ಬಿಜೆಪಿ ಬಂದ ಮೇಲೆ ಪಾಲಿಕೆಯಲ್ಲಿ ಕಿರುಕುಳ ಕಮ್ಮಿ ಆಗಿಲ್ಲ, ಯಾಕೆ?
ಲಾಲ್ ಭಾಗಿನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ನೆಲ ಅಂತಸ್ತಿನಲ್ಲಿ ಕಾರ್ಪೋರೇಶನ್ ಬ್ಯಾಂಕಿನ ಬ್ರಾಂಚಿದೆ. ಹಿಂದೆ ಜನಸಾಮಾನ್ಯರು ಯಾವುದೇ ತೆರಿಗೆ, ಬಿಲ್, ಉದ್ದಿಮೆ ಪರವಾನಿಗೆಗೆ ಸಂಬಂಧಪಟ್ಟ ಯಾವುದೇ ಮೊಬಲಗನ್ನು ಅಲ್ಲಿಯೇ ಚಲನ್ ಕಟ್ಟುತ್ತಿದ್ದರು. ಯಾವುದೇ ಸಮಸ್ಯೆಯಿಲ್ಲದೆ ನಿರಾಂತಕವಾಗಿ ವ್ಯವಹಾರಗಳು ನಡೆಯುತ್ತಿತ್ತು. ನಂತರ ಅದೇ ಕಟ್ಟಡದಲ್ಲಿ ಇದೇ ಕಾರ್ಪೋರೇಶನ್ ಬ್ಯಾಂಕಿನ ಅಂತಸ್ತಿನಲ್ಲಿ ಕೆನರಾ ಬ್ಯಾಂಕಿನ ಒಂದು ಬ್ರಾಂಚ್ ಬಂತು. ಅಲ್ಲಿ ಮನೆ ತೆರಿಗೆ, ನೀರಿನ ಬಿಲ್, ಟ್ರೇಡ್ ಲೈಸೆನ್ಸ್ ಗೆ ಸಂಬಂಧಪಟ್ಟ ಚಲನ್ ಕಟ್ಟಲು ಆರಂಭವಾಯಿತು. ಇದು ಬೇರೆ ಬ್ರಾಂಚಿನ ತರಹ ಅಲ್ಲದೇ ಕೇವಲ ಪಾಲಿಕೆಗೆ ಸಂಬಂಧಪಟ್ಟ ಜನಸಾಮಾನ್ಯರ ಕೆಲಸಗಳಿಗೆ ಮಾತ್ರ ಸೀಮಿತವಾದ ಬ್ರಾಂಚ್ ಆಗಿತ್ತು. ಈಗ ಕೊರೊನಾ ಅವಧಿ. ಈ ಕೆನರಾ ಬ್ಯಾಂಕಿನ ಮನಪಾ ಬ್ರಾಂಚಿನವರು ಹೊಸ ವರಸೆ ಶುರು ಮಾಡಿಕೊಂಡಿದ್ದಾರೆ. ಅದೇನೆಂದರೆ ನಾವು ಚೆಕ್ ಮಾತ್ರ ತೆಗೆದುಕೊಳ್ಳುತ್ತೇವೆ. ಕ್ಯಾಶ್ ಮುಟ್ಟುವುದಿಲ್ಲ. ಇದೇ ಈಗ ಸಮಸ್ಯೆಗೆ ಕಾರಣವಾಗಿರುವುದು. ಅದೇನೆಂದರೆ ಕೆನರಾ ಬ್ಯಾಂಕಿನ ಬೇರೆ ಬ್ರಾಂಚಿನವರು ಕ್ಯಾಶ್ ತೆಗೆದುಕೊಳ್ಳುತ್ತಿದ್ದಾರೆ. ಹೆಚ್ಚೆಂದರೆ ನಿರ್ದಿಷ್ಟ ಮೊತ್ತದ ಮೇಲೆ ಮೂರು ರೂಪಾಯಿ ಹೆಚ್ಚು ತೆಗೆದುಕೊಳ್ಳುತ್ತಾರೆ ಬಿಟ್ಟರೆ ಕ್ಯಾಶ್ ಬೇಡವೇ ಬೇಡಾ ಎನ್ನುವುದಿಲ್ಲ. ಹಾಗಿರುವಾಗ ಪಾಲಿಕೆಯ ಕೆನರಾ ಬ್ಯಾಂಕಿಗೆ ಏನು ಹೊಸ ರೋಗ ಎನ್ನುವುದು ಈಗ ಎದ್ದಿರುವ ಪ್ರಶ್ನೆ. ಅದರೊಂದಿಗೆ ಇನ್ನೊಂದು ವಿಷಯ ಏನೆಂದರೆ ಪಾಲಿಕೆಯ ಕಟ್ಟಡದಲ್ಲಿ ಇರುವ ಕಾರ್ಪೋರೇಶನ್ ಬ್ಯಾಂಕಿನ ಬ್ರಾಂಚಿನಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ಅದರ ಪಕ್ಕದಲ್ಲಿಯೇ ಮತ್ತೊಂದು ಬ್ಯಾಂಕಿನ ಬ್ರಾಂಚ್ ತೆರೆಯುವ ಅವಶ್ಯಕತೆ ಏನಿತ್ತು. ಈಗ ಬ್ರಾಂಚ್ ತೆರೆದ ಮೇಲೆ ಅವರು ನಮ್ಮ ಕೆಲಸಗಳನ್ನು ಸುಲಭ ಮಾಡಲು ಇರುವುದೋ ನಮಗೆ ಪೀಡಿಸಲು ಇರುವುದೋ? ಅಲ್ಲಿ ಟ್ರೇಡ್ ಲೈಸೆನ್ಸ್ ನಗದು ತೆಗೆದುಕೊಳ್ಳುವುದಿಲ್ಲ ಎಂದಾದರೆ ವ್ಯಾಪಾರಸ್ಥರು ಎಲ್ಲಿಗೆ ಹೋಗಬೇಕು? ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದರೆಷ್ಟು? ಬಿಟ್ಟರೆಷ್ಟು? ಈ ಬಗ್ಗೆ ಸಂಬಂಧಪಟ್ಟವರು ತುರ್ತು ಕ್ರಮ ತೆಗೆದುಕೊಳ್ಳಬೇಕು.
ಇನ್ನೊಂದು ವಿಚಾರ ಏನೆಂದರೆ ಈ-ಖಾತಾ ಸಮಸ್ಯೆ ಇನ್ನೂ ಪಾಲಿಕೆಯಲ್ಲಿ ಪರಿಹಾರ ಕಾಣುತ್ತಿಲ್ಲ. ನಮ್ಮ ಪಾಲಿಕೆ ಪೇಪರ್ ಲೆಸ್ ಆಫೀಸ್ ಆಗಬೇಕೆಂಬ ಪ್ರಯತ್ನ ದಶಕಗಳ ಹಿಂದೆಯದ್ದು. ನಮ್ಮ ಪಾಲಿಕೆಯ ಉಪಕಚೇರಿಯೊಂದು ಸುರತ್ಕಲ್ ನಲ್ಲಿದೆ. ಅಲ್ಲಿ ಹಿಂದೆ ಕಂಪ್ಯೂಟರ್ ಗೆ ಗತಿಯಿರಲಿಲ್ಲ. ನಾನು ಪ್ರಯತ್ನ ಮಾಡಿ ಈಗ ಕಂಪ್ಯೂಟರ್ ಬಂದಿದೆ. ಅಷ್ಟರಮಟ್ಟಿಗೆ ಜನರ ಕೆಲಸಗಳು ಸುಲಭವಾಗಬಹುದು ಎನ್ನುವುದು ನಂಬಿಕೆಯಾಗಿತ್ತು. ಅಲ್ಲಿ ಕುಳಾಯಿಯ ನಿವಾಸಿಯೊಬ್ಬರು ಈ-ಖಾತಾಗೆ ಅರ್ಜಿ ಹಾಕಿ ಮೂರು ತಿಂಗಳಾಗುತ್ತಾ ಬಂತು. ಆದರೆ ಇಲ್ಲಿ ಈ-ಖಾತಾ ಮಾಡಿಸಲು ಬ್ರೋಕರ್ ಗಳ ಮೂಲಕ ಹೋದರೆ ಯಾವುದೇ ತೊಂದರೆ ಇಲ್ಲದೆ ಆಗುತ್ತದೆ. ಅದೇ ನೀವೆ ಹೋದರೆ ಅಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಹೊಸ ಹೊಸ ನಿಯಮಗಳನ್ನು ಹೇಳಿ ನಿಮಗೆ ಚಿಟ್ಟುಹಿಡಿಸುತ್ತಾರೆ. ಈಗ ಕುಳಾಯಿಯ ನಾಗರಿಕರೊಬ್ಬರ ಈ-ಖಾತಾ ತಡ ಮಾಡಿಸಲು ಉಪಕಚೇರಿಯಲ್ಲಿ ಹೇಳುತ್ತಿರುವ ಸಬೂಬು ಕೇಳಿ. ನೀವು ನಿಮ್ಮ ಮನೆಯ ಡೋರ್ ನಂಬರ್ ನಲ್ಲಿಯೇ ವಾಸವಾಗಿದ್ದೇನೆ ಎಂದು ರುಜುವಾತುಪಡಿಸಲು ಅಫಿದಾವಿತ್ ಮಾಡಿಸಿ ತನ್ನಿ ಎಂದು ಹೇಳಿದ್ದಾರೆ. ಈಗ ನಿಮ್ಮ ಅಜ್ಜನ ಹೆಸರಿನ ಮನೆ ನಿಮ್ಮ ತಂದೆಗೆ ಬಂದು ನಂತರ ನಿಮ್ಮ ಹೆಸರಿನಲ್ಲಿ ಆರ್ ಟಿಸಿ ಕೂಡ ಆಗಿ ನೀವು ಅಲ್ಲಿಯೇ ವಾಸ ಮಾಡಿಕೊಂಡಿರುತ್ತಿರಿ ಎಂದು ಇಟ್ಟುಕೊಳ್ಳೋಣ. ಈಗ ಅದಕ್ಕೆ ಈಗ ಈ-ಖಾತಾ ಮಾಡಿಸಬೇಕಾದರೆ ಅಫಿದಾವಿತ್ ಯಾಕೆ? ಯಾವಾಗಲೂ ಹೊಸ ಹೊಸ ತಂತ್ರಜ್ಞಾನ ಬಂದಾಗ ನಮ್ಮ ಕೆಲಸಗಳು ಸುಲಭವಾಗಿ ಆಗಬೇಕೆ ವಿನ: ಅದು ಇನ್ನಷ್ಟು ಜಟಿಲವಾಗಬಾರದು. ಅಷ್ಟಕ್ಕೂ ಈ-ಖಾತಾ ಮಾಡಿಸುವುದು ಅಷ್ಟು ದೊಡ್ಡ ಕೆಲಸವೇ. ಆ ಸಿಸ್ಟಮ್ ಹೇಗೆ ನಡೆಯುತ್ತೇ ಎನ್ನುವುದರ ಉದಾಹರಣೆಯನ್ನು ನಿಮಗೆ ಹೇಳುತ್ತೇನೆ, ಕೇಳಿ. ಮೊದಲಿಗೆ ನೀವು ನಿಮ್ಮ ದಾಖಲೆಗಳನ್ನು ಅರ್ಜಿಯೊಂದಿಗೆ ಪಾಲಿಕೆಯಲ್ಲಿ ನೀಡುತ್ತೀರಿ. ಅದನ್ನು ಸ್ಕ್ಯಾನ್ ಮಾಡಿದ ಬಳಿಕ ಕೇಸ್ ವರ್ಕರ್ ಎಲ್ಲಾ ದಾಖಲೆಗಳನ್ನು ಆನ್ ಲೈನ್ ಮೂಲಕವೇ ತಮ್ಮ ಮೇಲಾಧಿಕಾರಿಗೆ ಕಳುಹಿಸುತ್ತಾರೆ. ಹಿಂದೆ ಹಾಗಿರಲಿಲ್ಲ. ಈಗ ಕೇಸ್ ವರ್ಕರ್ ನಿಂದ ಸೂಪರಿಟೆಂಡೆಂಟ್ ಅವರಿಗೆ ಹೋದ ಬಳಿಕ ಅವರು ಅದನ್ನು ಪರಿಶೀಲಿಸಿ ಕಂದಾಯ ನಿರೀಕ್ಷಕರಿಗೆ (ಆರ್ ಐ) ಅವರಿಗೆ ಕಳುಹಿಸಿಕೊಡುತ್ತಾರೆ. ಅಲ್ಲಿಂದ ಅದು ಸಹಾಯಕ ಕಂದಾಯ ಅಧಿಕಾರಿ (ಎಆರ್ ಓ) ಅವರಿಗೆ ಹೋಗುತ್ತದೆ. ಅಲ್ಲಿಂದ ಅವರು ಆರ್ ಒ ಅವರಿಗೆ ಕಳುಹಿಸಿಕೊಡುತ್ತಾರೆ. ಆರ್ ಒನಿಂದ ಕಂದಾಯ ಉಪಆಯುಕ್ತರಿಗೆ ಹೋಗುತ್ತದೆ. ನಂತರ ಈ-ಖಾತಾ ಆಗಿ ಅದು ಸಂಬಂಧಪಟ್ಟ ವ್ಯಕ್ತಿಗೆ ಸಿಗುತ್ತದೆ. ಆದರೆ ಇದೆಲ್ಲ ಮಾಡಲು “ಇಂಧನ” ಬೇಕಾಗುತ್ತದೆ. ಅದು ಬ್ರೋಕರ್ ಬಂದ್ರೆ ಮಾತ್ರ ಸಿಗುತ್ತದೆ. ಆದ್ದರಿಂದ ನೀವೆ ನೇರವಾಗಿ ಹೋದರೆ ಹತ್ತಾರು ರೂಲ್ಸ್ ನಿಮಗೆ ಹೇಳಿ ಓಡಿಸಲಾಗುತ್ತದೆ. ಯಾವುದೇ ಅರ್ಜಿ ಸೀನಿಯಾರಿಟಿ ಮೇಲೆಯೇ ವಿಲೇವಾರಿ ಆಗಬೇಕು ಎಂದು ಮೇಯರ್ ಅವರು ಸ್ಪಷ್ಟವಾಗಿ ಎಲ್ಲಾ ವಿಭಾಗಗಳಿಗೆ ಸೂಚನೆ ನೀಡಬೇಕು. ಆಗ ಮಾತ್ರ ಜನರು ನೆಮ್ಮದಿಯಿಂದ ಪಾಲಿಕೆಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದು. ಇನ್ನು ಕೆಎಂಸಿ ಆಕ್ಟ್ 1976 ಪ್ರಕಾರ ಅದರಲ್ಲಿ ನಮೂದಿಸಿದ ದಾಖಲೆಗಳನ್ನು ಬಿಟ್ಟು ಅಧಿಕಾರಿಗಳು ಅಗತ್ಯ ಇಲ್ಲದ್ದನ್ನು ಕೇಳುವ ಅವಶ್ಯಕತೆ ಇಲ್ಲ. ಈ ಭಾರತೀಯ ಜನತಾ ಪಾರ್ಟಿಯ ಆಡಳಿತ ಪಾಲಿಕೆಯಲ್ಲಿ ಬಂದ ಬಳಿಕ ಅತೀ ಬುದ್ಧಿವಂತರಿಂದ, ಹೆಚ್ಚು ಜ್ಞಾನವಂತರಿಂದ ಜನರಿಗೆ ಕಿರುಕುಳ ಜಾಸ್ತಿಯಾಗುತ್ತಿದೆ ಎಂದೆನಿಸುತ್ತಿದೆ!
Leave A Reply