ಮೋದಿ ಹೆಜ್ಜೆ ನಿಗೂಢ ಎಂದು ಗೊತ್ತಿಲ್ಲದವರು ಮಾತ್ರ ಹೀಗೆ ಮಾತನಾಡುತ್ತಿದ್ದಾರೆ!
ಅಮಿತ್ ಶಾ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಪಕ್ಷದ ಒಳಗುಟ್ಟುಗಳು ಹಿಂದಿನಷ್ಟು ಸುಲಭವಾಗಿ ಹೊರಗೆ ಬೀಳುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾರನ್ನು ಯಾವಾಗ ಎಲ್ಲಿಂದ ಎತ್ತಿ ಎಲ್ಲಿ ಇಡುತ್ತಾರೆ ಎನ್ನುವುದು ಮೋದಿಗೆ ಮಾತ್ರ ಗೊತ್ತು. ಆದ್ದರಿಂದ ಇತ್ತೀಚೆಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಕ್ಷದೊಳಗೆ ಏನು ನಡೆಯುತ್ತದೆ ಎಂದು ಊಹಿಸುವುದು ಕಷ್ಟ. ಆದ್ದರಿಂದ ಬಿಜೆಪಿಯ ಒಳಗಿರುವ ಕೆಲವು ವ್ಯಕ್ತಿಗಳು ತಮ್ಮ ಅಂದಾಜಿನ ಮೇಲೆ ಕೊಡುತ್ತಿರುವ ವದಂತಿಗಳನ್ನು ನಂಬಿ ಕೆಲವು ವೆಬ್ ಸೈಟ್ ಗಳು ಸುದ್ದಿಯನ್ನು ಬಿತ್ತರಿಸುತ್ತಿವೆ.
ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾದಾಗ ಯಾರೊಬ್ಬರಿಗೂ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗ್ಡೆ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ ಎನ್ನುವ ಸಣ್ಣ ಕಲ್ಪನೆ ಕೂಡ ಇರಲಿಲ್ಲ. ಮಾಧ್ಯಮದವರು ಕರ್ನಾಟಕದಿಂದ ಯಾರದ್ಯಾರದ್ದೋ ಹೆಸರು ಟೈಪ್ ಮಾಡಿ ಬ್ರೇಕಿಂಗ್ ನ್ಯೂಸ್ ಕೊಡಲು ತಯಾರಿದ್ದರು. ಆದರೆ ನಂತರ ಅನಂತ ಕುಮಾರ್ ಹೆಗ್ಡೆಯವರಿಗೆ ಸಚಿವ ಸಂಪುಟ ಭಾಗ್ಯ ಎಂದು ಹೊಸದಾಗಿ ಟೈಪ್ ಮಾಡಿ ಹಿಂದೆ ಬರೆದಿದ್ದವರ ಹೆಸರು ಡಿಲಿಟ್ ಮಾಡಬೇಕಾಯಿತು. ಸ್ವತ: ಹೆಗಡೆಯವರಿಗೂ ತಾನು ಕೇಂದ್ರ ಸಚಿವನಾಗುತ್ತೇನೆ ಎಂದು ದೆಹಲಿಯಿಂದ ಹಿಂದಿನ ದಿನ ಫೋನ್ ಬರುವ ತನಕ ಗೊತ್ತಿರಲಿಲ್ಲ.
ತಮ್ಮ ಹಿಂದಿನ ಕ್ಯಾಲ್ಕುಲೆಶನ್ ತಪ್ಪಿದ ಕಾರಣ ಈ ಬಾರಿ ಯಾರೋ ಹಬ್ಬಿಸಿದ ಗಾಳಿ ಸುದ್ದಿಯನ್ನು ನಂಬಿ ಕೆಲವು ಮಧ್ಯಮಗಳು ಅನಂತ ಕುಮಾರ್ ಹೆಗ್ಡೆಯವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುತ್ತಿವೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ರಾಮ್ ನಾಥ್ ಕೋವಿಂದ್ ಆಯ್ಕೆಯಾಗುತ್ತಾರೆ ಎಂದು ಯಾವ ಮಾಧ್ಯಮ ಹೇಳಿತ್ತು. ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ತಯಾರಾಗಬೇಕಾಗುತ್ತದೆ ಎಂದು ಬಿಜೆಪಿ ಉನ್ನತ ಮುಖಂಡರಿಗೂ ಗೊತ್ತಿರಲಿಲ್ಲ. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರು ನೇಮಕವಾಗುತ್ತಾರೆ ಎಂದು ಯಾರಾದರೂ ಆರು ತಿಂಗಳ ಮೊದಲೇ ಭವಿಷ್ಯ ಹೇಳಿದ್ರಾ?
ಕಾಂಗ್ರೆಸ್ಸಿನ ಮುಂದಿನ ಅಧ್ಯಕ್ಷ ರಾಹುಲ್ ಗಾಂಧಿ ಎಂದು ಹತ್ತು ವರುಷಗಳ ಮೊದಲೇ ಯಾರು ಬೇಕಾದರೂ ಹೇಳಬಹುದಾಗಿದೆ. ಆದರೆ ಬಿಜೆಪಿಯಲ್ಲಿ ಹಾಗಿಲ್ಲ. ಮೋದಿ ಕೊನೆಯ ಕ್ಷಣದಲ್ಲಿ ಯಾರ ಹೆಗಲ ಮೇಲೆ ಕೈಯಿಡುತ್ತಾರೆ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಅವರ ಪ್ರತಿಯೊಂದು ನಡೆಯ ಹಿಂದೆ ಮುಂದೆ ನೂರಾರು ಚಿಂತನೆಗಳಿರುತ್ತವೆ. ಆದ್ದರಿಂದ ಬಿಜೆಪಿಯ ಒಳಗೆ ಇರುವವರು ಹೀಗೆ ಸುದ್ದಿ ಹಬ್ಬಿಸಿದರೂ ಯಾರೂ ನಂಬಬಾರದು. ಯಾಕೆಂದರೆ ಮೋದಿಯವರ ಬಗ್ಗೆ ಗೊತ್ತಿರುವ ಯಾರೂ ಕೂಡ ಯಾರು ಯಾವಾಗ ಏನಾಗುತ್ತಾರೆ ಎಂದು ಹೇಳಲು ಹೋಗುವುದಿಲ್ಲ!
Leave A Reply