ಮಂಗಳೂರು ವಿವಿಯಲ್ಲಿ ಸೆಕ್ಯೂರಿಟಿ ಸಿಬ್ಬಂದಿಗಳ ಮೇಲಿನ ದೌರ್ಜನ್ಯ ಕೇಳುವುದಿಲ್ಲವೇ ಬೈರಪ್ಪನವರೇ!
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೆಕ್ಯೂರಿಟಿ ಕೆಲಸವನ್ನು ಮಾಡುವವರು ಕೂಡ ದೌರ್ಜನ್ಯದಿಂದ ಮುಕ್ತರಾಗಿಲ್ಲ ಎನ್ನುವುದಕ್ಕೆ ಪುರಾವೆಗಳು ಸಿಕ್ಕಿವೆ. ಕಾರ್ಮಿಕ ನಿಯಮಗಳನ್ನು ಗಾಳಿಗೆ ತೂರಿ ಹೇಗೆ ಇಲ್ಲಿ ಕೆಲಸಗಾರರನ್ನು ದುಡಿಸಲಾಗುತ್ತಿದೆ ಎನ್ನುವುದಕ್ಕೆ ಅವರು ಮಾನವ ಹಕ್ಕು ಆಯೋಗಕ್ಕೆ ಕೊಟ್ಟಿರುವ ದೂರುಗಳೇ ಸಾಕ್ಷಿ. ಲೇಬರ್ ರೂಲ್ ಪ್ರಕಾರ ಯಾವುದೇ ಕೆಲಸಗಾರನಿಗೂ ವಾರಕ್ಕೆ ಕನಿಷ್ಟ ಒಂದು ದಿನ ರಜೆ ಕೊಡಲೇಬೇಕು. ತಿಂಗಳಿಗೆ ಮೂವತ್ತು ದಿನ ಕೂಡ ದುಡಿಯುವಂತಹ ವ್ಯವಸ್ಥೆ ಮತ್ತು ದುಡಿಯಲೇಬೇಕೆಂಬ ಒತ್ತಡ ಭಾರತದ ಯಾವುದೇ ಭಾಗದಲ್ಲಿಯೂ ಇರಲಿಕ್ಕಿಲ್ಲ ಮತ್ತು ಇಲ್ಲ ಕೂಡ. ನಮ್ಮ ದೇಶದ ಕಾನೂನೇ ಹಾಗಿದೆ. ಯಾವುದೇ ಮನುಷ್ಯ ತನ್ನ ದೇಹಕ್ಕೆ ಮತ್ತು ಮನಸ್ಸಿಗೆ ಅಗತ್ಯವಾಗಿ ಬೇಕಾಗಿರುವ ರೆಸ್ಟ್ ಪಡೆದುಕೊಳ್ಳಲು ಒಂದು ದಿನ ರಜೆ ಪಡೆಯಲೇಬೇಕು. ಆದರೆ ಮಂಗಳೂರು ವಿಶ್ವವಿದ್ಯಾನಿಲಯ ಹಾಗಲ್ಲ. ಇಲ್ಲಿ ಸೆಕ್ಯೂರಿಟಿ ಸಿಬ್ಬಂದಿಗಳು ವಾರಕ್ಕೆ ಏಳು ದಿನಗಳ ಪ್ರಕಾರ ತಿಂಗಳಿಗೆ ಮೂವತ್ತು ದಿನ ದುಡಿಯಲೇಬೇಕು. ಅದು ಅವರಿಗೆ ಅನಿವಾರ್ಯ ಮತ್ತು ಒತ್ತಡ.
ಒಂದು ದಿನ ವಾರದಲ್ಲಿ ರಜೆ ಹಾಕಿದರೆ ಏನಾಗುತ್ತೆ. ಒಂದು ದಿನದ ಸಂಬಳ ಕಟ್ ಆಗುತ್ತೆ. ಆದ್ದರಿಂದ ಈ ಸುರಕ್ಷಾ ಸಿಬ್ಬಂದಿಗಳು ತಿಂಗಳಿಗೆ ಮೂವತ್ತು ದಿನ ಕಡ್ಡಾಯವಾಗಿ ಕೆಲಸ ಮಾಡಲೇಬೇಕು. ಆಗದಿದ್ದರೆ ಕೆಲಸದಿಂದ ನಿರ್ದಾಕ್ಷಿಣ್ಯವಾಗಿ ತೆಗೆದು ಬಿಸಾಡುತ್ತಾರೆ.
ಇನ್ನು ರಜೆ ಇಲ್ಲದೆ ತಿಂಗಳೀಡಿ ದುಡಿಯುವ ಸಿಬ್ಬಂದಿಗಳಿಗೆ ನಿಯಮ ಪ್ರಕಾರ ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಿಸಲಾಗುತ್ತೆ ಗೊತ್ತಾ? ಸುಮಾರು 12 ಗಂಟೆ. ಒಬ್ಬ ವ್ಯಕ್ತಿಗೆ ದಿನಕ್ಕೆ ಗರಿಷ್ಟ ಎಂಟು ಗಂಟೆ ಕೆಲಸ ಮಾಡಿಸುವುದಕ್ಕಿಂತ ಹೆಚ್ಚುವರಿ 4 ಗಂಟೆ ಸೇರಿ ಒಟ್ಟು 12 ಗಂಟೆ ದುಡಿಸುವ ಇಲ್ಲಿನ ವ್ಯವಸ್ಥೆಯ ಬಗ್ಗೆ ಇಲ್ಲಿಯ ಸೆಕ್ಯೂರಿಟಿ ಸಿಬ್ಬಂದಿಗಳು ಧ್ವನಿ ಎತ್ತಿದ್ದಾರೆ. ಆ ಬಗ್ಗೆ ಮತ್ತೆ ಬರೋಣ. ಅದಕ್ಕಿಂತ ಮೊದಲು ತಿಂಗಳಿಗೆ ಮೂವತ್ತು ದಿನ, ದಿನಕ್ಕೆ 12 ಗಂಟೆ ಕೆಲಸ ಮಾಡುವವರಿಗೆ ಇವರು ಸರಿಯಾದ ಸಂಬಳವಾದರೂ ಕೊಡುತ್ತಾರಾ ಎಂದು ನೋಡಿದರೆ ಅದು ಕೂಡ ಇಲ್ಲ. ಅದು ಕೂಡ ಕಡಿತ. ಒಬ್ಬ ಗಾರ್ಡಿಗೆ ಇರುವ ಸಂಬಳ ನಿಯಮ ಪ್ರಕಾರ 15,574 ರೂಪಾಯಿ ಆದರೆ ಅವನಿಗೆ ಸಿಗುವ ಸಂಬಳ 12500 ಮಾತ್ರ. ಅದರ ಅರ್ಥ ಅಲ್ಲಿ ಕೂಡ ಮೂರು ಸಾವಿರ ರೂಪಾಯಿ ಕಟ್ ಮಾಡಿಯೇ ಕೊಡುತ್ತಾರೆ. ಇನ್ನು ಈ ಸೆಕ್ಯೂರಿಟಿ ಸಿಬ್ಬಂದಿಗಳ ಸೂಪರ್ ವೈಸರ್ ಗಳ ಸಂಬಳ ನಿಯಮ ಪ್ರಕಾರ 16,994 ರೂಪಾಯಿ. ಆದರೆ ಸಿಗುವುದು 13,500 ರೂಪಾಯಿಗಳು. ಅಲ್ಲೂ ಕೂಡ ಕಡಿತ ಅದು ಕೂಡ ಮೂರುವರೆ ಸಾವಿರ ರೂಪಾಯಿ. ರಜೆ ಇಲ್ಲ, 12 ಗಂಟೆ ಡ್ಯೂಟಿ, ಸಂಬಳದಲ್ಲಿ ದೊಡ್ಡ ಮೊತ್ತ ಕಡಿತ. ಇಷ್ಟಾಗಿಯೂ ಸಂಬಳ ಸರಿಯಾದ ಸಮಯಕ್ಕೆ ಕೊಡುತ್ತಾರಾ? ಅದೂ ಕೂಡ ಇಲ್ಲ. ತಿಂಗಳಲ್ಲಿ ಹತ್ತನೆ ತಾರೀಕಿಗೆ ಕೊಡಬೇಕಾದ ಸಂಬಳ ಹದಿನೈದನೇ ತಾರೀಕಿಗೂ ಬರಬಹುದು ಅಥವಾ ಇಪ್ಪತ್ತಕ್ಕೂ ಆಗಬಹುದು.
ಮಂಗಳೂರು ವಿಶ್ವವಿದ್ಯಾನಿಲಯದ ಕರ್ಮಕಾಂಡ ಇಲ್ಲಿಗೆ ಮುಗಿದಿಲ್ಲ. ಯಾವ ಗುತ್ತಿಗೆದಾರರಿಗೆ ಇವರು ಒಪ್ಪಂದ ಮಾಡುವಾಗ ಕನಿಷ್ಟ 71 ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕು ಎಂದು ಹೇಳಿದ್ದರೋ ಅವರು ಇಟ್ಟಿರುವುದು 48 ಜನರನ್ನು ಮಾತ್ರ. ಸಂಬಳವನ್ನು ಪೇ-ಸ್ಲಿಪ್ ನಲ್ಲಿ ಕೊಡುವುದಲ್ಲ. ಇಎಸ್ ಐ ಮತ್ತು ಪಿಎಫ್ ನ ಮಾತೇ ಇಲ್ಲ.
ಇದನ್ನೆಲ್ಲ ಮಾಡುತ್ತಿರುವ ಗುತ್ತಿಗೆದಾರ ಸಂಸ್ಥೆ ಕ್ಯಾನನ್ ಡಿಟೆಕ್ಟಿವ್ ಅಂಡ್ ಸೆಕ್ಯೂರಿಟಿ ಸರ್ವಿಸ್ ಪ್ರೈ ಲಿಮಿಟೆಡ್ ಇದರ ಮೂಗು ಹಿಡಿದು ಕೆಲಸ ಮಾಡಿಸಬೇಕಿದ್ದ ವಿವಿ ಕುಲಪತಿ ಭೈರಪ್ಪನವರು ಗುತ್ತಿಗೆದಾರರ ವಿರುದ್ಧ ಭಾರಿ ಮೌನ ತಾಳಿರುವುದು ಸ್ಪಷ್ಟ. ತಮ್ಮದೇ ರಾಜ್ಯ ಸರಕಾರದ ಲೇಬರ್ ರೂಲ್ಸ್ ಮುರಿಯುತ್ತಿದ್ದರೂ ಭೈರಪ್ಪನವರಿಗೆ ಅದ್ಯಾವುದೂ ಬಿದ್ದು ಹೋದಂತೆ ಕಾಣುವುದಿಲ್ಲ. ಇನ್ನು ತಮ್ಮ ವಿಶ್ವವಿದ್ಯಾನಿಲಯದಲ್ಲಿ ಸೆಕ್ಯೂರಿಟಿ ಸಿಬ್ಬಂದಿಗಳು ರಜೆ ಇಲ್ಲದೆ, 12 ಗಂಟೆ ದುಡಿಯುತ್ತಾ, ಸಂಬಳ ಸಮಯಕ್ಕೆ ಸಿಗದೆ, ಸಿಗುವಾಗ ಸಾಕಷ್ಟು ಕಟ್ ಆಗಿ, ಪಿಎಫ್, ಇಎಸ್ ಐ ಇಲ್ಲದೆ ದುಡಿಯುತ್ತಿದ್ದರೂ ಜಾಣ ಮೌನ ಪ್ರಧರ್ಶಿಸುತ್ತಿರುವುದು ಅವರಿಗೂ ಗುತ್ತಿಗೆದಾರರಿಗೂ ಏನಾದರೂ ಸಮ್ ಥಿಂಗ್ ಇದೆಯಾ ಎನ್ನುವ ಸಂಶಯ ಕಾಣುತ್ತದೆ!
Leave A Reply