ಮಂಗಳೂರಿನ ಟ್ರಾಫಿಕ್ ಜಾಮ್ ಗೆ ಹೆಚ್ಚಿನ ಪೊಲೀಸ್ ಕಾನ್ ಸ್ಟೇಬಲ್ ಗಳು ಉತ್ತರ ಕರ್ನಾಟಕದವರಾಗಿರುವುದೇ ಕಾರಣ!
ಟೀಮ್ ಇಂಡಿಯಾಕ್ಕೆ ಹೊಸ ಆಟಗಾರನ ಸೇರ್ಪಡೆಯಾದಾಗ ಅವನನ್ನು ಮೊದಲ ದಿನವೇ ನೇರವಾಗಿ ಬ್ಯಾಟಿಂಗ್ ಮಾಡಪ್ಪ ಎಂದು ಕಳುಹಿಸುವುದಿಲ್ಲ. ಆತನನ್ನು ಮೊದಲು ಪೆವಿಲಿಯನ್ ನಲ್ಲಿ ಕುಳ್ಳಿರಿಸುತ್ತಾರೆ. ಕೆಲವೊಮ್ಮೆ ಬೌಂಡರಿ ಲೈನ್ ಹೊರಗೆ ಚೇರ್ ಹಾಕಿ ಬೇರೆ ಪ್ಲೇಯರ್ಸ್ ಕುಳಿತುಕೊಂಡಿರುತ್ತಾರಲ್ಲ, ಅಲ್ಲಿ ಅವನನ್ನು ಕುಳ್ಳಿರಿಸುತ್ತಾರೆ. ಹೆಚ್ಚೆಂದರೆ ತನ್ನ ತಂಡದ ಬ್ಯಾಟ್ಸ್ ಮೆನ್ಸ್ ಗಳಿಗೆ ನೀರು, ಬೇರೆ ಬ್ಯಾಟ್ ಕೊಡಲು ಅವನನ್ನು ಕಳಿಸುತ್ತಾರೆ. ಒಂದಿಷ್ಟು ಮ್ಯಾಚ್ ನೋಡಿದ ನಂತರ ಅವಕಾಶ ಇದ್ದಾಗ ಈ ಹೊಸಬ ಫೀಲ್ಡಿಗೆ ಇಳಿಯುತ್ತಾನೆ. ಇದು ಸಾಮಾನ್ಯ ನಿಯಮ. ಒಂದು ವೇಳೆ ನಿನ್ನೆ ಟೀಮಿಗೆ ಆಯ್ಕೆಯಾದ ಆಟಗಾರನಿಗೆ ಮುಂದಿನ ಪಂದ್ಯದಲ್ಲಿ ಹೋಗಿ ಬ್ಯಾಟ್ ಬೀಸು ಎಂದರೆ ಅವನು ಹೆದರುತ್ತಾನೆ ಎಂದಲ್ಲ, ಅಂತರಾಷ್ಟ್ರೀಯ ಪಂದ್ಯದ ಒತ್ತಡ, ಒಂದಿಷ್ಟು ಗಲಿಬಿಲಿ ಸೇರಿ ಅವನು ಬೇಗನೆ ಪೆವಿಲಿಯನ್ ಗೆ ಮರಳಬಹುದು. ಈ ಪೀಠಿಕೆ ಏಕೆಂದರೆ ನಮ್ಮ ಮಂಗಳೂರಿನ ಟ್ರಾಫಿಕ್ ಪೊಲೀಸ್ ಕಾನ್ ಸ್ಟೇಬಲ್ ಗಳ ಪರಿಸ್ಥಿತಿ ಹೆಚ್ಚು ಕಡಿಮೆ ಈ ಕ್ರಿಕೆಟ್ ಆಟಗಾರರ ಪರಿಸ್ಥಿತಿಯಂತೆ ಆಗಿದೆ.
