ಹಜ್ ಯಾತ್ರೆಯ ಹೆಸರಲ್ಲಿ ಹಜಾರ್ ಕರೋಡ್ ನುಂಗಿದರೇ?
ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ನ ಅಲಿ-ಇಮ್ರಾನ್ ಎಂಬ ಭಾಗದಲ್ಲಿ ಒಂದು ಮಾತು ಬರುತ್ತದೆ: ಜಗತ್ತಿನಲ್ಲಿರುವ ಮುಸ್ಲಿಮರು, ತಮ್ಮ ಜೀವಮಾನದ ಸಂಪಾದನೆಯಲ್ಲಿ ಮಾಡಿದ ಉಳಿಕೆಯಲ್ಲಿ ಪ್ರವಾದಿ ಪೈಗಂಬರರ ಜನ್ಮಸ್ಥಳ ಮೆಕ್ಕಾ ಮತ್ತು ಮತಪ್ರಚಾರ ಮಾಡಿದ ಸ್ಥಳ ಮದೀನ- ಈ ಎರಡು ಊರುಗಳನ್ನು ಸಂದರ್ಶಿಸಿ ಕಾಬಾದಲ್ಲಿ ಪ್ರಾರ್ಥನೆ ಸಲ್ಲಿಸಿ ಬರಬೇಕು. ಮತ, ಧರ್ಮ ಯಾವುದೇ ಇರಲಿ, ಹೀಗೆ ತಂತಮ್ಮ ಧಾರ್ಮಿಕ ನೆಲೆಗಳಿಗೆ ಭಕ್ತರು ಭೇಟಿ ಕೊಡುವುದು ಸಹಜವೇ. ಕ್ರಿಶ್ಚಿಯನ್ನರು ಬೆತ್ಲಹೆಮ್ಮಿಗೆ, ಹಿಂದೂಗಳು ಕಾಶಿ, ತಿರುಪತಿ, ರಾಮೇಶ್ವರಗಳಿಗೆ, ಬೌದ್ಧರು ಬುದ್ಧಗಯಾಕ್ಕೆ ತಮ್ಮ ಜೀವನದಲ್ಲಿ ಒಮ್ಮೆ ಹೋಗಿಬರಬೇಕೆಂಬ ಕನಸು ಕಾಣುತ್ತಾರೆ. ಅದಕ್ಕಾಗಿ ಸಂಪಾದನೆಯಲ್ಲಿ ಅಷ್ಟೋ ಇಷ್ಟೋ ಕೂಡಿಡುತ್ತಾರೆ. ಕೊನೆಗೆ ತಮಗೆ ಹೋಗಲಾಗದಿದ್ದರೆ ಹಾಗೆ ಯಾತ್ರೆ ಹೊರಟವರ ಕೈಗೆ ಒಂದಷ್ಟು ಚಿಲ್ಲರೆ ಹಾಕಿ ಒಳ್ಳೆಯದಾಗಲಪ್ಪ ಎಂದು ಹರಸುತ್ತಾರೆ. ಮೆಕ್ಕಾ ಮದೀನಗಳ ಯಾತ್ರೆ ಮಾಡಬಹುದು ಎಂದು ಕುರಾನ್ ಹೇಳುತ್ತದೆಯೇ ಹೊರತು ಅದನ್ನೇನೂ ಕಡ್ಡಾಯ ಮಾಡುವುದಿಲ್ಲ. ಬಡವರಾದರೆ ಅಥವಾ ಯಾತ್ರೆ ಕೈಗೊಳ್ಳಲು ಆಗದಂಥ ಬೇರಾವುದಾದರೂ ಪರಿಸ್ಥಿತಿ ಇದ್ದರೆ ಅಂಥವರು ಹಜ್ ಯಾತ್ರೆಯನ್ನು ಮಾಡಬೇಕೆಂಬ ಕಟ್ಟುಪಾಡೇನಿಲ್ಲ ಎನ್ನುತ್ತದೆ.
