha Kamath Posted On June 28, 2021


  • Share On Facebook
  • Tweet It

ಮಂಗಳೂರು ರಾಕೆಟ್ ವೇಗದಲ್ಲಿ ಬೆಳೆಯುತ್ತಿರುವ ನಗರ ಎಂದು ಹೆಮ್ಮೆಯಿಂದ ಮಾಧ್ಯಮಗಳು ಬರೆಯುತ್ತಿದ್ದವು. ನಾನು ಅನೇಕ ಕಡೆ ರಾಜಕಾರಣಿಗಳು ಹೇಳುತ್ತಿರುವುದು ಕೇಳಿದ್ದೇನೆ. ಅದೃಷ್ಟವಶಾತ್ ಮಂಗಳೂರಿಗೆ ದೇವರು ಕೂಡ ಭರಪೂರವಾಗಿ ಏನು ಬೇಕೋ ಎಲ್ಲವನ್ನು ಕರುಣಿಸಿದ್ದಾನೆ. ಭೂಸಾರಿಗೆ, ರೈಲ್ವೆ ಸಾರಿಗೆ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ರಾಜ್ಯದ ಏಕೈಕ ಬಂದರು ನಗರಿ ಎನ್ನುವುದು ಮಂಗಳೂರಿಗಿರುವ ಹೆಗ್ಗಳಿಕೆ. ಉನ್ನತ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಬ್ಯಾಕಿಂಗ್ ಎಲ್ಲವೂ ಇರುವ ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಕೂಡ ಬಂತು ಎಂದ ಕೂಡಲೇ ಸ್ವರ್ಗಕ್ಕೆ ಕಿಚ್ಚು ಹಚ್ಚುವುದು ಮಾತ್ರ ಬಾಕಿ ಉಳಿದಿತ್ತು. ಮೋದಿಯವರು ಸ್ಮಾರ್ಟ್ ಸಿಟಿ ಯೋಜನೆ ಘೋಷಿಸಿದಾಗ ಮೊದಲ ಹಂತದಲ್ಲಿ ಅದು ಮಂಗಳೂರಿಗೆ ಬಂದಿರಲಿಲ್ಲ. ಬರಲಿಲ್ಲ ಎಂದ ಕೂಡಲೇ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಯ ಮುಖಂಡರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಹಾಕುತ್ತಾ ಅದನ್ನೇ ದೊಡ್ಡ ರಾಡಿ ಎಬ್ಬಿಸಿಬಿಟ್ಟರು. ಸರಿ, ಎರಡನೇಯ ಪಟ್ಟಿ ಘೋಷಣೆ ಆದಾಗ ಪುಣ್ಯಕ್ಕೆ ಮಂಗಳೂರಿನ ಹೆಸರು ಇತ್ತು.

