ಆಂಟೋನಿ ಮಂಗಳೂರಿನ ಸ್ವಚ್ಚತೆಯಲ್ಲಿ ಆಡಿದ್ದೇ ಆಟ!
ಮಂಗಳೂರಿನಲ್ಲಿ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎನ್ನುವ ಗಾದೆ ಮಂಗಳೂರು ಮಹಾನಗರ ಪಾಲಿಕೆಗೆ ಸರಿಯಾಗಿ ಅನ್ವಯಿಸುತ್ತದೆ. ಮಂಗಳೂರು ಪಾಲಿಕೆಗೂ ತ್ಯಾಜ್ಯ ತಿನ್ನುವುದು ಎಂದರೆ ಇಷ್ಟ, ಆಂಟೋನಿಗೂ ಪಾಲಿಕೆಗೆ ತ್ಯಾಜ್ಯ ತಿನ್ನಿಸುವುದು ಎಂದರೆ ಇಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಲಿಕೆಯಲ್ಲಿ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ಎಂಬ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಯ ಜವಾಬ್ದಾರಿಯನ್ನು ಕಳೆದ ಏಳೆಂಟು ವರ್ಷಗಳಿಂದ ನೋಡಿಕೊಂಡು ಬರುತ್ತಿರುವ ಸಂಸ್ಥೆ ಇದೆ. ಈ ಬಿಳಿಯಾನೆಯನ್ನು ಸಾಕಿ ಸಾಕಿ ಸುಸ್ತಾಗಿರುವ ಪಾಲಿಕೆಗೆ ಮಂಗಳೂರಿನ ನಾಗರಿಕರಿಗಾಗಿ ಸರಿಯಾದ ತ್ಯಾಜ್ಯ ಸಂಗ್ರಹದ ವ್ಯವಸ್ಥೆಯನ್ನು ಮಾಡಲಾಗುತ್ತಿಲ್ಲ. ಇದಕ್ಕೆ ಹಿಂದಿನ ಕಾಂಗ್ರೆಸ್ ಆಡಳಿತ ಹಾಗೂ ಈಗಿನ ಭಾರತೀಯ ಜನತಾ ಪಾರ್ಟಿಯ ಆಡಳಿತ ಎರಡೂ ಕೂಡ ಸಮಾನವಾಗಿ ಬಾಧ್ಯಸ್ಥರಾಗಿರುತ್ತಾರೆ. ಕಾಂಗ್ರೆಸ್ಸಿನ ಮಾಜಿ ಶಾಸಕರುಗಳಿಗೂ ಮತ್ತು ಬಿಜೆಪಿಯ ಹಾಲಿ ಶಾಸಕರುಗಳಿಗೂ ಆಂಟೋನಿಯನ್ನು ಇಲ್ಲಿಂದ ಓಡಿಸಲು ಸಾಧ್ಯವಾಗಿಲ್ಲ. ಆಂಟೋನಿಗೂ ಇವರ ವಿಕ್ ನೆಸ್ ಗೊತ್ತಾಗುತ್ತಿದ್ದಂತೆ ಅದು ಕೂಡ ಪಾಲಿಕೆಯ ಹೆಗಲ ಮೇಲೆ ಕುಳಿತುಕೊಂಡು ತಲೆಯ ಮೇಲೆ ತಮಟೆ ಬಾರಿಸುತ್ತಿದೆ. ಏಳು ವರ್ಷಗಳ ಗುತ್ತಿಗೆಯನ್ನು ವಹಿಸಿಕೊಂಡ ಆಂಟೋನಿ ಆರಂಭದಿಂದಲೂ ನಗರದ ಸ್ವಚ್ಚತೆಯ ಕಾರ್ಯದಲ್ಲಿ ಉತ್ತಮ ಕೆಲಸ ನಿರ್ವಹಿಸುವ ಬದಲು ಪಾಲಿಕೆಯ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಹೇಗೆ “ಚೆನ್ನಾಗಿ” ಇಟ್ಟುಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿಯೇ ಇತ್ತು.
ರಾಮಕೃಷ್ಣ ಮಿಶನ್ ಹಿಂದೆ ಸರಿದದ್ದು ಇವರಿಗೆ ಖುಷಿ!
