ಅಮಾಯಕ ಅಲ್ಪಸಂಖ್ಯಾತರನ್ನು ಬಂಧಿಸಿದರೆ ವಾರದೊಳಗೆ ಬಿಡುಗಡೆ- ರಮೇಶ್ ಕುಮಾರ್
ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರೋಪಿಗಳಲ್ಲಿ ಅಮಾಯಕ ಅಲ್ಪಸಂಖ್ಯಾತ ಸಮುದಾಯದ ಆರೋಪಿಗಳು ಎನ್ನುವ ಶಬ್ದ ಅಸ್ತಿತ್ವಕ್ಕೆ ಬರಲಿದೆ. ಯಾಕೆಂದರೆ ಅಂತಹ “ಅಮಾಯಕ” ಅಲ್ಪಸಂಖ್ಯಾತ ಆರೋಪಿಗಳಿಗೆ ರಕ್ಷಣೆ ನೀಡಲು ರಾಜ್ಯ ಸರಕಾರ ಮುಂದಾಗಿದೆ. ಅಲ್ಪಸಂಖ್ಯಾತರ ಹಿತವನ್ನು ವಿಶೇಷವಾಗಿ ಕಾಯುವ ಸಲುವಾಗಿ ಪ್ರತ್ಯೇಕ ಆಯೋಗ ರಚನೆಯಾಗಲಿದೆ. ಡಿಸೆಂಬರ್ 18 ರಂದು ಅಲ್ಪಸಂಖ್ಯಾತರ ದಿನದಂದು ಈ ಬಗ್ಗೆ ಘೋಷಣೆ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯ ಅಲ್ಪಸಂಖ್ಯಾತರ ಆಯೋಗ ಬುಧವಾರ ಆಯೋಜಿಸಿದ್ದ “ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ” ಚಿಂತನ ಮಂಥನ ಕಾರ್ಯಕ್ರಮದಲ್ಲಿ ಈ ವಿಷಯ ಸಚಿವರು ತಿಳಿಸಿದರು. ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರೂ ಆಗಿರುವ ರಮೇಶ್ ಕುಮಾರ್ ಈ ಆಯೋಗದಲ್ಲಿ ಒಬ್ಬರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು, ಇಬ್ಬರು ಹಿರಿಯ ನಾಗರಿಕ ಸೇವಾ ಸದಸ್ಯರು ಇರಲಿದ್ದಾರೆ ಎಂದು ತಿಳಿಸಿದರು. ಯಾವುದೇ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿದರೆ ಆಯೋಗಕ್ಕೆ ದೂರು ಸಲ್ಲಿಸಿದ ತಕ್ಷಣ ಒಂದು ವಾರದ ಒಳಗೆ ಬಿಡುಗಡೆ ಮಾಡುವ ಕೆಲಸವನ್ನು ಆಯೋಗ ಮಾಡಲಿದೆ. ಹೀಗೆ ಆದರೆ ಭವಿಷ್ಯದಲ್ಲಿ ಪೊಲೀಸರು ಅಲ್ಪಸಂಖ್ಯಾತರನ್ನು ಬಂಧಿಸಿ ನಂತರ ಆಯೋಗ ಅವರನ್ನು ವಾರದೊಳಗೆ ಬಿಡುಗಡೆ ಮಾಡಿದರೆ ಅದು ಕಳ್ಳ-ಪೊಲೀಸ್ ಆಟವಾಗಿ ಬದಲಾಗುತ್ತದೆ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ. ನಮ್ಮ ರಾಜ್ಯ, ರಾಷ್ಟ್ರದಲ್ಲಿ ಯಾವುದೇ ಹೊಸ ಯೋಜನೆ ಜಾರಿಗೆ ಬಂದಾಗ ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುವವರು ಅಲ್ಪಸಂಖ್ಯಾತರು ಎನ್ನುವುದು ಯಾವುದೇ ಅಂಕಿಸಂಖ್ಯೆಯ ದಾಖಲೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಹಾಗೆ ಜಾತ್ಯಾತೀತ ಸೋಗಿನಲ್ಲಿರುವ ಸರಕಾರಗಳು ಮಾಡುವ ಇಂತಹ ಆಯೋಗಗಳು ಯಾರ ರಕ್ಷಣೆಗಾಗಿ ನಿಲ್ಲುತ್ತವೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಅಲ್ಪಸಂಖ್ಯಾತರಿಗಾಗಿಯೇ ಇರುವ ನಿಗಮಗಳು, ಆಯೋಗಗಳು ಮುಸ್ಲಿಮರ ರಕ್ಷಣೆಗಾಗಿಯೇ ಇರುವಾಗ ಮತ್ತೊಂದು ಅಮಾಯಕ ಅಲ್ಪಸಂಖ್ಯಾತ ಆರೋಪಿಗಳ ರಕ್ಷಣೆಗೆ ಆಯೋಗ ಬೇಕಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇದು ಜನಸಾಮಾನ್ಯರ ತೆರಿಗೆಯ ಹಣದಲ್ಲಿ ಯಾರನ್ನೋ ರಕ್ಷಿಸಲು ಕಾಂಗ್ರೆಸ್ ಸರಕಾರ ಮಾಡುತ್ತಿರುವ ಹುನ್ನಾರ ಎನ್ನುವ ಭಾವನೆ ಕೂಡ ವ್ಯಕ್ತವಾಗುತ್ತಿದೆ. ಅಲ್ಪಸಂಖ್ಯಾತರಿಗೆ ಇಲ್ಲಿಯ ತನಕ ಕೇವಲ ಮೊಣಕೈಗೆ ತುಪ್ಪ ತಾಗಿಸಿ ತಮಾಷೆ ನೋಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಜನ ತಮ್ಮನ್ನು ನಂಬುವುದಿಲ್ಲ ಎನ್ನುವುದು ಗ್ಯಾರಂಟಿಯಾಗಿದೆ. ಆ ನಿಟ್ಟಿನಲ್ಲಿ ಹಿಂದೂ-ಮುಸ್ಲಿಮರ ನಡುವೆ ಹೊಸ ಕಂದಕ ಸೃಷ್ಟಿಸಲು ನಿರ್ಮಾಣ ಆಗುತ್ತಿರುವ ಆಯೋಗದಿಂದ ತೊಂದರೆ, ಕಲಹ ಜಾಸ್ತಿ ಎನ್ನುವುದು ಅವರಿಗೂ ಗೊತ್ತಿದೆ. ಅಷ್ಟಕ್ಕೂ ಪೊಲೀಸರು ಸುಮ್ ಸುಮ್ಮನೆ ಯಾರನ್ನೂ ಬಂಧಿಸುವುದಿಲ್ಲ. ಇನ್ನು ಅಮಾಯಕ ಅಲ್ಪಸಂಖ್ಯಾತರು ಎನ್ನುವುದನ್ನು ಸರಕಾರಗಳು ಹೇಳುವುದು ಕೇವಲ ರಾಜಕೀಯ ಲಾಭಕ್ಕೆ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಮುಸ್ಲಿಮರು, ಕ್ರೈಸ್ತರಿಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೆಚ್ಚು ಆಪ್ತವಾಗುತ್ತಾ, ಗುಜರಾತ್ ಚುನಾವಣಾ ಫಲಿತಾಂಶ ಉತ್ತರ ನೀಡಲಿದೆ!
Leave A Reply