ಮೋಡಸ್ ಆಪರೆಂಡಿ ಏನು?
Posted On December 17, 2024

ಡಿಜಿಟಲ್ ಅರೆಸ್ಟ್ ಶಬ್ದವೇ ಕುತೂಹಲಕಾರಿ. ಇದರ ಅನುಭವ ಆದವರಿಗೆ ಮಾತ್ರ ಈ ಶಬ್ದ ಯಾವತ್ತೂ ಮರೆಯಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ. ಈ ಬಗ್ಗೆ ಸೈಬರ್ ಪರಿಣಿತರು ವಿವಿಧ ರೀತಿಗಳಲ್ಲಿ ಜಾಗೃತಿ ಸಂದೇಶಗಳನ್ನು, ವಿವಿಧ ಸೆಮಿನಾರ್ ಗಳನ್ನು ಹಮ್ಮಿಕೊಂಡು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ನಮ್ಮ ವಾಹಿನಿಯಲ್ಲಿಯೂ ನಾವು ಜಾಗೃತಿ ವಿಡಿಯೋ ಮಾಡಿ ನಮ್ಮ ಪ್ರಯತ್ನವನ್ನು ಕೂಡ ಮಾಡಿದ್ದೇವೆ. ಇದರಿಂದ ಒಂದಿಷ್ಟು ಸುಧಾರಣೆಗಳು ಮೂಡಿಬಂದಿದೆಯಾದರೂ ದುರುಳರು ಯಾರಾದರೂ ಬಕ್ರಾಗಳು ಸಿಗುತ್ತಾರಾ ಎಂದು ಗಾಳ ಹಾಕುತ್ತಲೇ ಇರುತ್ತಾರೆ. ಹಾಗಿದ್ದರೆ ಅವರ ಮೋಡಸ್ ಆಪರೆಂಡಿ ( ಕಾರ್ಯ ವಿಧಾನ) ಏನು ಎನ್ನುವುದನ್ನು ನೋಡಿಕೊಂಡು ಬರೋಣ.
ಮೊದಲನೇಯದಾಗಿ ಅವರು ರೆಂಡಂ ಆಗಿ ವ್ಯಕ್ತಿಗಳನ್ನು ಸೆಲೆಕ್ಟ್ ಮಾಡುತ್ತಾರೆ. ಅದರಲ್ಲಿಯೂ ಹಿರಿವಯಸ್ಸಿನ ಮಹಿಳೆಯರು ಅವರ ಫೇವರೇಟ್ ಆಯ್ಕೆ. ವಿಡಿಯೋ ಕಾಲ್ ಮಾಡಿ ಮೊದಲಿಗೆ ಕೆಲವು ಸೆಕೆಂಡ್ಸ್ ತಾವು ನಿಜವಾದ ಪೊಲೀಸ್ ಅಧಿಕಾರಿಯೆಂಬಂತೆ ವೇಷಭೂಷಣ, ಕಚೇರಿ ಬ್ಯಾಕ್ ಗ್ರೌಂಡ್ ಎಲ್ಲವನ್ನು ಬಿಂಬಿಸುತ್ತಾರೆ. ಅದನ್ನು ನೋಡಿದ ನಮಗೆ ನೈಜ ಪೊಲೀಸ್ ಅಧಿಕಾರಿ ಎನ್ನುವ ಭ್ರಮೆ ಮನಸ್ಸಿನಲ್ಲಿ ಮೂಡುತ್ತದೆ. ನಂತರ ಅವರ ವಿಡಿಯೋ ಕಾಲ್ ನಲ್ಲಿ ಮುಖ ಮಾಯವಾಗಿ ಪೊಲೀಸ್ ಇಲಾಖೆಯ ಲೋಗೋ, ಅದರಲ್ಲಿ ಯಾವ ರಾಜ್ಯ, ಘೋಷವಾಕ್ಯಗಳು ಮಾತ್ರ ಕಾಣಿಸುತ್ತದೆ. ಅದನ್ನು ನೋಡಿದ ನಮಗೆ ಇದು ನಿಜವಾಗಿಯೂ ನೈಜ ಕರೆ ಎನ್ನುವ ಒಂದು ಕಲ್ಪನೆ ಮೂಡಲು ತಡವಾಗುವುದಿಲ್ಲ. ಅತ್ತಲಿಂದ ಕರೆ ಮಾಡಿದ ವ್ಯಕ್ತಿ ಪೊಲೀಸ್ ಅಧಿಕಾರಿಯ ಪರಾಕಾಯ ಪ್ರವೇಶ ಮಾಡಿದಂತೆ ವರ್ತಿಸುತ್ತಾನೆ. ಅವನ ಧ್ವನಿಯಲ್ಲಿರುವ ಗಡಸುತನ, ಅವನ ಇಂಗ್ಲೀಷ್ ಅಥವಾ ಹಿಂದಿ ಮತ್ತು ಮಧ್ಯ ಮಧ್ಯದಲ್ಲಿ ಅವನು ವಾಕಿಟಾಕಿಯಲ್ಲಿಯೋ, ಇಂಟರ್ ಕಾಂನಲ್ಲಿಯೋ ಬೇರೆ ಅಧಿಕಾರಿಗಳೊಂದಿಗೆ ಮಾತನಾಡುವ ರೀತಿ ಎಲ್ಲವನ್ನು ನೋಡಿದಾಗ ಅಲ್ಲೊಂದು ವಿಚಾರಣೆ ನಡೆಯುವ ವಾತಾವರಣವೇ ಸೃಷ್ಟಿಯಾದಂತೆ ನಿಮಗೆ ಅನಿಸುತ್ತದೆ. ಅತ್ತಲಿಂದ ವ್ಯಕ್ತಿ ನಿಮ್ಮನ್ನು ತನಿಖೆಗೆ ಎದುರಿಗೆ ಕುಳ್ಳಿರಿಸಿ ಥೇಟ್ ಪೊಲೀಸ್ ಶೈಲಿಯಲ್ಲಿ ವಿಚಾರಣೆ ಮಾಡುವಂತೆ ಕಲ್ಪನಾತೀತ ರಂಗಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತಾನೆ.
ನಿಮ್ಮ ವಾಹನ ಬೆಂಗಳೂರಿನಲ್ಲಿ ಅಪಘಾತ ಮಾಡಿ ಓಡಿ ಹೋಗಿತ್ತು. ನಾವು ಹಿಡಿದಿದ್ದೇವೆ. ಅದು ಹಿಟ್ ಅಂಡ್ ರನ್ ಕೇಸ್ ಆಗಿದೆ. ನಿಮ್ಮ ಮೇಲೆ ಎಫ್ ಐ ಆರ್ ಕೇಸ್ ಆಗಿದೆ ಎಂದು ಹೆದರಿಸುತ್ತಾನೆ. ನೀವು ನನ್ನ ಬಳಿ ಅಂತಹ ವೆಹಿಕಲ್ ಇಲ್ಲ , ನಾನು ಬೆಂಗಳೂರಿನವಳಲ್ಲ ಎಂದು ಹೇಳಿದರೂ ಆರ್ ಸಿ ನಿಮ್ಮ ಹೆಸರಿನಲ್ಲಿದೆ. ಆದ್ದರಿಂದ ವೆಹಿಕಲ್ ನಿಮ್ಮದೇ ಎನ್ನುವುದರಲ್ಲಿ ಡೌಟೇ ಇಲ್ಲ ಎನ್ನುವ ಅರ್ಥದ ಮಾತುಗಳನ್ನು ಅತ್ತಲ್ಲಿಂದ ಆಡುತ್ತಾನೆ. ಹೌದಲ್ಲ, ಆರ್ ಸಿ ನನ್ನ ಹೆಸರಿನಲ್ಲಿ ಇದೆ ಎಂದ ಮೇಲೆ ಪೊಲೀಸರು ನನ್ನ ಮೇಲೆಯೇ ಕೇಸ್ ಹಾಕುತ್ತಾರೆ ಎನ್ನುವ ನಿರ್ಧಾರಕ್ಕೆ ನೀವೆ ಬರುತ್ತೀರಿ. ನೀವು ಆ ಕಡೆಯಿಂದ ಕರೆ ಮಾಡಿದವನ ಟ್ರಾಪಿಗೆ ಒಳಗಾಗಿದ್ದೀರಿ ಎನ್ನುವುದು ಆತ್ತ ಕಡೆಯಿಂದ ಬಲೆ ಬೀಸಿದ ವ್ಯಕ್ತಿಗಳಿಗೆ ಖಾತ್ರಿಯಾದ ಕೂಡಲೇ ಅವರು ಬೇರೆಯದ್ದೇ ಗೆಟಪ್ಪಿಗೆ ಇಳಿಯುತ್ತಾರೆ. ಯಾಕೆಂದರೆ ಕರೆ ಮಾಡಿದ ವ್ಯಕ್ತಿಗಳಿಗೆ ನೀವು ಹೆದರುವುದೇ ಅಂತಿಮ ಉದ್ದೇಶ ಅಲ್ಲ. ನಿಮ್ಮ ಹೆದರಿಕೆಯಿಂದ ಎಷ್ಟು ಹಣ ಪೀಕಿಸಬಹುದು ಎನ್ನುವುದೇ ಅವರ ಅಂತಿಮ ಲೆಕ್ಕಾಚಾರ.