ಒಂದಾನೊಂದು ಕಾಲದಲ್ಲಿ ನಮ್ಮಲ್ಲಿ ಕಾಶಿಗೆ ಹೋದವರು ಮರಳಿ ಬರುತ್ತಾರೆಂಬ ನಂಬಿಕೆ ಬಹುಪಾಲು ಇರುತ್ತಿರಲಿಲ್ಲವಲ್ಲ, ಹಾಗೆಯೇ ಹಜ್ ಯಾತ್ರೆ ಮಾಡುವವರು ಕೂಡ ವಾಪಸು ಮನೆ ಸೇರಿಕೊಳ್ಳುತ್ತಾರೆಂಬ ಭರವಸೆ ಇರಲಿಲ್ಲ. ಹೆಚ್ಚಿನವರು ತಮ್ಮ ವೃದ್ಧಾಪ್ಯದಲ್ಲಿ ಯಾತ್ರೆ ಹೊರಡುತ್ತಿದ್ದುದರಿಂದ ಊರಿಗೆ ಹಿಂದಿರುಗುವ ಯೋಚನೆಯನ್ನು ತಾವಾಗಿಯೇ ಕೈ ಬಿಡುತ್ತಿದ್ದರು. ಅರೇಬಿಯವನ್ನು ಹೇಗೋ ತಲುಪಿದವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾರದೆ ಕಾಯಿಲೆ ಬಿದ್ದೋ, ಕಿಸೆಯಲ್ಲಿದ್ದ ದುಡ್ಡು ಖರ್ಚಾಗಿಯೋ, ವಾಪಸಾಗುವ ಬಲವಿಲ್ಲವೆಂಬ ನಂಬಿಕೆ ಬಲವಾಗಿಯೋ ಅಂತೂ ನಾನಾ ಕಾರಣಗಳಿಂದ ಅಲ್ಲೇ ಉಳಿದುಬಿಡುತ್ತಿದ್ದರು. ಹೀಗೆ ಎಲ್ಲೆಲ್ಲಿಂದಲೋ ಬಂದು ತಮ್ಮ ದೇಶದಲ್ಲಿ ಉಳಿದು ವೃಥಾ ಹೊರೆಯಾಗುತ್ತಿರುವ ಜನರ ಬಗ್ಗೆ ಒಟ್ಟೊಮಾನ್ ಟರ್ಕರ ಸಾಮ್ರಾಜ್ಯದಲ್ಲಿ ದಿವ್ಯನಿರ್ಲಕ್ಷ್ಯವಿತ್ತು. ನಾವೆಲ್ಲ ಒಂದೇ ಜಾತಿ ಎಂದು ಹೇಳಿಕೊಂಡರೂ ಅರೇಬಿಯದ ಮುಸ್ಲಿಮರು ಬೇರೆ ಕಡೆಗಳಿಂದ ಬಂದವರನ್ನು ಅಷ್ಟು ಸುಲಭದಲ್ಲಿ ತಮ್ಮ ಸ್ನೇಹವೃತ್ತದೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ.
ಈ ಸಮಸ್ಯೆಯ ಬಗ್ಗೆ ಟರ್ಕರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾತಾಡತೊಡಗಿದಾಗ ಬ್ರಿಟಿಷರು, ತಮ್ಮ ವಸಾಹತುಗಳಿಂದ ಹಜ್ ಯಾತ್ರೆಗೆ ಹೊರಡುವ ಮುಸ್ಲಿಮರಿಗೆ ಒಂದಷ್ಟು ಸಹಾಯಧನ ಕೊಡಲು ಶುರುಮಾಡಿದರು. 1932ರಲ್ಲಿ ಭಾರತದಲ್ಲಿ ಈ ಉದ್ದೇಶಕ್ಕಾಗಿಯೇ ಬ್ರಿಟಿಷ್ ಅಧಿಕಾರಿಗಳ ನೇತೃತ್ವದಲ್ಲಿ ಹಜ್ ಸಮಿತಿಯೊಂದು ರಚನೆಯಾಯಿತು. ಸಿಕ್ಕಸಿಕ್ಕವರೆಲ್ಲ ಯಾವ್ಯಾವುದೋ ತಾವುಗಳಿಂದ ಹಜ್ ಯಾತ್ರೆ ಕೈಗೊಳ್ಳದಂತೆ ತಡೆದು ತಾವೇ ಅವರ ಹಾಜರಿ ಪಡೆದು ಮುಂಬೈ ಅಥವಾ ಕಲಕತ್ತೆಯ ಬಂದರುಗಳಿಂದ ಹಡಗುಗಳಲ್ಲಿ ಕಳಿಸುವ ಏರ್ಪಾಟು ಮಾಡಿದರು ಬಿಳಿಯರು. ಈ ವ್ಯವಸ್ಥೆ 1947ರವರೆಗೂ ಯಾವ ಅಡ್ಡಿ-ಆತಂಕಗಳಿಲ್ಲದೆ ನಡೆಯಿತು. ಸ್ವಾತಂತ್ರ್ಯ ಬಂದ ಮೇಲೂ ನಮ್ಮ ಸರಕಾರಗಳು ಹಜ್ ಸಮಿತಿಯ ಕಾರ್ಯಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಲಿಲ್ಲ.