ನಗರದಲ್ಲಿ ಸರಿಯಾಗಿ ಗುಡಿಸಬೇಕಾದ ರಸ್ತೆಗಳನ್ನು ಗುಡಿಸದೇ, ಒಂದು ಮೀಟರ್ ಅಗಲದ ತೋಡುಗಳ ಹೂಳು ತೆಗೆಯದೇ, ಡಿವೈಡರ್ , ಫುಟ್ ಪಾತ್ ಗಳಲ್ಲಿ ತುಂಬಿಕೊಂಡ ಮರಳು, ಮಣ್ಣು, ಮಸಿಗಳನ್ನು ಕ್ಲೀನ್ ಮಾಡದೇ, ತ್ಯಾಜ್ಯ ಸಂಗ್ರಹಣೆಯಲ್ಲಿಯೂ ನಾಯಿಗಳು ತ್ಯಾಜ್ಯದ ತೊಟ್ಟೆಯನ್ನು ಚಿಂದಿ ಚಿತ್ರಾನ್ನ ಮಾಡುವ ಪರಿಸ್ಥಿತಿಯನ್ನು ಈ ಸಂಸ್ಥೆ ಮಾಡಿತ್ತು. ಆದರೂ ಪಾಪ, ಆಂಟೋನಿಯ ತ್ಯಾಜ್ಯ ಚರಂಡಿಗಳಿಗಿಂತ ಕಾರ್ಪೋರೇಟರ್ ಗಳ, ಅಧಿಕಾರಿಗಳ ಬಾಯಲ್ಲಿ ಕಡಬಿನಂತೆ ತುಂಬಿಕೊಂಡಿದ್ದ ಕಾರಣ ಯಾರೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಂಟೋನಿ ಸಂಸ್ಥೆ ಸರಿಯಾಗಿ ನಿಯಮವನ್ನು ಅನುಸರಿಸದಿದ್ದರೂ, ಸಮರ್ಪಕವಾಗಿ ಏನೂ ಕೆಲಸ ಮಾಡದಿದ್ದರೂ ಮನಪಾ ಸದಸ್ಯರಲ್ಲಿ ಯಾರೂ ಆಂಟೋನಿಯ ವಿರುದ್ಧ ಮಾತನಾಡಿಲ್ಲ. ಕಾಂಗ್ರೆಸ್, ಬಿಜೆಪಿ ಸದಸ್ಯರು ಲಿಖಿತ ದೂರನ್ನು ನೀಡದೇ ಇದ್ದ ಕಾರಣ ಯಾವ ಆಯುಕ್ತರು ಬಂದರೂ ಕೂಡ ಏನೂ ಮಾಡಲಾಗುತ್ತಿಲ್ಲ.
ಆಂಟೋನಿಯ ಏಳು ವರ್ಷದ ಗುತ್ತಿಗೆ ಮುಗಿದು ಮತ್ತೆ ಅದನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿತ್ತು. ಅವರಿಗೆ ಒಂದು ವರ್ಷ ಗುತ್ತಿಗೆ ವಿಸ್ತರಿಸಿದ ಪಾಲಿಕೆ ನಂತರ ನಿದ್ರೆಗೆ ಜಾರಿತು. ಇವರು ಏಳುವಾಗ ಅವಧಿ ಮುಗಿಯಲು ಕೆಲವೇ ದಿನಗಳಿದ್ದವು. ಅದಕ್ಕಾಗಿ ಮತ್ತೆ ಆರು ತಿಂಗಳು ಗುತ್ತಿಗೆ ವಿಸ್ತರಿಸಿ ಪಾಲಿಕೆಯ ಮೇಯರ್ ಮಲಗಲು ಹೋದರು. ಅದರ ಬಳಿಕ ಮತ್ತೆ ಮೂರು ತಿಂಗಳು ವಿಸ್ತರಣೆ. ಹೀಗೆ ನಡೆಯುತ್ತಿದೆ. ಈ ನಡುವೆ ರಾಮಕೃಷ್ಣ ಮಿಶನ್ ಅವರು ನಗರದ ಸ್ವಚ್ಚತೆಯ ಜಜವಾಬ್ದಾರಿಯನ್ನು ವಹಿಸಲು ಮುಂದೆ ಬಂದರು. ಒಂದು ಡಿಪಿಆರ್ ಮಾಡಿ ಕಳುಹಿಸಲಾಯಿತು. ನಂತರ ಬಿಜೆಪಿ ಸರಕಾರ ಇದ್ದಾಗ ಮತ್ತೊಂದು ಡಿಪಿಆರ್ ಸಿದ್ಧಪಡಿಸಿ ಕಳುಹಿಸಲಾಯಿತು. ಕೊನೆಗೆ ಎರಡೆರಡು ಡಿಪಿಆರ್ ಆಗಲ್ಲ, ಒಂದೇ ಮಾಡಿಕಳುಹಿಸಿಕೊಡಿ ಎಂದು ಸರಕಾರದ ನಗರಾಭಿವೃದ್ಧಿ ಇಲಾಖೆಯಿಂದ ಸೂಚನೆ ಬಂತು. ಕೊನೆಗೆ ಒಂದೇ ಡಿಪಿಆರ್ ಸಿದ್ಧಪಡಿಸಲಾಯಿತು. ಆದರೆ ಅದಕ್ಕೆ ರಾಮಕೃಷ್ಣ ಮಿಶನ್ ಅವರು ಒಪ್ಪಲಿಲ್ಲ. ಅವರು ನಗರದ ಸ್ವಚ್ಚತಾ ಹೊಣೆಯನ್ನು ವಹಿಸಿಕೊಳ್ಳಲು ಹಿಂಜರಿದರು. ಪಾಲಿಕೆಗೂ ಅದೇ ಬೇಕಾಗಿತ್ತು.
