ಮಲದ ಗುಂಡಿಗೆ ಇಳಿದಿಲ್ಲ, ಮರುನಿರ್ಮಾಣ ಕಾರ್ಯ ನಡೆಯುತ್ತಿತ್ತು!
ಮಂಗಳೂರಿನ ಬಂದರ್ ಪೊಲೀಸ್ ಠಾಣೆಯ ಸಮೀಪ ಮಲದ ಗುಂಡಿಗೆ ಮಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರರು ತಮ್ಮ ಕೆಲಸದವರನ್ನು ಇಳಿಸಿದರು ಎನ್ನುವುದು ದೊಡ್ಡ ಸುದ್ದಿಯಾಗಿದೆ. ಕೆಲವರು ಅದರ ಫೋಟೋ ತೆಗೆದು ಪತ್ರಿಕೆಯವರಿಗೆ ಕಳುಹಿಸಿ, ಸಾಮಾಜಿಕ ತಾಣಗಳಲ್ಲಿ ಪ್ರಚಾರ ಪಡಿಸಿ ಏನೋ ದೊಡ್ಡ ಆಗಬಾರದ ಅನಾಹುತ ಆಗಿ ಹೋಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ನಿಜವಾದ ವಿಷಯ ಏನು? ಸುಪ್ರೀಂ ಕೋರ್ಟ್ ಹೇಳಿದ್ದು ಏನು? ಇದೆಲ್ಲವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಹೇಳಿದ್ದನ್ನು ಅರ್ಧ ಕೇಳಿಸಿಕೊಂಡು ಪಾಲಿಕೆ ದೊಡ್ಡ ಅನಾಹುತ ಮಾಡಿತು ಎಂದು ಹೇಳಿದರೆ ಅದು ಮತ್ತೊಂದು ವಿವಾದಕ್ಕೆ ಕಾರಣವಾದೀತು.
ಸುಪ್ರೀಂ ಕೋರ್ಟ್ ಏನು ಹೇಳಿತ್ತು ಎಂದರೆ ಮಲದ ಗುಂಡಿ ತುಂಬಿ ತುಳುಕುವಾಗ ಅದರಲ್ಲಿ ಕಾರ್ಮಿಕರನ್ನು ಇಳಿಸುವುದು ತಪ್ಪು. ಏಕೆಂದರೆ ಕುತ್ತಿಗೆ ಮಟ್ಟದ ತನಕ ಮಲ ತುಂಬಿರುವಾಗ ಕೆಲವೊಮ್ಮೆ ಅದರ ಒಳಗೆ ಕೂಡ ಹೋಗಿ ಸ್ವಚ್ಚ ಮಾಡಿದರೆ ಆಗ ಇಳಿದ ಕಾರ್ಮಿಕನ ದೇಹದ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರಬಹುದು. ಹಲವು ಬಾರಿ ಮಲಗುಂಡಿಯ ಕೆಟ್ಟ ಗಾಳಿ ಅಥವಾ ವಿಷವಾಯುವಿನ ಪರಿಣಾಮವಾಗಿ ಪೌರ ಕಾರ್ಮಿಕರು ಸಾವನ್ನು ಕೂಡ ಅಪ್ಪಬಹುದು. ಆದ್ದರಿಂದ ಅಮಾನವೀಯ ಪದ್ಧತಿಯನ್ನು ನಿಲ್ಲಿಸಿ ಯಂತ್ರದ ಮೂಲಕ ಮಲಗುಂಡಿಯನ್ನು ಸ್ವಚ್ಚ ಮಾಡಿಸಬೇಕು ಎಂದು ಹೇಳಿತ್ತು. ಆದರೆ ಮೊನ್ನೆ ಬಂದರಿನಲ್ಲಿ ನಡೆದದ್ದೇ ಬೇರೆ. ಬೇಕಾದರೆ ನೀವು ಆ ಫೋಟೋಗಳನ್ನು ಸರಿಯಾಗಿ ಗಮನಿಸಿ. ಅಲ್ಲಿ ಕಾರ್ಮಿಕರು ಮಲದ ಗುಂಡಿಯಲ್ಲಿ ಇಳಿದದ್ದಲ್ಲ. ಅದು ಮಲದ ಗುಂಡಿಯ ಮರು ನಿರ್ಮಾಣ ಕಾರ್ಯ. ಈ ಮ್ಯಾನ್ ಹೋಲ್ ಇರುತ್ತದೆಯಲ್ಲ. ಅದರ ಒಳಗೆ ಸಿಮೆಂಟಿನ ಕೋಟಿಂಗ್ ಇರುತ್ತದೆ. ಅದು ಕಾಲಕ್ರಮೇಣ ಅಲ್ಲಿ ಒಳಗೆ ವಿಷವಾಯುವಿನ ಪರಿಣಾಮ ಕರಗುತ್ತಾ ಹೋಗುತ್ತದೆ. ಸಿಮೆಂಟ್ ಕೋಟಿಂಗ್ ಕರಗಿದ ಪರಿಣಾಮ ಅಲ್ಲಿ ಮಲ ಅಥವಾ ಮನುಷ್ಯನ ತ್ಯಾಜ್ಯ ಮ್ಯಾನ್ ಹೋಲ್ ನಿಂದ ಲೀಕೇಜ್ ಆಗಲು ಶುರುವಾಗುತ್ತದೆ. ಒಮ್ಮೆ ಲೀಕ್ ಆಗಲು ಶುರುವಾದರೆ ಅದು ಹೊರಗೆ ಬಂದು ಪರಿಸರ ಗಲೀಜಾಗುತ್ತದೆ. ಆಗ ಏನು ಮಾಡಬೇಕು ಎಂದರೆ ಮ್ಯಾನ್ ಹೋಲ್ ಒಳಭಾಗದಲ್ಲಿ ಸಿಮೆಂಟಿನ ಪ್ಲಾಸ್ಟರಿಂಗ್ ಮಾಡಲೇಬೇಕು. ಅದು ಅನಿವಾರ್ಯ. ಅದನ್ನು ಮಹಾನಗರ ಪಾಲಿಕೆ ಗುತ್ತಿಗೆದಾರರಿಗೆ ಕೆಲಸ ಕೊಟ್ಟಿತ್ತು. ಇದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಮ್ಯಾನ್ ಹೋಲ್ ಮರು ನಿರ್ಮಾಣ ಮಾಡುವಾಗ ಕೆಲಸದವರು ಕೆಳಗೆ ಇಳಿಯದೇ ಹೋದರೆ ಅಲ್ಲಿ ಕಲ್ಲು, ಸಿಮೆಂಟ್ ಹಾಕಿ ಕಟ್ಟುವುದು ಹೇಗೆ? ಅದನ್ನು ಯಂತ್ರ ಮಾಡುತ್ತದೆಯಾ? ಇನ್ನು ಆ ಕಾರ್ಮಿಕರೇನೂ ತ್ಯಾಜ್ಯದ ಗುಂಡಿಯ ಒಳಗೆ ಇಳಿದಿರಲಿಲ್ಲ. ಸರಿಯಾಗಿ ನೋಡಿದರೆ ಅವರು ಮ್ಯಾನ್ ಹೋಲ್ ಒಳಗೆ ಇಳಿದದ್ದೇ ಅಲ್ಲ. ಅಲ್ಲಿರುವ ಮ್ಯಾನ್ ಹೋಲ್ ಹಿಂದೆನೆ demolish ಆಗಿದೆ.