ಮಂಗಳೂರಿನಲ್ಲಿ ಟ್ರಾಫಿಕ್ ಡ್ಯೂಟಿಯಲ್ಲಿರುವ ಹೆಚ್ಚಿನ ಕಾನ್ ಸ್ಟೇಬಲ್ ಗಳ ಬಳಿ ಒಂದು ಕ್ಷಣ ನಿಂತು ಕೇಳಿ “ನಿಮ್ಮ ಊರು ಯಾವುದು?” ಬರುವ ಉತ್ತರ- ಬಳ್ಳಾರಿ, ಚಿತ್ರದುರ್ಗ, ಹೊಸಪೇಟೆ, ಬೆಳಗಾವಿ ಹೀಗೆ. ಅಲ್ಲಿಂದ ಇಲ್ಲಿ ಬಂದು ಎಲ್ಲಿ ನಿಂತಿದ್ದಿರಿ. ನಿಮ್ಮ ಪೊಲೀಸ್ ಕ್ವಾಟ್ರಸ್ ಜೋರು ಮಳೆ ಬಂದರೆ ಒಳಗಡೆ ಐಷಾರಾಮಿ ಈಜುಕೊಳ ಆಗುತ್ತದೆ. ಹಾಗಿರುವಾಗ ಕಷ್ಟ ಆಗಲ್ವಾ ಎಂದರೆ, ಕೆಲವರು ನಾವು ನಾಲ್ಕೈದು ಜನ ಸೇರಿ ರೂಂ ಹಂಚಿಕೊಂಡಿದ್ದೇವೆ ಎಂದರೆ ಒಂದಿಷ್ಟು ಜನ ಪಿಜಿಯಲ್ಲಿ ಉಳಿದುಕೊಂಡಿದ್ದೇವೆ ಎನ್ನುತ್ತಾರೆ. ಸಿಗುವ ಸಂಬಳ ಸಾಕಾಗುತ್ತದೆಯಾ ಎಂದರೆ ಹಂಚಿಕೊಂಡು ಇರುವುದರಿಂದ ಸದ್ಯ ಒಕೆ ಎನ್ನುತ್ತಿದ್ದಾರೆ. ಅದು ಬಿಡಿ, ಅದು ಬೇರೆ ವಿಷಯ. ಈಗ ಮುಖ್ಯ ಸುದ್ದಿಗೆ ಬರೋಣ.
ಈ ಉತ್ತರ ಕರ್ನಾಟಕದಿಂದ ಮಂಗಳೂರಿನಲ್ಲಿ ಟ್ರಾಫಿಕ್ ಡ್ಯೂಟಿ ಮೇಲೆ ಇರುತ್ತಾರಲ್ಲ, ಅವರ ಪರಿಸ್ಥಿತಿ ಮೊದಲ ದಿನವೇ ಒಪನಿಂಗ್ ಬ್ಯಾಟಿಂಗ್ ಗೆ ಹೋದ ಆಟಗಾರನ ಪರಿಸ್ಥಿತಿಯಲ್ಲಿ ಇರುತ್ತದೆ. ಬೌಲರ್ ಹಸಿದ ಸಿಂಹದಂತೆ ಕಾಣಿಸುತ್ತಾನೆ. ಇಲ್ಲಿ ಟ್ರಾಫಿಕ್ ಕಾನ್ಸ್ ಸ್ಟೇಬಲ್ ಗೆ ಎದುರಿನಿಂದ ಬರುವ ಕಾರು, ಬೈಕ್ ಗಳು, ಪಕ್ಕದ ರಸ್ತೆಯಿಂದ ನುಗ್ಗುತ್ತಿರುವ ಆಟೋ ರಿಕ್ಷಾಗಳು, ಪಾಶ್ವದಲ್ಲಿ ಒಂದು ಸೆಕೆಂಡ್ ಲೇಟ್ ಆದರೆ ಅಮೇರಿಕಾದ ಟ್ರಂಪ್ ನೊಂದಿಗೆ ಅಪಾಯಿಂಟ್ ಮೆಂಟ್ ಮಿಸ್ಸಾಗುತ್ತದೆಯೋ ಎನ್ನುವ ವೇಗದಲ್ಲಿರುವ ಬಸ್ಸುಗಳು, ನೇರ ನೋಡಿದರೆ ಹೊಸ ಕಾರಿಗೆ ಯಾರಾದರೂ ಪ್ರೀತಿಯಿಂದ ಮುತ್ತಿಕ್ಕಿದರೆ ಸ್ಕ್ರೇಚ್ ಬೀಳುತ್ತದೆಯೋ ಎಂದು ಜಾಗೃತೆಯಿಂದ ಚಲಾಯಿಸುವ ಹಿರಿಯರು ಎಲ್ಲರೂ ಏಕಕಾಲದಲ್ಲಿ ಕಾಣಿಸುತ್ತಾರೆ.