ಆದರೆ 1973ರಲ್ಲಿ ಸರಕಾರ, ಭಾರತೀಯ ಹಜ್ ಯಾತ್ರಿಕರನ್ನು ಹಡಗಿನಲ್ಲಿ ಕಳಿಸುವ ವ್ಯವಸ್ಥೆಗೆ ನಿರ್ಬಂಧ ಹೇರಿತು. ಭಾರತದಿಂದ ಅರೇಬಿಯಕ್ಕೆ ಹೋಗುವವರೆಲ್ಲ ವಿಮಾನದಲ್ಲೇ ಹೋಗಿಬರಬೇಕೆಂಬ ಹೊಸ ನಿಯಮ ಬಂತು. ಜಲಯಾನ ಅಗ್ಗ, ವಾಯುಯಾನ ತುಟ್ಟಿ. ಈ ವ್ಯತ್ಯಾಸವನ್ನು ತುಂಬುವವರು ಯಾರು ಎಂಬ ಪ್ರಶ್ನೆ ಬಂದಾಗ, ಸರಕಾರ ಆ ಹೆಚ್ಚುವರಿ ಖರ್ಚನ್ನು ತಾನೇ ನೋಡಿಕೊಳ್ಳುತ್ತೇನೆಂದು ವಾಗ್ದಾನ ಮಾಡಿತು. ಜಲಯಾನಕ್ಕೆ ಆಗುತ್ತಿದ್ದ ಖರ್ಚನ್ನಷ್ಟೇ ಮುಸ್ಲಿಮ್ ಯಾತ್ರಿಕರಿಂದ ವಸೂಲಿ ಮಾಡಿ, ಏರ್ ಟಿಕೆಟ್‌ಗೆ ಬೇಕಾದ ಉಳಿದ ದುಡ್ಡನ್ನು ತಾನಾಗಿ ತುಂಬಿಕೊಟ್ಟಿತು. ಅದಕ್ಕೆ ತಕ್ಕಂತೆ ಕಾಯ್ದೆಯ ರಚನೆಯೂ ಆಯಿತು. ಅಲ್ಲಿಂದೀಚೆಗೆ ಹಜ್ ಯಾತ್ರೆ ಸರಕಾರದ ಕಣ್ಗಾವಲಲ್ಲಿ, ಸರಕಾರದ ಆಂಶಿಕ ಖರ್ಚಿನಲ್ಲಿ ನಡೆದುಕೊಂಡು ಬಂದಿದೆ. ವರ್ಷಗಳು ಕಳೆದಂತೆ ಯಾತ್ರಿಕರ ಸಂಖ್ಯೆ ಹೇಗೋ ಹಾಗೆಯೇ ಯಾನದ ಖರ್ಚುವೆಚ್ಚವೂ ಹೆಚ್ಚಾಗಿದೆ. 1993ರಲ್ಲಿ 25 ಸಾವಿರ ಇದ್ದ ಭಾರತೀಯ ಹಜ್ ಯಾತ್ರಿಕರು ಇಂದು ಒಂದೂವರೆ ಲಕ್ಷವಾಗಿದ್ದಾರೆ. 93ರಲ್ಲಿ ಸರಕಾರ ಪ್ರತಿ ಯಾತ್ರಿಕನಿಂದ 21 ಸಾವಿರ ರುಪಾಯಿ ಪಡೆಯುತ್ತಿದ್ದರೆ ಇಂದು 1.25 ಲಕ್ಷ ವಸೂಲಿ ಮಾಡುತ್ತಿದೆ. 93ರಲ್ಲಿ 17 ಸಾವಿರದಷ್ಟಿದ್ದ ವಿಮಾನಯಾನದ ದರ ಇಂದು 60 ಸಾವಿರ ಮುಟ್ಟುತ್ತಿದೆ.