ನೀವು ಹೆದರಬೇಕಾಗಿಲ್ಲ. ನಿಮ್ಮನ್ನು ಈ ತೊಂದರೆಯಿಂದ ಬಿಡಿಸಲು ನಾವು ತಯಾರಿದ್ದೇವೆ. ಅದಕ್ಕಾಗಿ ನೀವು ನಮ್ಮ ಎಲ್ಲಾ ಪ್ರಶ್ನೆಗಳಿಗೆ ನಿಖರ ಉತ್ತರ ಕೊಡಬೇಕು ಎನ್ನುವ ಭರವಸೆಯನ್ನು ಆ ವ್ಯಕ್ತಿ ನೀಡುತ್ತಾರೆ. ನೀವು ಸರಿ ಎಂದು ಸಿದ್ಧರಾಗುತ್ತೀರಿ. ನೇರವಾಗಿ ಆವತ್ತೇ ಡೀಲ್ ಮುಗಿಸಿದರೆ ನಿಮಗೂ ಸಂಶಯ ಬರಬಹುದು. ಅದರ ಬದಲಿಗೆ ಭಾರತೀಯ ವ್ಯವಸ್ಥೆ ಎಂದರೆ ಸ್ವಲ್ಪ ಸಿರಿಯಲ್ ತರಹ ಎಳೆಯಬೇಕು, ಆಗ ಮಾತ್ರ ಭಾರತೀಯರಿಗೆ ನಂಬಿಕೆ ಬರುವುದು ಎನ್ನುವ ಸೂತ್ರ ಅವರಿಗೆ ತಿಳಿದಿದೆ. ಅದಕ್ಕಾಗಿ ನಾಳೆ ನಿಮಗೆ ನಮ್ಮ ಉನ್ನತ ಅಧಿಕಾರಿಗಳು ಕರೆ ಮಾಡುತ್ತಾರೆ. ಆಗ ನೀವು ಅವರ ಬಳಿ ಎಲ್ಲವನ್ನು ಮಾತನಾಡಬಹುದು ಎಂದು ಹೇಳುತ್ತಾರೆ. ನೀವು ಆಯಿತು ಎಂದು ಹೇಳುತ್ತೀರಿ. ಅಲ್ಲಿಗೆ ಫೋನ್ ಕರೆ ಕಟ್ ಆಗುತ್ತದೆ ಮತ್ತು ನಿಮ್ಮ ಹೆದರಿಕೆಯ ಮೀಟರ್ ಚಾಲು ಆಗುತ್ತದೆ. ನಿಮಗೆ ಒಂದು ಕಡೆಯಲ್ಲಿ ಹೆದರಿಕೆ ಮತ್ತೊಂದು ಕಡೆಯಲ್ಲಿ ಅವರು ಸಹಾಯ ಮಾಡುತ್ತಾರೆ ಎಂಬ ಭಾವನೆ. ಮರುದಿನವೂ ಕೆಲವೊಮ್ಮೆ ಕಾಲ್ ಬರುವುದಿಲ್ಲ. ನಿಮ್ಮ ತಾಳ್ಮೆಯ ಒಂದೊಂದು ಘಳಿಗೆ ಕೂಡ ಹಾಗೆ ಮುಂದುವರೆಯುತ್ತದೆ.
ನಂತರ ಮರುದಿನ ಯಾವುದೋ ಒಂದು ಸಮಯಕ್ಕೆ ನಿಮಗೆ ಕಾಲ್ ಬರುತ್ತದೆ. ಈ ಸಲ ಬೇರೆ ಅಧಿಕಾರಿಯಂತೆ ಆತ ತನ್ನನ್ನು ಬಿಂಬಿಸುತ್ತಾನೆ. ಎರಡನೇ ಸಲ ಕಾಲ್ ಮಾಡಿದ ಕಾರಣ ಅವನಿಗೆ ಪೀಠಿಕೆ ಹಾಕುವ ಅಗತ್ಯವೇ ಬೀಳುವುದಿಲ್ಲ. ಅವನು ನೇರವಾಗಿ ವಿಷಯಕ್ಕೆ ಬರುತ್ತಾನೆ. ಆದರೆ ಈ ಬಾರಿ ಮಾತನಾಡಿದ ಹಿಟ್ ಅಂಡ್ ರನ್ ವಿಷಯಕ್ಕೆ ಬರದೇ ಬೇರೆಯದೇ ಅದಕ್ಕಿಂತ ದೊಡ್ಡ ಪ್ರಕರಣಕ್ಕೆ ಕೈ ಹಾಕುತ್ತಾನೆ. ನೀವು ಹ್ಯುಮನ್ ಟ್ರಾಫಿಕಿಂಗ್ ಮಾಡುತ್ತಿದ್ದೀರಿ ಎಂದು ಹೇಳುತ್ತಾನೆ. ಸಾಮಾನ್ಯವಾಗಿ ಒಂದಿಷ್ಟು ಆಂಗ್ಲ ಭಾಷೆಯ ಜ್ಞಾನ ಉಳ್ಳವರಿಗೆ ಹ್ಯೂಮನ್ ಟ್ರಾಫಿಕಿಂಗ್ ಎಂದರೆ ಏನು ಎನ್ನುವುದು ಗೊತ್ತಿರುತ್ತೆ. ಮಾನವ ಕಳ್ಳ ಸಾಗಾಣಿಕಾ ಜಾಲ. ಮಾನವರನ್ನು ವಿಶೇಷವಾಗಿ ಯುವತಿಯರನ್ನು ವೈಶಾವಾಟಿಕೆಗೆ ನೂಕಲು ಕಳ್ಳ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಅಪರಾಧವೇ ಹ್ಯೂಮನ್ ಟ್ರಾಫಿಕಿಂಗ್. ಇದಕ್ಕೆ ಭಾರತದಲ್ಲಿ ಹತ್ತು ವರ್ಷಗಳ ಗರಿಷ್ಟ ಶಿಕ್ಷೆ ಕೂಡ ಇದೆ.
ನಿಮಗೆ ಹ್ಯೂಮನ್ ಟ್ರಾಫಿಕಿಂಗ್ ನ ಗಂಭೀರತೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ಅವನು ಇನ್ನೊಂದಿಷ್ಟು ಪುರಾವೆಗಳನ್ನು ಕೂಡ ಒದಗಿಸುತ್ತಾನೆ. ಆ ಪ್ರಕರಣದಲ್ಲಿ ಕುಖ್ಯಾತ ಅಪರಾಧಿಗಳ, ಬಂಧನಕ್ಕೆ ಒಳಗಾಗಿರುವ ವ್ಯಕ್ತಿಗಳ ಬಗ್ಗೆ ಇರುವ ಕರಪತ್ರಗಳನ್ನು ಕೂಡ ನಿಮ್ಮ ವಾಟ್ಸಾಪಿಗೆ ಕಳುಹಿಸಿ ನೀವು ಇವನ ತಂಡದಲ್ಲಿ ಇದ್ದೀರಿ ಎನ್ನುವ ಮಾಹಿತಿ ಇದೆ ಎಂದು ನಿಮ್ಮಲ್ಲಿ ಆತಂಕವನ್ನು ಹೆಚ್ಚಿಸುತ್ತಾನೆ. ಎರಡು ದಿನಗಳ ಮೊದಲು ಹಿಟ್ ಅಂಡ್ ರನ್ ಕೇಸಿನಿಂದ ಹೇಗೆ ಬಚಾವಾಗುವುದು ಎಂಬ ಆತಂಕದಲ್ಲಿ ಅದಕ್ಕೆ ಕೊಡಬೇಕಾದ ಉತ್ತರಗಳ ಬಗ್ಗೆ ಮಾತ್ರ ಸಿದ್ಧರಾಗಿದ್ದ ನೀವು ಈಗ ದೊಡ್ಡ ಗಂಡಾಂತರಕ್ಕೆ ಸಿಲುಕಿದ ಭಾವನೆಗೆ ಬೀಳುತ್ತೀರಿ. ತಕ್ಷಣ ಅವನು ನಿಮ್ಮ ಹೆದರಿಕೆ ಗಟ್ಟಿಗೊಳಿಸಲು ರಾಷ್ಟ್ರೀಯ ಬ್ಯಾಂಕೊಂದರ ಹೆಸರು ಹೇಳಿ ಅದರ ಇಂತಿಂತಹ ಬ್ರಾಂಚಿನಲ್ಲಿ ನಿಮ್ಮ ಹೆಸರಿನಲ್ಲಿ ಅಕೌಂಟ್ ಹೊಂದಿದ್ದೀರಾ ಎಂದು ಕೇಳುತ್ತಾನೆ. ನೀವು ಅವನು ಹೇಳಿದ ಬ್ಯಾಂಕಿನಲ್ಲಿ ಅದೇ ಬ್ರಾಂಚಿನಲ್ಲಿ ಅಕೌಂಟ್ ಹೊಂದಿದ್ದರೆ ನಿಮ್ಮ ಭಯ ಇನ್ನು ಹೆಚ್ಚಾಗುತ್ತದೆ. ಒಂದು ವೇಳೆ ನಿಮ್ಮ ಬ್ಯಾಂಕು ಮತ್ತು ಅಕೌಂಟು ಅವನು ಹೇಳಿದ ಹಾಗೆ ಮ್ಯಾಚು ಆಗದೇ ಇದ್ದಲ್ಲಿ ನೀವು ಇಲ್ಲ, ನಾನು ಅಲ್ಲಿ ಅಕೌಂಟ್ ಹೊಂದಿಲ್ಲ ಎಂದು ಹೇಳಿದಾಗ ಅವನು ನಿಮ್ಮ ಆಧಾರ್ ಸಂಖ್ಯೆಯನ್ನು ಹೇಳುತ್ತಾನೆ. ಅದು ಕರೆಕ್ಟಾಗಿ ಮ್ಯಾಚ್ ಆಗಿರುತ್ತದೆ. ಯಾವಾಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಸರಿಯಾಗಿ ಮ್ಯಾಚು ಆಗುತ್ತದೆಯೋ ನಿಮಗೆ ಕರೆ ಮಾಡಿದ ವ್ಯಕ್ತಿ ನೈಜ ಪೊಲೀಸರು ಎಂಬ ಭಾವನೆ ಬಲವಾಗುತ್ತದೆ. ಆಧಾರ್ ಕಾರ್ಡ್ ಸಂಖ್ಯೆ ನಿಮ್ಮದು ಹೌದಲ್ವಾ ಎಂದು ಅವನು ಪದೇ ಪದೇ ಹೇಳುತ್ತಿದ್ದಂತೆ ನೀವು ಹೌದು ಎಂದು ಹೇಳಲೇಬೇಕಾದ ಪರಿಸ್ಥಿತಿ ಬಂದಿರುತ್ತದೆ. ಯಾಕೆಂದರೆ ಆತ ಹೇಳಿದ ಕಾರ್ಡ್ ನಂಬರ್ ನಿಮ್ಮದೇ ಆಗಿರುತ್ತದೆ. ಒಂದು ವೇಳೆ ನೀವು ನೆನಪಿಲ್ಲ, ನೋಡಬೇಕು ಎಂದು ಹೇಳಿದರೆ ಅವನು ಸ್ವಲ್ಪ ಹೊತ್ತು ಬಿಟ್ಟು ಕಾಲ್ ಮಾಡುತ್ತೇನೆ, ಆಧಾರ್ ಕಾರ್ಡ್ ರೆಡಿ ಮಾಡಿಟ್ಟು ಕುಳಿತುಕೊಳ್ಳಿ ಎಂದು ಹೇಳಿ ಕಾಲ್ ಕಟ್ ಮಾಡುತ್ತಾನೆ.
ಅದರ ನಂತರ ಅವನು ಮತ್ತೆ ಕಾಲ್ ಮಾಡುತ್ತಾನೆ. ಅವನು ಪ್ರತಿ ಬಾರಿ ನಿಮಗೆ ಕಾಲ್ ಮಾಡಿದಾಗಲೂ ಅವನು ಆರಂಭದಲ್ಲಿ ಒಂದು ವಿಷಯ ಒತ್ತಿ ಒತ್ತಿ ಕೇಳುತ್ತಾನೆ. ಅದೇನೆಂದರೆ ನಿಮ್ಮ ಬಳಿ ಯಾರೂ ಇಲ್ಲವಲ್ಲ, ಕೋಣೆಯಲ್ಲಿ ನೀವು ಒಬ್ಬರೇ ಇದ್ದಿರಲ್ಲ ಎಂದು ಪದೇ ಪದೇ ಕೇಳುತ್ತಾನೆ. ನೀವು ಒಬ್ಬರೇ ಇದ್ದರೆ ಮಾತ್ರ ನಾವು ನಿಮ್ಮನ್ನು ಈ ಪ್ರಕರಣದಿಂದ ಬಚಾವು ಮಾಡಲು ಸಾಧ್ಯ ಎಂದು ಹೇಳುತ್ತಾನೆ. ನೀವು ಒಮ್ಮೆ ಬಚಾವಾದರೆ ಸಾಕು ಎನ್ನುವ ಭಾವನೆಯಿಂದ ಯಾರಿಗೂ ಇದನ್ನು ಹೇಳಿರುವುದಿಲ್ಲ ಮತ್ತು ಹತ್ತಿರಕ್ಕೂ ಯಾರನ್ನೂ ಸುಳಿಯಲು ಬಿಟ್ಟಿರುವುದಿಲ್ಲ. ನೀವು ಯಾರೂ ಇಲ್ಲದ ಕೋಣೆಯಲ್ಲಿ ಒಬ್ಬರೇ ಇದ್ದರೆ ಮಾತ್ರ ನಿಮ್ಮನ್ನು ಉಳಿಸಲು ಸಾಧ್ಯ ಎಂದು ಅವನು ಹೇಳಿರುವುದರಿಂದ ನಿಮ್ಮ ಹೆದರಿಕೆ ಅದರೊಂದಿಗೆ ಸೇರಿರುವುದರಿಂದ ನೀವು ಒಂದು ವೇಳೆ ನಿಮ್ಮ ಆಪ್ತರಿಗೆ ಈ ವಿಷಯ ಹೇಳಿದರೂ “ನೀವು ಇದನ್ನು ಯಾರಿಗೂ ಹೇಳಬೇಡಿ., ಆ ಪೊಲೀಸ್ ಅಧಿಕಾರಿ ನನ್ನನ್ನು ಉಳಿಸುವ ಭರವಸೆ ನೀಡಿದ್ದಾನೆ” ಎಂದೇ ನೀವು ಅವನ ಪರ ವಹಿಸುತ್ತೀರಿ. ಅದರ ನಂತರ ಅವನು ನಿಮ್ಮನ್ನು ಹೇಗೆ ಮೈಂಡ್ ವಾಶ್ ಮಾಡುತ್ತಾನೆ ಎಂದರೆ ನೀವು ಅವನಿಗೆ ನಿಮ್ಮ ಬ್ಯಾಂಕ್ ಖಾತೆಯ ಡಿಟೇಲ್ಸ್, ನಿಮ್ಮ ಆದಾಯ ಮೂಲ ಯಾವುದು, ನಿಮ್ಮದು ಒಟ್ಟು ಅಕೌಂಟ್ ಇದೆ. ಅದರಲ್ಲಿ ಸೇವಿಂಗ್ಸ್ ಎಷ್ಟು, ಕರೆಂಟ್ ಅಕೌಂಟ್ಸ್ ಎಷ್ಟು? ಎಷ್ಟು ಫಿಕ್ಸೆಡ್ ಡೆಪಾಸಿಟ್ ಇದೆ, ಶೇರ್ಸ್ ನಲ್ಲಿ ಎಷ್ಟು ಹಣ ಹೂಡಿದ್ದೀರಿ, ನಿಮಗೆ ಮುಂದಿನ ದಿನಗಳಲ್ಲಿ ಎಲ್ಲಿಂದಲಾದರೂ ದೊಡ್ಡ ಮೊತ್ತದ ಹಣ ಬರುವ ಸಾಧ್ಯತೆ ಇದೆಯಾ? ಎಂದೆಲ್ಲಾ ಸಂಪೂರ್ಣವಾಗಿ ನಿಮ್ಮ ಆರ್ಥಿಕ ಹಣೆಬರಹವನ್ನು ದಾಖಲಿಸುತ್ತಾನೆ. ಈಗ ನಿಮ್ಮ ಚಾರ್ಟೆಡ್ ಅಕೌಂಟೆಂಟ್ ಗೆ ಗೊತ್ತಿರುವಷ್ಟೇ ಸತ್ಯ ಅವನಿಗೂ ಗೊತ್ತಿರುತ್ತದೆ ಎಂದ ಹಾಗೆ ಆಯಿತು. ನೀವು ಸತ್ಯವನ್ನೇ ಅವನಿಗೆ ಹೇಳಿರುವುದರಿಂದ ನಿಮ್ಮ ಹಣೆಬರಹ ಇನ್ನು ಅವನ ಕೈಯಲ್ಲಿ. ಕೆಲವು ಕಳ್ಳರು ನಿಮ್ಮಲ್ಲಿ ಆವತ್ತೇ ಡೀಲ್ ಮಾಡಿ ಹಣ ಇಂತಿಷ್ಟು ನಿಮ್ಮ ಕಡೆಯಿಂದ ಪೀಕುವ ಕೆಲಸ ಮಾಡಬಹುದು. ಆದರೆ ಕೆಲವು ಕಳ್ಳರು ಆವತ್ತು ಹಣ ಕೇಳುವುದಿಲ್ಲ. ಆದರೆ ನಿಮ್ಮ ಹಣದ ಮೂಲಕ್ಕೆ ಅವರು ಆಗಲೇ ಕನ್ನ ಹಾಕಿದ್ದಾರೆ ಎಂದೇ ಅರ್ಥ.