ಈ ಬಾರಿ ಸ್ಮಾರ್ಟ್ ಸಿಟಿ ತಂದದ್ದು ನಾವೇ ಎಂದು ತೋರಿಸಿಕೊಳ್ಳುವ ನಿಟ್ಟಿನಲ್ಲಿ ಎರಡೂ ಪಕ್ಷಗಳು ಮತ್ತೊಮ್ಮೆ ಫ್ಲೆಕ್ಸ್ ವಾರ್ ಶುರು ಮಾಡಿದವು. ಒಟ್ಟಿನಲ್ಲಿ ಸ್ಮಾರ್ಟ್ ಸಿಟಿಗೆ ಅದರದ್ದೇ ಆಗಿರುವ ಮಾನದಂಡಗಳ ಮೂಲಕವೇ ಅದು ಸಿಗುತ್ತೆ ಎಂದು ಜನರಿಗೆ ಗೊತ್ತಿದ್ದರೂ ಈ ಕ್ರೆಡಿಟ್ ತೆಗೆದುಕೊಳ್ಳುವ ರಾಜಕೀಯ ಪಕ್ಷಗಳ ಜಿದ್ದನ್ನು ಮಂಗಳೂರಿನ ಬುದ್ಧಿವಂತ ಮತದಾರ ಮನಸ್ಸಿನೊಳಗೆ ನಗುತ್ತಾ ನೋಡುತ್ತಿದ್ದ. ನಾವು ತಂದದ್ದು, ನಾವು ತಂದದ್ದು ಎಂದು ಟಿವಿ ಡಿಬೇಟ್ ಗಳಿಂದ ಹಿಡಿದು ಸುದ್ದಿಗೋಷ್ಟಿಗಳನ್ನು ಮಾಡುವುದನ್ನು ಸೇರಿಸಿ ಫ್ಲೆಕ್ಸ್ ಗಳನ್ನು ಊರಿನ ತುಂಬೆಲ್ಲ ಹಾಕುವ ತನಕ ಇದು ನಡೆದದ್ದೇ ನಡೆದದ್ದು. ನಾಗರಿಕರಿಗೆ ಸ್ಮಾರ್ಟ್ ಸಿಟಿಯಿಂದ ಮಂಗಳೂರು ಸ್ವರ್ಗವಾಗುತ್ತೆ ಎನ್ನುವ ಕಲ್ಪನೆ ಶುರುವಾಗಿತ್ತು. ದಿನಗಳು ಉರುಳಿದವು. ಸ್ಮಾರ್ಟ್ ಸಿಟಿ ಎರಡೂ ಪಕ್ಷಗಳಿಗೂ ಮರೆತುಹೋಯಿತು. ಸ್ಮಾರ್ಟ್ ಸಿಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತರುವುದಕ್ಕಾಗಿ ಒಂದು ಮಂಡಳಿ ಎಂದು ಇರುತ್ತದೆ. ಆ ಮಂಡಳಿಗಳಲ್ಲಿ ಐಎಎಸ್ ಅಧಿಕಾರಿಗಳು ಮತ್ತು ನಮ್ಮ ಪಾಲಿಕೆಯ ಮೇಯರ್ ಮತ್ತು ವಿಪಕ್ಷದ ಒಬ್ಬರು ಮುಖಂಡರೂ ಇರುತ್ತಾರೆ. ಇವರೆಲ್ಲ ಸೇರಿ ಮಂಗಳೂರಿಗೆ ಮೊದಲು ಮಾಡಿದ್ದು ಒಂದು ಕೋಟಿ ಖರ್ಚು ಮಾಡಿ ಯಾರಿಗೂ ಬೇಡವಾಗಿದ್ದ ಗಡಿಯಾರ ಗೋಪುರ.