ಆಂಟೋನಿ ಬ್ಲ್ಯಾಕ್ ಮೇಲ್!
ಇದೆಲ್ಲವೂ ನಡೆಯುತ್ತಿರುವಾಗ ಆಂಟೋನಿಗೆ ಒಂದು ವಿಷಯ ಗ್ಯಾರಂಟಿಯಾಯಿತು. ಮಂಗಳೂರಿಗೆ ನಾವೇ ಗತಿ ಎಂಬ ಅಹಂಕಾರ ಅವರ ಮನಸ್ಸಿನಲ್ಲಿ ದೃಢವಾಯಿತು. ಅವರು ಪರೋಕ್ಷವಾಗಿ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದರು. ನಾವು ಅದು ಮಾಡುವುದಿಲ್ಲ, ಇದು ಮಾಡುವುದಿಲ್ಲ ಎಂದು ಹೆದರಿಸಲು ಆರಂಭಿಸಿದರು. ಅವರ ಬ್ಲ್ಯಾಕ್ ಮೇಲ್ ಎಲ್ಲಿಯ ತನಕ ಹೋಗಿತ್ತು ಎಂದರೆ ಅವರು ಕೇವಲ ಹತ್ತೇ ದಿನಗಳಲ್ಲಿ ಪಾಲಿಕೆಯಿಂದ ಏಳು ಕೋಟಿ ಸೇರಿದಂತೆ ಒಟ್ಟು ಹದಿನೈದು ಕೋಟಿಯನ್ನು ಕೆಲವೇ ದಿನಗಳ ಅಂತರದಲ್ಲಿ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ರೀತಿಯಲ್ಲಿ ಒಂದು ಸಂಸ್ಥೆ ರಾಜ್ಯದ ಏಳು ಮಹಾನಗರ ಪಾಲಿಕೆಯಲ್ಲಿ ಒಂದಾದ ಮಂಗಳೂರು ಮಹಾನಗರ ಪಾಲಿಕೆಯನ್ನು ಆಡಿಸುವಷ್ಟು ಬಲಶಾಲಿಯಾಗಿದ್ದಾರೆ ಎಂದರೆ ನೀವು ಮಂಗಳೂರಿನ ಪಾಲಿಕೆಯ ದುರ್ಬಲತೆ ಅರ್ಥ ಮಾಡಿಕೊಳ್ಳಿ. ಯಥೇಚ್ಚವಾಗಿ ಹಣವನ್ನು ಸುಲಿಗೆ ಮಾಡಿಕೊಂಡ ಬಳಿಕ ಈಗ ಅವರು ನಾವು ಕೆಲಸ ಮಾಡಲು ರೆಡಿ ಎಂದು ಹೇಳುತ್ತಿದ್ದಾರೆ. ಈ ನಡುವೆ ಪಾಲಿಕೆ ತ್ಯಾಜ್ಯ ಸಂಗ್ರಹಣೆಗೆ ಸಂಬಂಧಪಟ್ಟ ವಾಹನಗಳನ್ನು ಹೊಸದಾಗಿ ಖರೀದಿ ಮಾಡಲು ತಯಾರಾಗಿದೆ. ಈ ಹಿಂದೆ ಏಶಿಯನ್ ಬ್ಯಾಂಕ್ ಆಫ್ ಡೆವಲಪಮೆಂಟ್ (ಎಡಿಬಿ) ಸಾಲದಿಂದ ಪಾಲಿಕೆಗೆ ಡಂಪ್ಲರ್ ಫ್ಲಝರ್ ವಾಹನ, ಕಬ್ಬಿಣದ ಕಸದ ತೊಟ್ಟಿ, ತೊಟ್ಟಿ ಎತ್ತುವ ಯಂತ್ರ ಇದೆಲ್ಲವನ್ನು ಖರೀದಿಸಲಾಗಿತ್ತು. ನಂತರ ಅದನ್ನು ನಿರ್ವಹಿಸಲಾಗದೇ ಜುಜುಬಿ ಮೊತ್ತಕ್ಕೆ ಗುಜರಿಗೆ ಮಾರಲಾಗಿತ್ತು. ಈ ವಿಷಯದ ಬಗ್ಗೆ ಮುಂದಿನ ಜಾಗೃತ ಅಂಕಣದಲ್ಲಿ ಮಾಹಿತಿ ನೀಡಲಾಗುವುದು. ಒಟ್ಟಿನಲ್ಲಿ ಇಡೀ ಊರಿನ ಅಭಿವೃದ್ಧಿಯ ಬದಲಿಗೆ ಕೇವಲ ಸ್ವಅಭಿವೃದ್ಧಿಗೆ ಹೆಚ್ಚು ಕಾಳಜಿ ವಹಿಸಿದರೆ ಹೀಗೆ ಆಗುವುದು!!
Leave A Reply