ಯೋಗ ವಿಜ್ಞಾನವೇ ಹೊರತು ಧರ್ಮ ಅಲ್ಲ
>ಮುಸ್ಲಿಮರ ಪುಣ್ಯ ಕ್ಷೇತ್ರ ಮೆಕ್ಕಾದಲ್ಲೇ ಯೋಗ ಪಸರಿಸುತ್ತಿರುವ ನೌಫ್ ಮಾರ್ವಾಯಿ ಸಂದರ್ಶನ
14 ನವೆಂಬರ್ 2017 ರಂದು ಸೌದಿ ಅರೇಬಿಯಾ ಸರಕಾರ ಸೌದಿಯಲ್ಲಿ ಯೋಗ ಕ್ರೀಡಾ ಚಟುವಟಿಕೆ, ಅದನ್ನು ಯಾರೂ ಬೇಕಾದರೂ ಅಭ್ಯಾಸ ಮಾಡಬಹುದು ಮತ್ತು ತರಬೇತಿಯನ್ನೂ ನೀಡಬಹುದು ಎಂದು ಆದೇಶ ಹೊರಡಿದೆ. ಈ ಆದೇಶದ ಹಿಂದಿರುವವರೇ ನೌಫ್ ಮಾರ್ವಾಯಿ. ಸೌದಿಯಲ್ಲಿ ಯೋಗವನ್ನು ಪಸರಿಸುತ್ತಿರುವ ಮಹಿಳೆ. ಸೌದಿ ಅರೆಬಿಯಾದ ಮೆಕ್ಕಾದಲ್ಲಿ 1980ರಲ್ಲಿ ಜನಿಸಿರುವ ‘ನೌಫ್ ಬಿಂಟ್ ಮಹಮ್ಮದ್ ಅಲ್ ಮಾರ್ವಾಯಿ’ ಮುಸ್ಲಿಂ ಮಹಿಳೆಯರಿಗೆ ಸ್ಫೂರ್ತಿದಾಯಕ ವ್ಯಕ್ತಿತ್ವ. ಸೌದಿ ಅರೇಬಿಯಾ ಸೇರಿ ಪಶ್ಚಿಮ ಏಷ್ಯಾ ರಾಷ್ಟ್ರದಲ್ಲಿ ಯೋಗ ಮತ್ತು ಭಾರತೀಯ ಆಯುರ್ವೇದ ಪದ್ದತಿಯನ್ನು ಪಸರಿಸುತ್ತಿರುವ ಮಹಾನ್ ಪ್ರವರ್ತಕಿ. ನೌಫ್ ಭಾರತಕ್ಕೆ ಯೋಗ ಮತ್ತು ಆಯುರ್ವೇದ ತರಬೇತಿಗೆ ಬಂದ ಸೌದಿ ಅರೇಬಿಯಾದ ಮೊದಲ ಮಹಿಳೆ. ಅರಬ್ ಯೋಗಾ ಫೌಂಡೇಷನ್ ನ ಸ್ಥಾಪಕಿ. ಅಲ್ಲದೇ ವಿಶ್ವ ಯೋಗ ದಿನಾಚರಣೆಯನ್ನು ಸೌದಿ ರಾಷ್ಟ್ರಗಳಲ್ಲಿ ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ಯೋಗಕ್ಕೆ ಮಾನ್ಯತೆ ನೀಡಿರುವ ಈ ಹೊತ್ತಲ್ಲಿ, ಆರ್ಗನೈಸರ್ ಪತ್ರಿಕೆಗೆ ನೀಡಿದ ಸಂದರ್ಶನ ತುಳುನಾಡು ನ್ಯೂಸ್ ಓದುಗರಿಗಾಗಿ.
ಯೋಗದ ಪರಿಚಯ ಹೇಗಾಯ್ತು? ಅದರ ಹಿಂದೆ ಮಹತ್ವದ ಕಾರಣವಿದೆಯೇ?
ನನ್ಗೆ ಜನ್ಮತಃ ರೋಗನಿರೋಧಕ ಶಕ್ತಿ ಕಡಿಮೆ ಇತ್ತು. ಅದು ಮುಂದೆ ಲುಪುಸ್ ರೋಗವಾಗಿ ಕಾಡುತ್ತಿತ್ತು. ಇದು ನನಗೆ ಶಾಲೆಯಲ್ಲಿ ಕಿರಿಕಿರಿ ಎನಿಸುತ್ತಿತ್ತು. ಸದಾ ಅನಾರೋಗ್ಯ ನನ್ನನ್ನು ಕಾಡುತ್ತಿತ್ತು. ದೇಹದ ತೂಕ ಕಡಿಮೆಯಾಗಿ, ನಿತ್ಯ ಹಲವು ಸಮಸ್ಯೆ ಎದುರಾಗುತ್ತಿದ್ದವು. ಕ್ರೀಡೆಯಲ್ಲಿ ಭಾಗವಹಿಸುವ ಆಸೆ ಇದ್ದರೂ, ಅನಾರೋಗ್ಯದಿಂದ ಬೇರೆಯವರು ಆಡುವುದನ್ನೇ ನೋಡುತ್ತಾ ಕುಳಿತುಕೊಳ್ಳುವ ಸ್ಥಿತಿ ಇತ್ತು. ಅದು 1993 ಇರಬಹುದು ತಂದೆಯವರು ಪ್ರವಾಸದ ವೇಳೆ ತಂದಿದ್ದ ಮಾರ್ಷಲ್ ಆರ್ಟ್ ಸ್ಟಡೀಸ್ ಆ್ಯಂಡ್ ಚಾಂಪಿಯನ್ ಷಿಫ್ ಎಂಬ ಯೋಗದ ಪುಸ್ತಕ ದೊರೆಯಿತು. ಆದರೆ 1998ರವರೆಗೆ ನಾನು ಯೋಗ ಅಭ್ಯಾಸ ಮಾಡಲು ಆಗಲಿಲ್ಲ. ಆಗ ಯಾವುದೇ ಯೋಗ ಶಿಕ್ಷಕರು ಇರಲಿಲ್ಲ. ಅಷ್ಟಕ್ಕೆ ಸುಮ್ಮನಾಗದೇ ಯೋಗ ಪುಸ್ತಕ, ವಿಡಿಯೋಗಳನ್ನು ತರಿಸಿದೆ. ಅವುಗಳನ್ನೇ ಅನುಸರಿಸಿ ಯೋಗಾಭ್ಯಾಸ ಆರಂಭಿಸಿದೆ. ಸುಮಾರು ಏಳು ವರ್ಷ ಯಾವುದೇ ಶಿಕ್ಷಕರಿಲ್ಲದೇ ಯೋಗಾಭ್ಯಾಸ ಮಾಡಿದೆ. ನಿತ್ಯ ಅಭ್ಯಾಸದಿಂದ ನನ್ನ ದೇಹಸ್ಥಿತಿಯಲ್ಲಿ ಮಹತ್ತರ ಬದಲಾವಣೆಗಳಾದವು. ನನ್ನ ಕಾಲೇಜು ದಿನಗಳಾದ 2000-2004ರಲ್ಲಿ ನಾನು ನಿತ್ಯ ಯೋಗ ಮತ್ತು ಮನಶಾಸ್ತ್ರ ಓದಲು ಯೋಗ ಪ್ರಭಾವ ಬೀರಿತು. ಮನೋಶಾಸ್ತ್ರ ಅಧ್ಯಯನದಲ್ಲಿ ಯೋಗದ ಪ್ರಭಾವದ ಕುರಿತು ಅಧ್ಯಯನ ಆರಂಭಿಸಿದೆ. ಯೋಗ ಮನಸ್ಸು, ನರವ್ಯವಸ್ಥೆ ಮತ್ತು ದೇಹಕ್ಕೆ ಚೈತನ್ಯ ನೀಡುತ್ತದೆ ಎಂಬುದು ಕಂಡುಕೊಂಡೆ. ಅದು ನನಗೆ ಯೋಗದಲ್ಲಿ ಮತ್ತಷ್ಟು ಆಸಕ್ತಿ ಮೂಡಿಸಿತು.
ಜನನದಿಂದಲೂ ನಿಮಗೆ ಕಾಡುತ್ತಿದ್ದ ಲುಫೂಸ್ ರೋಗ ದ ವಿರುದ್ಧ ಹೋರಾಡಲು ಹೇಗೆ ಸಹಾಯಕವಾಯಿತು?
ನನ್ನ 18ನೇ ವಯಸ್ಸಿನವರೆಗಿನ ಬಾಲ್ಯಜೀವನ ರೋಗನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಲ್ಲೇ ಕಳೆದೆ. ಯಾವಾಗ ಯೋಗ ಆರಂಭಿಸಿದೆನೋ ನನ್ನ ಜೀವನ ಬದಲಾಯಿತು. ಮಾತ್ರೆಗಳಿಲ್ಲದೇ ದೇಹ ಉತ್ತಮ ಸ್ಥಿತಿಗೆ ತಲುಪಿತು. ನಾನೂ ಇಂದಿಗೂ ಲೂಫೂಸ್ ರೋಗದ ಜತೆ ಯಾವುದೇ ಮಾತ್ರೆಗಳಿಲ್ಲದೇ ಜೀವಿಸುತ್ತಿದ್ದೇನೆ. ಅದಕ್ಕೆ ಕಾರಣ ಯೋಗ. 18 ವಯಸ್ಸಿಗೆ ಯೋಗ ಮತ್ತು ನಿಯಮಿತವಾಗಿ ಆಹಾರ ಸೇವಿಸಲು ಆರಂಭಿಸಿದೆ. ಆಗ ನನ್ನ ರೋಗ ನಿರೋಧಕ ಶಕ್ತಿ ಹೆಚ್ಚಿತು, ಸ್ನಾಯುಗಳು ಬಲಿಷ್ಠವಾದವು, ಆರೋಗ್ಯದಲ್ಲಿ ಸುಧಾರಣೆ ಕಾಣಲು ಆರಂಭವಾಯಿತು. ಯೋಗಾಭ್ಯಾಸ ಆರಂಭಿಸುವುದಕ್ಕೂ ಮುನ್ನ ಒಂದು ಸೆಮೆಸ್ಟರ್ ಕಾಲೇಜಿಗೆ ರಜೆ ಹಾಕಿದ್ದೆ. ಆದರೆ ಯೋಗ ಆರಂಭಿಸಿದ ನಂತರ ದೇಹಸ್ಥಿತಿ ಸುಧಾರಿಸಿತು, ಪದವಿ ಪಡೆದೆ, ನಿತ್ಯ ಕಾಲೇಜಿಗೆ ಹೋಗುವಷ್ಟು ಶಕ್ತಳಾದೆ. ಲುಫೂಸ್ ನನ್ನ ಜತೆಗೆ ಇತ್ತು, ಆ ರೋಗ ನನಗೆ ಬಾಧಿಸಲೇ ಇಲ್ಲ. ಭೂಮಿಯ ಮೇಲೆ ಲುಫೂಸ್ ರೋಗವಿದ್ದರೂ, ಸ್ವಚ್ಛಂದವಾಗಿ, ಆರೋಗ್ಯದಿಂದ ಇರುವ ಏಕೈಕ ವ್ಯಕ್ತಿ ನಾನು ಎಂದು ಹೆಮ್ಮೆ ಪಡುತ್ತೇನೆ. ಯೋಗ ನಮಗೆ ನಮ್ಮ ದೇಹದ ತಾಕತ್ತನ್ನು, ದೇಹದ ಅವಶ್ಯಗಳನ್ನು ತಿಳಿಸುತ್ತದೆ.
ನಿಮ್ಮ ಜೀವನದಲ್ಲಿ ಹೊಸ ತಿರುವು ಪಡೆದ ಕ್ಷಣ ಯಾವುದು?
13 ಜುಲೈ 2015 ನನ್ನ ಜೀವನಕ್ಕೆ ಹೊಸ ದಿಕ್ಕು ದೊರೆತ ದಿನ. ಎಚ್.ಎಚ್.ಸ್ವಾಮಿ ವೇದ ಭಾರತಿ ಅವರು ನನ್ನನ್ನು ಮಗಳಾಗಿ ಸ್ವೀಕರಿಸಿದ ದಿನ. ನಾನು ಭಾರತ ಪ್ರವಾಸದಲ್ಲಿದ್ದಾಗ ಹೃಷಿಕೇಶದಲ್ಲಿ ಸಿದ್ಧಿ ಸಾಧನೆ ಮಾಡಿದ ಮಹಾನ ಪುರುಷ ಸ್ವಾಮಿ ವೇದ ಭಾರತಿ ಅವರನ್ನು ಭೇಟಿಯಾದೆ. ಅವರು ನನಗೆ ಆಶೀರ್ವದಿಸಿ, ನಮ್ಮ ಜತೆ ಕೂಡಿ ಸಂಪ್ರದಾಯವನ್ನು ಕಲಿತು ಅದನ್ನು ಅರಬ್ ಜಗತ್ತಿಗೆ ಪರಿಚಯಿಸು ಎಂದು ಆಹ್ವಾನಿಸಿದರು. ನಾನು ಅವರ ಆಹ್ವಾನ ಸ್ವೀಕರಿಸಿದೆ. ಅದೊಂದು ಆಕಸ್ಮಿಕ ಘಟನೆಯೋ, ಪವಾಡವೋ ಅವರು ಮಹಾಸಮಾಧಿ ಹೊಂದುವ ಮುನ್ನ ಭೇಟಿಯಾದ ಕೊನೆಯವಳಾಗಿದ್ದೆ. ಅವರ ಆಶೀರ್ವಾದ ಸ್ವೀಕರಿಸಿ, ಅವರ ಮಾರ್ಗದರ್ಶನದಲ್ಲೇ ನಡೆಯುತ್ತಿದ್ದೇನೆ.
ಯೋಗ ಹಿಂದೂ ಬೋಧಿಸುತ್ತದೆ, ಯೋಗ ಇಸ್ಲಾಂ, ಕ್ರಿಶ್ಚಿಯಾನಿಟಿ ವಿರುದ್ಧ ಎಂದು ಹೇಳಲಾಗುತ್ತದೆ. ನೀವೊಬ್ಬ ಮುಸ್ಲಿಮರಾಗಿ ನಿಮ್ಮ ನಂಬಿಕೆಗಳಿಗೆ ಯೋಗ ತಡೆಯೊಡ್ಡಿದೆಯೇ? ಇದನ್ನು ಹೇಗೆ ವಿವರಿಸುತ್ತೀರಿ?
ಯೋಗ ಮತ್ತು ಧರ್ಮಕ್ಕೆ ಸಂಬಂಧವಿಲ್ಲ. ಕೆಲವು ಅಲ್ಪಜ್ಞಾನಿಗಳು ಯೋಗವನ್ನು ಬೋಧಿಸುತ್ತಿರುವುದರಿಂದ ಇಂತಹ ಅನರ್ಥ ಪ್ರಶ್ನೆಗಳು ಹುಟ್ಟುತ್ತವೆ. ಯೋಗ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಬೋಧಿಸಲ್ಪಡುತ್ತದೆ. ಯೋಗ ಇಡೀ ದೇಹದ ಭೌತಚಿಕಿತ್ಸೆಯ. ಅದನ್ನು ನಾವು ಆಧುನಿಕ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡಬೇಕು. ಯೋಗ ಆಸನಗಳಿಂದ ದೈಹಿಕ ವ್ಯಾಯಾಮ ದೊರೆಯುತ್ತದೆ, ಪ್ರಾಣಾಯಾಮದಿಂದ ದೇಹಕ್ಕೆ ಚೈತನ್ಯ ನೀಡುತ್ತದೆ. ಸಮಗ್ರತೆಯನ್ನು ಯೋಗ ಹೊಂದಿದ್ದು, ದೈಹಿಕ, ಮಾನಸಿಕ ಆರೋಗ್ಯ ವಿಧಾನವಾಗಿದ್ದು, ಆಧ್ಯಾತ್ಮದತ್ತ ಸೆಳೆಯುತ್ತದೆ. ಧ್ಯಾನ ಮಾನಸಿಕ ಆರೋಗ್ಯ ನೀಡಿದರೇ, ಆಸನಗಳು ದೈಹಿಕ ಆರೋಗ್ಯ ನೀಡುತ್ತವೆ. ಇದು ಜಾಗತಿಕ ನಿಯಮ, ಯಾವುದೇ ಪ್ರತ್ಯೇಕ ಧರ್ಮಕ್ಕೆ ಸಿಮಿತವಾಗಿಲ್ಲ. ನಮ್ಮ ಯೋಗ ಫೌಂಡೇಷನ್ ನಿಂದ 8000 ಜನರಿಗೆ ತರಬೇತಿ ನೀಡಿದ್ದು, 500 ಯೋಗ ಶಿಕ್ಷಕರು ಯೋಗ ತರಬೇತಿ ನೀಡುವಲ್ಲಿ ನಿರತರಾಗಿದ್ದಾರೆ.