ಹಜ್ ಯಾತ್ರೆಗೆ ಹೋಗುವವರು ಒಂದೋ ಸರಕಾರದ ಕಡೆಯಿಂದ ಪ್ರಯಾಣಿಸಬೇಕು, ಇಲ್ಲವೇ ಯಾವುದಾದರೂ ಟ್ರಾವೆಲಿಂಗ್ ಏಜೆನ್ಸಿ ಮೂಲಕ ಹೋಗಬೇಕು. ಯಾರ ಮರ್ಜಿಯೂ ಬೇಡವೆನ್ನುತ್ತತಾವಾಗಿ ಹೋಗಿಬರಲು ಅವಕಾಶವಿಲ್ಲ. ಏಕೆಂದರೆ, ಮೆಕ್ಕಾ-ಮದೀನಗಳಿಗೆ ಹೋಗುವವರು ತಮ್ಮ ವಸತಿ ವ್ಯವಸ್ಥೆಯನ್ನು ಮೊದಲೇ ಮಾಡಿ ಕೊಂಡಿರಬೇಕು ಎಂದು ಸೌದಿ ಅರೇಬಿಯಾದ ಕಟ್ಟುನಿಟ್ಟಾದ ಆಜ್ಞೆ ಇದೆ. ಹಾಗಾಗಿ ಸರಕಾರ ಮತ್ತು ಖಾಸಗಿ ಟ್ರಾವೆಲಿಂಗ್ ಸಂಸ್ಥೆಗಳು ಸೌದಿಯ ಸ್ಥಳೀಯರ ಜತೆ ಮೊದಲೇ ಒಪ್ಪಂದ ಮಾಡಿಕೊಂಡು ಯಾತ್ರಿಕರಿಗೆ ಬೇಕಾದ ತಾತ್ಕಾಲಿಕ ವಸತಿಯ ವ್ಯವಸ್ಥೆ ಮಾಡಿಕೊಳ್ಳುತ್ತವೆ. ಪ್ರತಿ ದೇಶದಿಂದ ಎಷ್ಟು ಪ್ರವಾಸಿಗರು ಬಂದು ಹೋಗಬಹುದೆಂಬ ವಿಷಯದಲ್ಲೂ ನಿಯಮಗಳಿರುವುದರಿಂದ, ಭಾರತೀಯ ಹಜ್ ಯಾತ್ರಿಕರು ಸರಕಾರದ ಮರ್ಜಿಗೆ ಬೀಳುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ವೀಸಾ ಪ್ರಕ್ರಿಯೆಯಿಂದ ಹಿಡಿದು ಎಲ್ಲ ವಿಷಯಗಳಲ್ಲೂ ಸರಕಾರದ್ದೇ ವ್ಯವಸ್ಥೆಯಾದರೆ ನಂಬಿಕೆಗೆ ಹೆಚ್ಚು ಅರ್ಹವೆಂಬ ನಂಬಿಕೆಯಿಂದ ಯಾತ್ರಿಕರು ಖಾಸಗಿ ಏಜೆಂಟುಗಳಿಗೆ ಎಡತಾಕುವ ಬದಲು ಸರಕಾರಿ ವ್ಯವಸ್ಥೆಯನ್ನು ಆಯ್ದುಕೊಳ್ಳುತ್ತಾರೆ. ಹಜ್ ಯಾತ್ರೆಗೆ ನಾಲ್ಕೈದು ತಿಂಗಳಿರುವಾಗಲೇ ಯಾತ್ರಿಕರಿಂದ ದುಡ್ಡು ಪಡೆಯುವ ಸರಕಾರ ವಿಮಾನದ ಟಿಕೆಟ್‌ಗಳನ್ನು ಮೊದಲೇ ಕಾಯ್ದಿರಿಸುತ್ತದೆ.
ಏರ್ ಇಂಡಿಯಾ ಅಲ್ಲದೆ ಬೇರೆ ವಿಮಾನಯಾನ ಸಂಸ್ಥೆಗಳಿಗೆ ಹಜ್ ಯಾತ್ರಿಕರನ್ನು ಕರೆದೊಯ್ಯುವ ಭಾಗ್ಯವಿಲ್ಲ. ಅರೇಬಿಯಾವನ್ನು ಸಂದರ್ಶಿಸುವ ತನ್ನ ದೇಶದ ಪ್ರಜೆಗಳಿಗಾಗಿ ಭಾರತ 550ಕ್ಕೂ ಹೆಚ್ಚು ಮಂದಿಯ ತಂಡವನ್ನು ಕೂಡ ಕಳಿಸುತ್ತದೆ. ಅದರಲ್ಲಿ 100ಕ್ಕೂ ಹೆಚ್ಚು ತಜ್ಞವೈದ್ಯರು, ಅಷ್ಟೇ ಸಂಖ್ಯೆಯ ದಾದಿಯರು, ಪ್ಯಾರಾ-ಮೆಡಿಕಲ್ ಸಿಬ್ಬಂದಿ, ಹಜ್ ಅಧಿಕಾರಿಗಳು