ಆ ಬಳಿಕ ಒಂದೊಂದು ಸ್ಮಾರ್ಟ್ ಬಸ್ ಸ್ಟಾಪ್ ಗಳನ್ನು ಮಾಡಿದರಲ್ಲ, ಆಗ ಇದರಲ್ಲಿ ಭ್ರಷ್ಟಾಚಾರದ ವಾಸನೆ ಜನರಿಗೆ ಹೊಡೆಯಲು ಶುರುವಾಯಿತು. ನರಪೇತಲದಂತೆ ಇರುವ ಬಸ್ ಸ್ಟಾಪಿಗೆ ಹದಿನೈದು, ಇಪ್ಪತ್ತು ಲಕ್ಷ ರೂಪಾಯಿಗಳು ಎಂದು ಬಿಲ್ ಆದವಲ್ಲ, ಜನರಿಗೆ ವಿಷಯ ಗ್ಯಾರಂಟಿಯಾಯಿತು. ಅಲ್ಲಿ ತನಕ ಹೇಗೋ ಸ್ಮಾರ್ಟ್ ಸಿಟಿ ಮಂಡಳಿ ಮ್ಯಾನೇಜ್ ಮಾಡುತ್ತಾ ಬರುತ್ತಿತ್ತು. ಆದರೆ ಯಾವಾಗ ಇವರ ತೂಕಡಿಕೆಯಿಂದ ಅನುದಾನ ಹಿಂದಕ್ಕೆ ಹೋಗುತ್ತದೆ ಎನ್ನುವ ವಾತಾವರಣ ನಿರ್ಮಾಣವಾಯಿತಲ್ಲ, ಆಗ ಏಳು ತಿಂಗಳಿಗೆ ಹುಟ್ಟಿದವರಂತೆ ಇವರು ರಸ್ತೆಗಳಿಗೆ ಕೈ ಹಾಕಿದರು. ಒಂದೇ ಸ್ಥಳಕ್ಕೆ ಇವರು ಬಂದರು ಪ್ರದೇಶದ ಎಲ್ಲಾ ರಸ್ತೆಗಳನ್ನು ಆಪರೇಶನ್ ಮಾಡಲು ನಿಂತರಲ್ಲ, ಮೊದಲ ಬಾರಿಗೆ ಇವರಿಗೆ ತಲೆಯೂ ಇಲ್ಲ ಎಂದು ಸಾಬೀತಾಯಿತು. ನಾಲ್ಕೈದು ಕಾಯಿಲೆಗಳಿಂದ ಬಳಲುತ್ತಿರುವ ಒಬ್ಬ ರೋಗಿ ಆಪರೇಶನ್ ಥಿಯೇಟರ್ ನಲ್ಲಿ ಮಲಗಿರುವಾಗ ಏಕಕಾಲಕ್ಕೆ ಕಣ್ಣಿನ, ಹೃದಯದ ಮತ್ತು ಕಿಡ್ನಿಯ ವೈದ್ಯರು ಎಲ್ಲರೂ ಸೇರಿ ಒಮ್ಮೆಲೇ ಆಪರೇಶನ್ ಮಾಡಲು ಹೋಗುವುದಿಲ್ಲ. ಬಂದರು ಪ್ರದೇಶದಲ್ಲಿ ಕೂಡ ಒಂದು ರಸ್ತೆಯನ್ನು ಅಭಿವೃದ್ಧಿ ಮಾಡಿ ಇನ್ನೊಂದಕ್ಕೆ ಕೈಹಾಕಿದರೆ ತುಂಬಾ ಉತ್ತಮವಿತ್ತು. ಆದರೆ ಇವರು ಹಾಗೆ ಮಾಡಲಿಲ್ಲ. ಅದರ ಪರಿಣಾಮ ಏನಾಗಿದೆ ಎನ್ನುವುದನ್ನು ಬಂದರು ಏರಿಯಾಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ಮಾರುವೇಷದಲ್ಲಿ ಬಿಜೆಪಿ ಮುಖಂಡರು ಒಮ್ಮೆ ಹೋಗಿ ನೋಡಿ ಬರುವುದು ಒಳಿತು. ಪರಿಸ್ಥಿತಿ ಗೊತ್ತಾಗುತ್ತದೆ. ಇದು ಬಂದರು ವಾರ್ಡಿಗೆ ಮಾತ್ರ ಸೀಮಿತವಲ್ಲ.