ಈ ಒಟ್ಟು ಪ್ರಕ್ರಿಯೆ ಡಿಜಿಟಲ್ ಅರೆಸ್ಟ್. ಇತ್ತೀಚಿನ ದಿನಗಳಲ್ಲಿ ಈ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿ ಹಣ ಲಪಟಾಯಿಸಲು ಸೈಬರ್ ಕಳ್ಳರು ಮುಂದಾಗಿರುವ ಅನೇಕ ದಾರಿಗಳ ಬಗ್ಗೆ ನಿಮಗೆ ಮಾಹಿತಿ ಬಂದಿರಬಹುದು ಅಥವಾ ನೀವೆ ಅದಕ್ಕೆ ಗುರಿಯಾಗಿರಬಹುದು. ಉದಾಹರಣೆಗೆ ನಿಮ್ಮದೇ ಫೇಕ್ ಪ್ರೊಫೈಲ್ ಮಾಡಿ ವಾಟ್ಸಪ್ ನಲ್ಲಿ ಹಣ ಕೇಳುವುದು, ಇನ್ಟಾ, ಎಫ್ ಬಿ ಫೇಕ್ ಪ್ರೋಫೈಲ್ ಕ್ರಿಯೇಟ್ ಮಾಡಿ ನಿಮ್ಮ ಆತ್ಮೀಯರಿಗೆ ತಪ್ಪು ಸಂದೇಶಗಳನ್ನು ಕಳುಹಿಸುವುದು ಹೀಗೆ ನಡೆಯುತ್ತಲೇ ಇರುತ್ತದೆ. ಇದೆಲ್ಲವನ್ನು ಈ ದೇಶದ ಯಾವುದೋ ಮೂಲೆಯಲ್ಲಿ ಕುಳಿತು ಒಂದು ಮೊಬೈಲ್ ಅಥವಾ ಕಂಪ್ಯೂಟರ್ ಇಟ್ಟುಕೊಂಡು ಒಂದಿಷ್ಟು ಟೆಕ್ನಿಕಲ್ ಆಗಿ ಜ್ಞಾನ ಇರುವವರು ಆಡುವ ಆಟವಾಗಿದೆ. ಒಂದು ಕ್ಷಣ ಇಂತಹ ಕರೆ ಬಂದಾಗ ಸಹಜವಾಗಿ ಹೆದರಿಕೆ ಆಗುತ್ತದೆ. ಆದರೆ ಇದೊಂದು ಫೇಕ್ ಕಾಲ್ ಎನ್ನುವುದರ ಬಗ್ಗೆ ಮಾಹಿತಿ ಇದ್ದವರಿಗೆ ತಿಳಿಯಲು ಒಂದು ಕ್ಷಣ ಕೂಡ ಅಗತ್ಯ ಇರುವುದಿಲ್ಲ.
ಈ ಅಂಕಣದ ಉದ್ದೇಶ ನಿಮ್ಮಲ್ಲಿ ಜಾಗೃತಿಯನ್ನು ಮೂಡಿಸುವುದೇ ಆಗಿದೆ. ಮೊದಲನೇಯದಾಗಿ ನಮಗೆಲ್ಲರಿಗೂ ಗೊತ್ತಿರಬೇಕಾದ ಸಂಗತಿ ಏನೆಂದರೆ ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕಾರಿ ಹೀಗೆ ನಿಮಗೆ ಕರೆ ಮಾಡಿ ನಿಮ್ಮಲ್ಲಿ ಹೆದರಿಕೆಯನ್ನು ಉಂಟು ಮಾಡುವುದಿಲ್ಲ. ಅವರು ವಿಡಿಯೋ ಕಾಲ್ ಮಾಡಿ ನಿಮ್ಮನ್ನು ಯಾವುದೇ ಸಂದರ್ಭದಲ್ಲಿಯೂ ವಿಚಾರಣೆ ಮಾಡುವುದಿಲ್ಲ. ಇನ್ನು ಈ ದುಷ್ಕಮಿಗಳು ವಾಟ್ಸಾಪ್ ನಲ್ಲಿ ಕಳುಹಿಸುವ ಎಫ್ ಐ ಆರ್ ಮೇಲ್ನೋಟಕ್ಕೆ ನೋಡುವಾಗಲೇ ಅದು ಫೇಕ್ ಎನ್ನುವುದು ಗೊತ್ತಾಗಿಬಿಡುತ್ತದೆ. ಆದ್ದರಿಂದ ನೀವು ಇಂತಹ ಕರೆ ಬಂದಾಗ ಆಂಗ್ಲ ಭಾಷೆಯಲ್ಲಿ ಮಾತನಾಡಿ ಅವರಿಗೆ ಸಂವಹನ ಸುಲಭ ಮಾಡುವ ಬದಲು ನೇರವಾಗಿ ಕರ್ನಾಟಕದವರಾದರೆ ಇಲ್ಲಿನ ಸ್ಥಳೀಯ ಭಾಷೆ, ಮಹಾರಾಷ್ಟ್ರವಾದರೆ ಮರಾಠಿ, ಕೇರಳವಾದರೆ ಮಲಯಾಳಂ ಇನ್ನು ಕೊಂಕಣಿಯಾದ್ರೆ ಕೊಂಕಣಿಯಲ್ಲಿ ಮಾತನಾಡಿದರೆ ಅತ್ತಲಿಂದ ಕರೆ ಮಾಡುವ ವ್ಯಕ್ತಿ ಗೊಂದಲಕ್ಕೆ ಬೀಳುತ್ತಾನೆ. ಏಕೆಂದರೆ ಹೀಗೆ ಕಾಲ್ ಮಾಡುವವರಿಗೆ ಸಾಮಾನ್ಯವಾಗಿ ಗೊತ್ತಿರುವುದು ಹಿಂದಿ ಮತ್ತು ಒಂದಿಷ್ಟು ಅರೆಬರೆ ಇಂಗ್ಲೀಷ್. ಆದ್ದರಿಂದ ಅವರು ನಿಮ್ಮ ಆಯ್ಕೆಯ ಭಾಷೆಯಲ್ಲಿ ಮಾತನಾಡಲು ಸಾಧ್ಯವಾಗದೇ ನಿಮಗೆ ಸತ್ಯ ಗೊತ್ತಾಗಿರುವ ಸಂಗತಿ ಗೊತ್ತಾಗಿ ಕರೆ ಕಟ್ ಮಾಡುತ್ತಾನೆ ಅಥವಾ ನಿಮಗೆ ಅವನ ಭಾಷೆಯಲ್ಲಿ ಬೈಯಲು ಶುರು ಮಾಡುತ್ತಾನೆ. ಆಗ ನೀವು ಕೂಡ ನಿಮಗೆ ಗೊತ್ತಿರುವ ಬೈಗುಳವನ್ನು ಅವನ ಮೇಲೆ ಸುರಿಸಿಬಿಡಬಹುದು.
ಇನ್ನು ನಿಮ್ಮ ಆಧಾರ್ ಕಾರ್ಡ್ ನಂಬರ್ ಅವನು ಹೇಳಿದ ಕೂಡಲೇ ನೀವು ಅವನಿಗೆ ಶರಣಾಗಬೇಕಿಲ್ಲ. ಏಕೆಂದರೆ ನೀವು ಎಲ್ಲಿಯೋ ಹೋಟೇಲ್ ರೂಂ ಬುಕ್ ಮಾಡಿದಾಗ ಆ ನಂಬರ್ ಸಹಜವಾಗಿ ಕೈಬದಲಾಗಿರಬಹುದು. ಇದು ಅವರ ಅಸ್ತ್ರವಾಗಿ ಪರಿಣಮಿಸಿದೆ ಅಷ್ಟೇ. ಇನ್ನು ಈ ವಿಷಯದಲ್ಲಿ ಸಾಕಷ್ಟು ಪರಿಣಿತರಿರುವ ಯಾರನ್ನು ಬೇಕಾದರೂ ಕೇಳಿ ನೀವು ಮಾಹಿತಿ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಈ ವಿಷಯದಲ್ಲಿ ನೀವು ಧೈರ್ಯದಿಂದ ಇರುವುದು ಮುಖ್ಯ. ನಿಮ್ಮ ಧೈರ್ಯವೇ ಅವರ ಜಂಘಾಬಲವನ್ನು ಹುದುಗಿಸಬಹುದು. ಧನ್ಯವಾದಗಳು.
- Advertisement -
Trending Now
“ನಾನು ಪಾಳೇಗಾರ ಅಲ್ಲ, ಕ್ಷೇತ್ರದ ಕಾವಲುಗಾರ!“ -ವೇದವ್ಯಾಸ ಕಾಮತ್ ಕಿಡಿ
February 17, 2025
Leave A Reply