ಇರುತ್ತಾರೆ. ಭಾರತ ಸರಕಾರ ಹಜ್ ಯಾತ್ರೆಯ ಸಂದರ್ಭದಲ್ಲಿ ಮೆಕ್ಕಾದಲ್ಲಿ 75 ಹಾಸಿಗೆಯ, ಮದೀನದಲ್ಲಿ 15 ಹಾಸಿಗೆಯ ಆಸ್ಪತ್ರೆಗಳನ್ನು ಕೂಡ ನಡೆಸುತ್ತದೆ. ಅವೆರಡು ಜಾಗಗಳಲ್ಲಿ 15ಕ್ಕೂ ಹೆಚ್ಚು ಕ್ಲಿನಿಕ್‌ಗಳನ್ನೂ ಔಷಧ ಕೇಂದ್ರಗಳನ್ನೂ ಸ್ಥಾಪಿಸುತ್ತದೆ. ಭಾರತದಿಂದ ಹೋದ ವಿಮಾನಗಳು ಇಳಿಯುವ ಸೌದಿಯ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಕೂಡ ಭಾರತೀಯರ ಆರೋಗ್ಯ ನೋಡಿಕೊಳ್ಳಲು ಮೂರು ವೈದ್ಯತಂಡಗಳನ್ನು ಇರಿಸಲಾಗುತ್ತದೆ. ಮೆಕ್ಕಾ-ಮದೀನಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಆಂಬ್ಯುಲೆನ್ಸ್ ಗಳನ್ನು ಭಾರತ ಸನ್ನದ್ಧ ಸ್ಥಿತಿಯಲ್ಲಿಡುತ್ತದೆ. ಪ್ರತಿ ವರ್ಷ, 3 ಕೋಟಿ ರುಪಾಯಿಯಷ್ಟು ಬೆಲೆಬಾಳುವ ಔಷಧಗಳನ್ನು ಭಾರತದ ಔಷಧ ಕೇಂದ್ರಗಳಲ್ಲಿ ಹಜ್ ಯಾತ್ರಿಕರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಅಲ್ಲಿ ನಮ್ಮ ದೇಶದ ಯಾತ್ರಿಕರಿಗೆ ಸಿಗುವ ಯಾವ ವೈದ್ಯಕೀಯ ಸೇವೆಗೂ ದುಡ್ಡು ಪಡೆಯಲಾಗುವುದಿಲ್ಲ.
ಆಗಲೇ ಹೇಳಿದಂತೆ, ಸರಕಾರ ಪ್ರತಿ ಯಾತ್ರಿಕನಿಂದ ಒಂದು ನಿರ್ದಿಷ್ಟ ಮೊತ್ತವನ್ನಷ್ಟೇ ಪಡೆದು ವಿಮಾನಯಾನದ ಬಾಕಿ ದುಡ್ಡನ್ನು ತಾನಾಗಿ ತುಂಬುವುದನ್ನು ನಾವು ಸಂಕ್ಷಿಪ್ತವಾಗಿ ಹಜ್ ಸಬ್ಸಿಡಿ ಎಂದು ಕರೆಯುತ್ತಿದ್ದೇವೆ. 1994ರಲ್ಲಿ ಭಾರತದ ಸರಕಾರ ಹಜ್ ಸಬ್ಸಿಡಿಗಾಗಿ ವಿನಿಯೋಗಿಸಿದ ಮೊತ್ತ 10.51 ಕೋಟಿ ರುಪಾಯಿ. ಆದರೆ 2011ರಲ್ಲಿ, ಅಂದರೆ ಕೇವಲ ಒಂದೂವರೆ ದಶಕದಲ್ಲಿ ಅದು 685 ಕೋಟಿ ರುಪಾಯಿ ಮುಟ್ಟಿತು ಎಂದರೆ ನಂಬುತ್ತೀರಾ? ಒಸರು ಇದ್ದಲ್ಲಿ ಹಸಿರು ಚಿಗುರುವುದು ಸಾಮಾನ್ಯವೇ ತಾನೇ? ಹಾಗೆಯೇ, ದುಡ್ಡಿನ ವ್ಯವಹಾರವಿದ್ದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ಸಿಗುವುದೂ ಸಹಜ.