ಈಗ ಉಳಿದಿರುವ ಪ್ರಶ್ನೆ: ಸುಪ್ರೀಂ ಕೋರ್ಟ್ ಕೊಟ್ಟಿರುವ ಆದೇಶವನ್ನು ಬೇರೆ ಬೇರೆ ರಾಜ್ಯಗಳ ಸರಕಾರಗಳು ಮೇಲ್ಮನವಿ ಅರ್ಜಿ ಹಾಕಿ ವಿನಂತಿಸಬಹುದು. ಹೇಗೆಂದರೆ ತುಂಬಿ ತುಳುಕುತ್ತಿರುವ ಮ್ಯಾನ್ ಹೋಲ್ ಕ್ಲೀನ್ ಮಾಡಲು ಮನುಷ್ಯರನ್ನು ಇಳಿಸಬಾರದು ಸರಿ, ಒಪ್ಪೋಣ. ಆದರೆ ನಿರ್ಮಾಣ, ಮರು ನಿರ್ಮಾಣ, ರಿಪೇರಿ ಮಾಡಬೇಕಾದ ಪರಿಸ್ಥಿತಿ ಬಂದಾಗ ಅಥವಾ ನಿರ್ವಹಣೆಯ ವಿಷಯ ಬಂದಾಗ ಏನು ಮಾಡುವುದು ಎಂದು ಕೇಳಬೇಕು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟಿರುವ ಆದೇಶ ಆವತ್ತಿನಿಂದಲೇ ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದ ರಾಜ್ಯ ಸರಕಾರಗಳು ರಾಜ್ಯದ ಹೈಕೋರ್ಟಿಗೆ ಅಫಿದಾವಿತ್ ಸಲ್ಲಿಸಿ, ಸುಪ್ರೀಂ ಕೋರ್ಟ್ ಕೊಟ್ಟಿರುವ ಸೂಚನೆಯಲ್ಲಿ ಸ್ಪಷ್ಟತೆಯ ಕೊರತೆ ಇದೆ. ಮ್ಯಾನ್ ಹೋಲ್ ಗೆ ಕಾರ್ಮಿಕರನ್ನು ಇಳಿಸುವುದು ಬೇರೆ. ಹಾಗೆ ಮ್ಯಾನ್ ಹೋಲ್ ಮರು ನಿರ್ಮಾಣ ಬೇರೆ. ಒಂದು ವೇಳೆ ಮ್ಯಾನ್ ಹೋಲ್ ಮರು ನಿರ್ಮಾಣವಾಗುವಾಗ ಕಾರ್ಮಿಕರ ರಕ್ಷಣೆ ಮತ್ತು ಆರೋಗ್ಯದ ಬಗ್ಗೆ ಏನಾದರೂ ಹೆಚ್ಚು ಕಡಿಮೆ ಆದರೆ ಆಗ ಅದರ ಜವಾಬ್ದಾರಿ ನಮ್ಮದು. ಅದು ಬಿಟ್ಟು ಹೀಗೆ ರಿಪೇರಿ ಮಾಡಬೇಕಾದ ಸಂದರ್ಭದಲ್ಲಿ ಕಾರ್ಮಿಕರನ್ನು ಬಳಸದೇ ಬೇರೆ ವಿಧಿಯಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು.
ಮೊನ್ನೆಯ ಬಂದರಿನ ಮ್ಯಾನ್ ಹೋಲ್ ಅದೊಂದು ಮರು ನಿರ್ಮಾಣ ಕಾರ್ಯ. ಅದರ ಬಗ್ಗೆ ವಿವಿಧ ಜನರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಆದರೆ ಸತ್ಯ ವಿಷಯವನ್ನು ಇಲ್ಲಿ ಹೇಳಲಾಗಿದೆ. ಸುಪ್ರೀಂ ಕೋರ್ಟ್ ಕೊಟ್ಟ ಸೂಚನೆಯಿಂದ ಮ್ಯಾನ್ ಹೋಲ್ ನಿರ್ಮಾಣಕ್ಕೆ ದಕ್ಕೆ ಬರುತ್ತದೆ ಮತ್ತು ಅದೊಂದು ವಿವಾದಕ್ಕೆ ಕಾರಣವಾಗುತ್ತದೆ ಎಂದಾದರೆ ಆ ತೀರ್ಪನ್ನು ಮರು ಪರಿಶೀಲಿಸಲು ನ್ಯಾಯಾಲಯಕ್ಕೆ ಸರಕಾರಗಳು ಅರ್ಜಿ ಸಲ್ಲಿಸಬೇಕು. ಇನ್ನು ಮ್ಯಾನ್ ಹೋಲ್ ಕಟ್ಟುವಾಗ ಇಳಿದ ಕಾರ್ಮಿಕರಿಗೆ ಸರಿಯಾದ ಭದ್ರತೆ ಇಲ್ಲ ಎಂದಾದಲ್ಲಿ ಅದು ಗುತ್ತಿಗೆದಾರನ ಬೇಜವಾಬ್ದಾರಿ. ಒಟ್ಟಿನಲ್ಲಿ ವಾಸ್ತವ ಮತ್ತು ತೀರ್ಪಿನ ನಡುವೆ ಆದ ವಿವಾದ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿ ಪತ್ರಿಕೆಗಳಲ್ಲಿ ದೊಡ್ಡ ವರದಿಯಾಗಿ ಮೂಡಿಬಂದಿರುವುದು ಪ್ರಜ್ಞಾವಂತ ನಗರದ ಜನರಿಗೆ ಗೊಂದಲಕ್ಕೆ ಕಾರಣವಾಗಿತ್ತು!
Leave A Reply