1) ಆಧುನಿಕ ಮಾತ್ರೆಗಳಿಗಿಂತ ಯೋಗ ಮತ್ತು ಆಯುರ್ವೇದ ಪರಿಣಾಮಕಾರಿ ಮತ್ತು ಪರ್ಯಾಯವಾಗಬಲ್ಲವೇ?
ಎಲ್ಲ ವ್ಯವಸ್ಥೆಗಳು ಪರಸ್ಪರ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತವೆ. ರೋಗದ ಆಧಾರದ ಮೇಲೆ ಚಿಕಿತ್ಸೆ ನಿರ್ಧಾರವಾಗುತ್ತದೆ. ಕೆಲವೊಮ್ಮೆ ರಾಸಾಯನಿಕ ಚಿಕಿತ್ಸೆ ಅನಿವಾರ್ಯ. ಅದು ದುಷ್ಪರಿಣಾಮ ಬೀರಿದರೂ. ಆಪತ್ಕಾಲದಲ್ಲಿ ರಾಸಾಯನಿಕ ಚಿಕಿತ್ಸೆ ಪಡೆದರೂ, ನಂತರ ನೈಸರ್ಗಿಕ ಚಿಕಿತ್ಸೆ ಪಡೆಯುವುದರಿಂದ ದೀರ್ಘ ಸಮಯದವರೆಗೆ ಉತ್ತಮ ಪರಿಣಾಮ ಬೀರುತ್ತದೆ. ಎರಡೂ ಪದ್ಧತಿಗಳು ಒಟ್ಟಿಗೆ ಸಾಗಬೇಕು. ಎಲ್ಲ ರಾಷ್ಟ್ರಗಳು ಇದನ್ನು ಅನುಸರಿಸಬೇಕು. ನೈಸರ್ಗಿಕ ಚಿಕಿತ್ಸೆಗೆ ಒತ್ತು ನೀಡಬೇಕು.
ನೀವು ಭಾರತಕ್ಕೆ ಹಲವು ಭಾರಿ ಭೇಟಿ ನೀಡಿದ್ದೀರಿ. ನಿಮ್ಮ ದೃಷ್ಟಿಯಲ್ಲಿ ಭಾರತ ಹೇಗಿದೆ. ಭಾಷೆ, ಸಂಸ್ಕೃತಿ ಮತ್ತು ತತ್ತ್ವಜ್ಞಾನದಲ್ಲಿ?
ನಾನು ಆಯುರ್ವೇದ ಅಧ್ಯಯನ ಮಾಡುವಾಗ ಸಂಸ್ಕೃತವನ್ನು ಕಲಿತೆ. ಅದು ನನ್ನ ಆಸಕ್ತಿಯನ್ನು ಹೆಚ್ಚಿಸಿತು. ನನ್ನ ಪ್ರಕಾರ ಭಾರತದ ಸಂಸ್ಕೃತಿ ಸೌದಿ ಸಂಸ್ಕೃತಿಯಲ್ಲಿ ಬಹಳ ಸಾಮಿಪ್ಯವಿದೆ. ನಾವು ಸೌದಿಯಲ್ಲೂ ಕೌಟುಂಬಿಕ ಸಂಬಂಧಗಳಿಗೆ ಹೆಚ್ಚು ಬೆಲೆ ನೀಡುತ್ತೇವೆ. ಭಾರತಿಯರಂತೆ ಮಸಾಲೆ ಆಹಾರವನ್ನು ನಾವು ಬಳಸುತ್ತೇವೆ. ಭಾರತೀಯ ಸಮಾಜದ ಸಾಮಾಜಿಕ ಮೌಲ್ಯ ಮತ್ತು ನಿಯಮಗಳು ಸೌದಿ ಅರೇಬಿಯಾದಲ್ಲಿ ಒಂದೇ ರೀತಿ ಇವೆ. ಭಾರತ ಸೌದಿ ಯುವಕರ ಮಧ್ಯೆ ಸಂವಹನ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಸೌದಿಯಲ್ಲಿ ಭಾರತದ ಆಹಾರ, ಬಟ್ಟೆ ಟ್ರೆಂಡ್ ಸೃಷ್ಟಿಸುತ್ತಿದೆ. ಅಲ್ಲಿನ ಜನ ಭಾರತೀಯ ಸಿನಿಮಾಗಳನ್ನು ನೋಡುತ್ತಿದ್ದಾರೆ. ಅಲ್ಲದೇ ಯೋಗದತ್ತ ಆಕರ್ಷಿತರಾಗುತ್ತಿದ್ದಾರೆ.