ಹಜ್ ಸಬ್ಸಿಡಿಯ ಹೆಸರಲ್ಲಿ ನಡೆಯುತ್ತಿರುವ ಗೋಲ್‌ಮಾಲಿನ ಒಂದು ಸಣ್ಣ ಸ್ಯಾಂಪಲ್ ಕೊಡುತ್ತೇನೆ ನೋಡಿ. ಬೇರೆಲ್ಲ ಬಿಡಿ, ಕೇವಲ ಮೂರು ವರ್ಷಗಳ ಲೆಕ್ಕವನ್ನಷ್ಟೇ ನೋಡೋಣ. 2007, 08, 09 – ಈ ಮೂರು ವರ್ಷಗಳಲ್ಲಿ ಕೇಂದ್ರ ಸರಕಾರ ಹಜ್ ಸಬ್ಸಿಡಿಗಾಗಿ ಖರ್ಚು ಮಾಡಿದ ದುಡ್ಡಿನ ಮೊತ್ತವೆಷ್ಟು? ಸರಕಾರ ಸಂಸತ್ತಿನಲ್ಲಿ ಕೊಟ್ಟ ಲೆಕ್ಕ: ರು.595 ಕೋಟಿ (2007), 895 ಕೋಟಿ (2008), 864 ಕೋಟಿ (2009). ಆದರೆ ಹಜ್ ಸಬ್ಸಿಡಿಯನ್ನು ನಿಲ್ಲಿಸಬೇಕೆಂದು ಒಬ್ಬರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿದಾಗ, ಹತ್ತು ವರ್ಷಗಳಲ್ಲಿ ತಾನು ಎಷ್ಟೆಷ್ಟು ಕೋಟಿಗಳನ್ನು ಹಜ್ ಯಾತ್ರೆಗಾಗಿ ಖರ್ಚು ಮಾಡಿದೆನೆಂಬ ಲೆಕ್ಕವನ್ನು ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಕೊಡಬೇಕಾಗಿ ಬಂತು. ಆಗ ಅದು ಕೊಟ್ಟ ಪಟ್ಟಿಯಲ್ಲಿ 2007-09ರ ಮೂರು ಸಾಲುಗಳಲ್ಲಿ ನಮೂದಿಸಿದ ಕೋಟಿಗಳು ಕ್ರಮವಾಗಿ 477, 895 ಮತ್ತು 690. ಅದಾಗಿ ಒಂದು ವರ್ಷದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಹಾಕಿದ್ದ ಆರ್‌ಟಿಐ ಅರ್ಜಿಗೆ ಉತ್ತರಿಸುವಾಗಲೂ ಸರಕಾರ ಇದೇ ಅಂಕಿ-ಅಂಶವನ್ನು ಕೊಟ್ಟಿತು. ಅಂದರೆ ಸಂಸತ್ತಿನಲ್ಲಿ ಕೊಟ್ಟ ಸಂಖ್ಯೆಗೂ ನ್ಯಾಯಾಲಯಕ್ಕೆ ಸಲ್ಲಿಸಿದ ಮಾಹಿತಿಗೂ, ಕೇವಲ ಮೂರು ವರ್ಷಗಳ ಅಂಕಿ-ಅಂಶದಲ್ಲೇ 292 ಕೋಟಿ ರುಪಾಯಿಗಳ ವ್ಯತ್ಯಾಸ! ಈಗ ಅಸಲಿ ವಿಷಯಕ್ಕೆ ಬರೋಣ.
ಈ ಮೂರು ವರ್ಷಗಳಲ್ಲಿ ಸರಕಾರದ ವ್ಯವಸ್ಥೆಯ ಮೂಲಕ ಹಜ್ ಯಾತ್ರೆ ಮಾಡಿದ ಭಾರತೀಯರ ಸಂಖ್ಯೆ 1,10,000, 1,23,211 ಮತ್ತು 1,25,000. ಮೂರೂ ವರ್ಷಗಳಲ್ಲಿ ಸರಕಾರ ಕೊಟ್ಟ ಸಬ್ಸಿಡಿಯ ಮೊತ್ತ ಕ್ರಮವಾಗಿ 35,182, 60,640 ಮತ್ತು 43,200 ರುಪಾಯಿಗಳು. ಅಂದರೆ ಅದು ಖರ್ಚು ಮಾಡಿದ ಒಟ್ಟು ದುಡ್ಡು 387, 747 ಮತ್ತು 540 ಕೋಟಿ ರುಪಾಯಿಗಳು. ಕೂಡಿದರೆ 1674 ಕೋಟಿ ರುಪಾಯಿಗಳ ಬಾಬ್ತು. ಸಂಸತ್ತಿಗೆ ಕೊಟ್ಟ ಲೆಕ್ಕಕ್ಕೂ ಇದಕ್ಕೂ 680 ಕೋಟಿ ರುಪಾಯಿಗಳ ವ್ಯತ್ಯಾಸ! ಆಚೀಚಿನ ವರ್ಷಗಳನ್ನೂ ಸೇರಿಸಿಕೊಂಡರೆ, 2006ರಿಂದ 2011ರವರೆಗಿನ ಕೇವಲ ಐದು ವರ್ಷಗಳ ಅವಧಿಯಲ್ಲಿ, ಸರಕಾರ ತಾನು ಖರ್ಚು ಮಾಡಿದೆನೆಂದು ತೋರಿಸಿದ ಲೆಕ್ಕಕ್ಕೂ (3347 ಕೋಟಿ ರುಪಾಯಿ) ನಿಜವಾಗಿ ಮಾಡಿದ ಖರ್ಚಿಗೂ (2557 ಕೋಟಿ ರುಪಾಯಿ) ಇರುವ ವ್ಯತ್ಯಾಸ 790 ಕೋಟಿ ರುಪಾಯಿ! ಇನ್ನು, ಕಳೆದ 43 ವರ್ಷಗಳಲ್ಲಿ ಹಜ್ ಹೆಸರಲ್ಲಿ ಕಾಲಕಾಲಕ್ಕೆ ಬಂದುಹೋದ ಸರಕಾರಗಳು ಮಾಡಿರುವ ಭ್ರಷ್ಟಾಚಾರವೆಂಬ ಕೊಚ್ಚೆಯ ಪ್ರಮಾಣ ಎಷ್ಟಿರಬಹುದು! ಹಜ್ ಯಾತ್ರೆ ಎಂಬುದೇ ನಮ್ಮ ಸರಕಾರಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ!