ಮಂಗಳೂರು ನಗರದ ಬಹುತೇಕ ಕಡೆ ಸ್ಮಾರ್ಟ್ ಸಿಟಿ ಕೆಲಸಗಳು ನಡೆಯುತ್ತವೆ. ಲಾಕ್ ಡೌನ್ ಇರುವಾಗಲೇ ಸಮರೋಪಾದಿಯಲ್ಲಿ ಮುಗಿಸಬೇಕಾಗಿದ್ದ ಕಾರ್ಯಗಳು ಇನ್ನೊಂದೆರಡು ತಿಂಗಳು ಲಾಕ್ ಡೌನ್ ಇದ್ದರೂ ಮುಗಿಯದು ಎನ್ನುವ ಲೆವೆಲ್ಲಿಗೆ ಬಂದಿದೆ. ಹಲಸಿನ ಹಣ್ಣು ತುಂಡು ಮಾಡಿ ತೆರೆದಿಟ್ಟರೆ ಹೇಗೆ ಆಗುತ್ತೆ ಆ ಪರಿಸ್ಥಿತಿಯಲ್ಲಿ ಮಂಗಳೂರು ಇದೆ. ಹೆಣ್ಣಿನ ಬಸಿರು ಮತ್ತು ತೆರೆದಿಟ್ಟ ಹಲಸು ತುಂಬಾ ದಿನ ಗುಪ್ತವಾಗಿ ಇಡಲು ಆಗಲ್ಲ ಎನ್ನುವ ಮಾತಿದೆ. ಇದು ಕೂಡ ಹಾಗೆ. ಅಗೆದ ರಸ್ತೆಯನ್ನು ತುಂಬಾ ದಿನ ತೆರೆದಿಟ್ಟರೆ ಸಿಗುವುದು ಶಾಪ ಮಾತ್ರ. ಈಗ ನಗರದ ಯಾವ ಭಾಗದಲ್ಲಿ ಹೋದರೂ ಅಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಆದ್ದರಿಂದ ಜನರಿಗೆ ಈಗ ಸ್ಮಾರ್ಟ್ ಸಿಟಿ ಎನ್ನುವುದು ವರ ಅಲ್ಲ ಶಾಪದಂತೆ ಆಗಿದೆ. ಅಷ್ಟಕ್ಕೂ ಸ್ಮಾರ್ಟ್ ಸಿಟಿಯಿಂದ ಸರಿಯಾದದ್ದು ಎಂದರೆ ರಥಬೀದಿ ರಸ್ತೆ ಮಾತ್ರ. ಉಳಿದದ್ದು ಕುಂಟುತ್ತಾ ಸಾಗುತ್ತಿದೆ. ಹಾಗಾದರೆ ಸ್ಮಾರ್ಟ್ ಸಿಟಿ ಎಂದರೆ ರಸ್ತೆಯನ್ನು ಕಾಂಕ್ರೀಟಿಕರಣ ಮಾಡುವುದು ಮಾತ್ರವೇ? ಒಂದು ನಗರಕ್ಕೆ ಅಗತ್ಯವಾಗಿ ಬೇಕಾಗಿರುವುದು ಉತ್ತಮ ಮಾರುಕಟ್ಟೆ ಮತ್ತು ಸುಸಜ್ಜಿತ ಬಸ್ ನಿಲ್ದಾಣ. ಆದರೆ ಇವರಿಗೆ ರಸ್ತೆ ಕಾಂಕ್ರೀಟಿಕರಣ ಮಾಡುವುದೇ ಸ್ಮಾರ್ಟ್ ಸಿಟಿ ಎಂದಾದರೆ ಮುಂದಿನ ಒಂದೂವರೆ ವರ್ಷದಲ್ಲಿ ಅತ್ತ ಬಸ್ ನಿಲ್ದಾಣ, ಸೆಂಟ್ರಲ್ ಮಾರುಕಟ್ಟೆ ಕೂಡ ಆಗದೇ ಇತ್ತ ರಸ್ತೆಗಳ ಕಾಂಕ್ರೀಟಿಕರಣವೂ ಆಗದೇ ಹೋದರೆ, ಏನಾಗುತ್ತದೆ? ಗೊತ್ತಿದ್ದವರಿಗೆ ಗೊತ್ತಿರುತ್ತದೆ!

  • Share On Facebook
  • Tweet It


- Advertisement -


Trending Now
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
Hanumantha Kamath September 15, 2023
ಅಂದು ಸಿದ್ದು, ಇಂದು ಹರಿ!
Hanumantha Kamath September 15, 2023
Leave A Reply

  • Recent Posts

    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
    • ಚೈತ್ರಾ ಕುಂದಾಪುರ ಬಂಧನದ ಹಿಂದಿನ ಕಥೆ ಏನು?
    • ಸನಾತನಿಗಳು ಅನಕ್ಷರಸ್ಥರು ಮತ್ತು ಮೂರ್ಖರಂತೆ!
  • Popular Posts

    • 1
      ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • 2
      ಅಂದು ಸಿದ್ದು, ಇಂದು ಹರಿ!
    • 3
      ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search