ಸೌದಿ ಅರೇಬಿಯಾದಲ್ಲಿ ವಿಶ್ವ ಯೋಗದಿನ ಅದ್ಧೂರಿಯಾಗಿ ಆಚರಿಸಿದ್ದು, ಭಾರಿ ಸುದ್ದಿಯಾಗಿತ್ತು. ಅದರ ಹಿಂದೆ ನಿಮ್ಮ ಶ್ರಮ ಮಹತ್ವದ್ದು. ಆ ಸಂಘಟನೆಯ ನೆನಪುಗಳ ಬಗ್ಗೆ ಹೇಳಿ.
ನಾವು ಮೊದಲ ಮತ್ತು ಎರಡನೇ ವರ್ಷದ ವಿಶ್ವ ಯೋಗ ದಿನವನ್ನು ಭಾರತೀಯ ರಾಯಭಾರಿ ಕಚೇರಿ ಸಹಯೋಗದಲ್ಲಿ ಸಂಘಟಿಸಿದ್ದೇವು. ಅರಬ್ ಯೋಗ ಫೌಂಡೇಷನ್ ಅದಕ್ಕೆ ಪ್ರಾಯೋಜಕತ್ವ ಮತ್ತು ಸಂಘಟನೆ ಜವಾಬ್ದಾರಿ ಹೊತ್ತಿತ್ತು. ಭಾರತೀಯ ರಾಯಭಾರಿ ಕಚೇರಿ ಮನೋಜ್ ಕೋಸಿ ಅವರು ಸಹಕಾರ ನೀಡಿದ್ದರು. ಹಲವು ರೋಗಗಳನ್ನು ಯೋಗದ ಕುರಿತು ಬಗೆಹರಿಸಬಹುದು ಎಂದು ತಿಳಿಸಿಕೊಟ್ಟೆವು. ಎರಡು ದಿನ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಭಾರಿ ಪ್ರಮಾಣದಲ್ಲಿ ಜನ ಭಾಗಿಯಾಗುವ ಮೂಲಕ ಬೆಂಬಲ ವ್ಯಕ್ತವಾಗಿತ್ತು. ಸಂಘಟನೆಗಾಗಿ ನಾವು ಭಾರತೀಯ ರಾಯಭಾರಿ ಕಚೇರಿಗೆ ಸನ್ಮಾನಿಸಿದ್ದೇವು.
ಯೋಗ ಕಲಿಯುವ ಬರುವ ಯುವ ಪೀಳಿಗೆಗೆ ಏನು ಹೇಳಲು ಬಯಸುತ್ತೀರಿ?
ನೀವು ಯೋಗವನ್ನು ಯಾವ ದೇಶದಲ್ಲಾರೂ ಅಭ್ಯಾಸ ಮಾಡಬಹುದು ಆದರೆ ಅದಕ್ಕೆ ಉತ್ತಮ ಯೋಗ ಶಿಕ್ಷಕ ಅವಶ್ಯ. ಯೋಗ ಮನಸ್ಸು ಮತ್ತು ದೇಹವನ್ನು ಸುಸ್ಥಿತಿಯಲ್ಲಿಡುವ ಸಾಂಪ್ರದಾಯಿಕ ವೈಜ್ಞಾನಿಕ ಪದ್ದತಿ. ಯೋಗದ ದುಷ್ಪರಿಣಾಮಗಳೇನಾದರೂ ಇದ್ದಲ್ಲಿ, ಅದಕ್ಕೆ ಮೂಲ ಕಾರಣ ಸೂಕ್ತ ತರಬೇತಿ ಇಲ್ಲದ್ದು ಮತ್ತು ಮಾಹಿತಿ ಇಲ್ಲದೇ ಯೋಗ ಮಾಡುವುದು.
Leave A Reply