ಇದು ಭ್ರಷ್ಟಾಚಾರದ ಒಂದು ಕೋನವಾದರೆ ಏರ್ ಇಂಡಿಯಾದಲ್ಲಿ ನಡೆದಿರುವ ಅವ್ಯವಹಾರದ್ದು ಇನ್ನೊಂದು ಕರಾಳಮುಖ. ಕಳೆದ ನಾಲ್ಕೈದು ವರ್ಷಗಳಲ್ಲಿ ದೆಹಲಿ-ಜೆಡ್ಡಾ-ದೆಹಲಿ ರೌಂಡ್ ಟ್ರಿಪ್‌ಗೆ ಉಳಿದ ವಿಮಾನಸಂಸ್ಥೆಗಳು ಕೇವಲ 18,000 ರುಪಾಯಿ ದರ ನಿಗದಿ ಪಡಿಸಿದ್ದರೆ, ಏರ್ ಇಂಡಿಯಾ ದರ, 62,000 ರುಪಾಯಿ! ಅಂದರೆ ಇರುವುದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ದರ ನಿಗದಿಪಡಿಸಿ ಏರ್ ಇಂಡಿಯಾ, ಹಜ್ ಯಾತ್ರೆಯ ನೆಪದಲ್ಲಿ ಸರಕಾರದಿಂದ ದುಡ್ಡು ಪೀಕುತ್ತಿತ್ತು. ಹಾಗಾದರೆ ಅಲ್ಲಿ ನಡೆದಿರುವ ಭ್ರಷ್ಟಾಚಾರದ ಬ್ರಹ್ಮಾಂಡ ಸ್ವರೂಪ ಇನ್ಯಾವ ಬಗೆಯದ್ದಿರಬಹುದು! ಬೇರೆಲ್ಲ ಬೇಡ, 2007ರಿಂದ 2012ರವರೆಗಿನ ಐದು ವರ್ಷಗಳಲ್ಲಿ ಏರ್ ಇಂಡಿಯಾ ಹಜ್ ಯಾತ್ರೆಗೆ ನಿಗದಿಪಡಿಸಿದ್ದ ದರದ ಪಟ್ಟಿ ನೋಡಿ: ರು. 47182, 72640, 55200, 47675 ಮತ್ತು 54800. ಇಲ್ಲಿ ಎರಡನೆಯ ಸಂಖ್ಯೆ ಯಾಕೆ ಅಷ್ಟೊಂದು ಮೇಲಕ್ಕೇರಿದೆ? 2008ರಲ್ಲಿ ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿಯೇನಾದರೂ ಉದ್ಭವಿಸಿತ್ತೆ? ಉಳಿದ ವಿಮಾನಯಾನ ಸಂಸ್ಥೆಗಳು 18-20 ಸಾವಿರ ರುಪಾಯಿಗಳಿಗೆಲ್ಲ ಸೇವೆ ಒದಗಿಸುವಾಗ, ಅದೇ ದೂರಕ್ಕೆ ಸರಕಾರಿ ಸಂಸ್ಥೆ ಹೀಗೆ ದೊಡ್ಡಮೊತ್ತದ ಟಿಕೆಟ್ ನಿಗದಿಪಡಿಸಲು ಕಾರಣವೇನು? ಅದೂ ನಾಲ್ಕೈದು ತಿಂಗಳ ಮೊದಲೇ ಬುಕ್ಕಿಂಗ್ ಮಾಡಿಡುವಾಗ? 2001ರಲ್ಲಿ 156 ಕೋಟಿ ರುಪಾಯಿ ಸಬ್ಸಿಡಿ ಖರ್ಚು ತೋರಿಸಿದ್ದ ಸರಕಾರ, 2008ರ ಹೊತ್ತಿಗೆ 900 ಕೋಟಿ ರುಪಾಯಿ ತೋರಿಸ ಹತ್ತಿದಾಗ, ಹೀಗೇ ಬಿಟ್ಟರೆ ಇನ್ನೈದು ವರ್ಷಗಳಲ್ಲಿ ಖರ್ಚು 2000 ಕೋಟಿ ರುಪಾಯಿಗಳನ್ನು ಮುಟ್ಟಬಹುದೆಂದು ಬೆದರಿದ ಸರ್ವೋಚ್ಚ ನ್ಯಾಯಾಲಯ ಕೊನೆಗೂ ಚಾಟಿ ಬೀಸಿತು.
ಇನ್ನೊಬ್ಬರ ದುಡ್ಡಿನಲ್ಲಿ ಹಜ್ ಯಾತ್ರೆ ಹೋಗುವುದನ್ನು ಮುಸ್ಲಿಮರೇ ಹರಾಮ್ ಎಂದು ಪರಿಗಣಿಸುವಾಗ, ನೀವೇಕೆ ವಿಶೇಷ ಕಾಳಜಿ ವಹಿಸಿ ಈ ಸಬ್ಸಿಡಿ ಕೊಡುವ ಘನಕಾರ್ಯ ಮಾಡುತ್ತಿದ್ದೀರಿ? ಇನ್ನು ಹತ್ತು ವರ್ಷಗಳಲ್ಲಿ ಈ ಸಬ್ಸಿಡಿಯನ್ನು ಕಡಿಮೆ ಮಾಡುತ್ತಾ ಬಂದು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅದು 2012ರಲ್ಲಿ ಮಹತ್ವದ ತೀರ್ಪು ಕೊಟ್ಟಿತು. ತೀರ್ಪೇನೋ ಸ್ವಾಗತಾರ್ಹವೇ. ಆದರೆ, ಕಡಿಮೆ ಮಾಡುತ್ತಾ ಬಂದು ನಿಲ್ಲಿಸಬೇಕು ಎಂದು ಹೇಳಲು ಇದೇನು ಮದ್ಯ, ಸಿಗರೇಟಿನಂತೆ ಚಟವೇ? ಒಂದೇ ಸಲಕ್ಕೆ ಈ ಸಬ್ಸಿಡಿ ನಾಟಕವನ್ನು ನಿಲ್ಲಿಸಿ ಮುಸ್ಲಿಮರಿಗೆ ಪ್ರತಿವರ್ಷ ಆಗುತ್ತಿರುವ ಮುಜುಗರವನ್ನು ತಪ್ಪಿಸಬಹುದಲ್ಲವೆ?
ಪ್ರಧಾನಿ ನರೇಂದ್ರ ಮೋದಿಯವರು, ಎಲ್ಲೆಲ್ಲೋ ಅಡಗಿ ಕೂತಿರುವ ಕಾಳಧನವನ್ನು ಹುಡುಹುಡುಕಿ ಹೊರತೆಗೆಯುವ ಕೆಲಸಕ್ಕಾಗಿ ರಾತ್ರಿಹಗಲು ನಿದ್ದೆಗೆಟ್ಟು ದುಡಿಯುತ್ತಿದ್ದಾರೆ. ಅವೆಲ್ಲ ಬೇಡ, ಹಜ್ ಯಾತ್ರೆಯ ಹೆಸರಲ್ಲಿ 2004ರಿಂದ 14ರವರೆಗೆ ಯುಪಿಎ ಸರಕಾರ ನಡೆಸಿರುವ ಭಾನಗಡಿಗಳ ಕಡತಗಳನ್ನು ಹೊರಗೆಳೆದು ಲೆಕ್ಕ ಮಾಡಲು ಕೂತರೆ ಸಾಕು, ಸಾವಿರಾರು ಕೋಟಿ ರುಪಾಯಿಗಳನ್ನು ನುಂಗಿನೊಣೆದು ತೇಗಿ ಬಿದ್ದಿರುವ ದೊಡ್ಡ ತಿಮಿಂಗಲಗಳನ್ನೇ ಹೊರಗೆಳೆಯಬಹುದು. ಮೋದಿಜಿ ಮಾರಿಬಲೆ ಬೀಸುತ್ತಾರಾ
Leave A Reply