ಈ ಎಂಜಿ ರಸ್ತೆಯಲ್ಲಿ ಎಂಪಾಯರ್ ಮಾಲ್ ನತ್ತಿರ, ಬಂಟ್ಸ್ ಹಾಸ್ಟೆಲ್, ಕೆನರಾ ಕಾಲೇಜು, ನಂತೂರು, ಪಂಪವೆಲ್ ಹೀಗೆ ಹಲವು ಕಡೆ ನಿಂತಿರುವ ಹೊಸ ಕಾನ್ ಸ್ಟೇಬಲ್ ಗಳಪರಿಸ್ಥಿತಿ ನೋಡಿ. ಅವರಿಗೆ ಬೆಳಿಗ್ಗೆಯಿಂದ ಸಂಜೆ ಆರು ಗಂಟೆಯ ತನಕ ಔಟ್ ಆಗಬಾರದು ಎಂದು ಟೆಸ್ಟ್ ಮ್ಯಾಚ್ ನ ಮೊದಲ ದಿನ ಕ್ಯಾಪ್ಟನ್ ಆಡಲು ಕಳುಹಿಸಿದ ರೀತಿಯಲ್ಲಿ ಇರುತ್ತಾರೆ. ಇದರಿಂದ ಏನಾಗುತ್ತದೆ? ನಾನು ಹಲವರು ಹೇಳಿದ್ದನ್ನು ಕೇಳಿದ್ದೇನೆ. ಪೊಲೀಸ್ ಕಾನ್ ಸ್ಟೇಬಲ್ ಇದ್ದ ಕಾರಣವೇ ಇಲ್ಲಿ ಟ್ರಾಫಿಕ್ ಜಾಮ್ ಜಾಸ್ತಿಯಾಗುತ್ತಾ ಇರುವುದು. ಮುಂಚೆ ಪೊಲೀಸರು ಕಡಿಮೆ ಇದ್ದಾಗ ಇಲ್ಲಿ ಯಾವ ಕಾನ್ ಸ್ಟೇಬಲ್ ಕೂಡ ಕಾಣಿಸುತ್ತಿರಲಿಲ್ಲ. ಆಗ ಯಾವ ಜಾಮ್, ಬ್ರೆಡ್ ಇಲ್ಲದೆ ನಾವು ಆರಾಮವಾಗಿ ಹೋಗುತ್ತಿದ್ದೆವು. ಈಗ ಪೊಲೀಸ್ ಇದ್ದರೂ ಜಾಮ್ ಗ್ಯಾರಂಟಿ ಎನ್ನುತ್ತಾರೆ. ಪೊಲೀಸರು ಟ್ರಾಫಿಕಿಗೆ ಹಾಕಿದ ಕಾರಣ ಅಲ್ಲಿ ಸಹಜವಾಗಿ ಜಾಮ್ ಕಡಿಮೆಯಾಗಬೇಕಿತ್ತು. ಆದರೆ ಹೆಚ್ಚಾಗುತ್ತಿದೆ ಎಂದರೆ ಏನರ್ಥ?
ವಿಷಯ ಸಿಂಪಲ್. ಇಲ್ಲಿ ಮೂರು ಆಂಗಲ್ ಗಳಿವೆ. ಒಂದನೇಯದಾಗಿ ಉತ್ತರ ಕರ್ನಾಟಕದಿಂದ ಬಂದ ಯುವ ಪೊಲೀಸ್ ಕಾನ್ ಸ್ಟೇಬಲ್ ಗಳಿಗೆ ಬೌಲರ್ ಬಾಲ್ ಹಾಕುವ ಲೆಂಥ್, ಸ್ಪೀಡ್, ಸ್ವಿಂಗ್ ಗೊತ್ತಿಲ್ಲ. ಅದಕ್ಕೆ ಅವರು ಗೊಂದಲಕ್ಕೆ ಒಳಗಾಗುತ್ತಾರೆ. ಅವರಿಗೆ ಟ್ರಾಫಿಕ್ ಜಾಮ್ ಆದರೆ ಏನು ಮಾಡಬೇಕೆಂಬ ಐಡಿಯಾ ಇಲ್ಲ. ಮಂಗಳೂರಿನ ಒಳರಸ್ತೆಗಳು, ಬರುವ ವಾಹನಗಳು, ಯಾವ ವಾಹನ ಯಾವ ದಿಕ್ಕಿಗೆ ಮಾತ್ರ ಹೋಗಬೇಕು, ಎಷ್ಟೊತ್ತಿಗೆ ವಾಹನ ಸಂಚಾರ ತಾರಕಕ್ಕೆ ಹೋಗುತ್ತದೆ, ಎಷ್ಟು ಹೊತ್ತಿಗೆ ಯಾವ ಟೈಪಿನ ವಾಹನಗಳು ಹೆಚ್ಚು ಈ ರಸ್ತೆಯಲ್ಲಿ ಇಳಿಯುತ್ತದೆ, ಬಸ್ಸುಗಳು ಸರಿಯಾಗಿ ಎಲ್ಲಿ ನಿಲ್ಲಿಸಬೇಕು, ಎಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡಿದ ಕಾರಣ ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ, ಯಾವ ಮಾಲ್ ಗಳ ಹೊರಗೆ ವಾಹನ ಬೇಕಾದ ರೀತಿ ಪಾರ್ಕಿಂಗ್ ಮಾಡಿದ್ದಾರೆ, ಯಾವ ರಸ್ತೆ ಯಾವಾಗ ಒನ್ ವೇ ಆಗಿರುತ್ತದೆ, ಯಾವ ರಸ್ತೆಯಲ್ಲಿ ಸಮ, ಬೆಸ ದಿನಗಳಂದು ಪಾರ್ಕಿಂಗ್ ಮಾಡಬಹುದು, ಯಾವ ಶಾಪಿಂಗ್ ಮಾಲ್, ಮಳಿಗೆಗಳ ಹೊರಗೆ ನೋ ಪಾರ್ಕಿಂಗ್ ಬೋರ್ಡ್ ಇತ್ತು ಮತ್ತು ಅದು ಬಿದ್ದು ಹೋಗಿದೆ, ಹೀಗೆ ತುಂಬಾ ಕಲಿಯಲು ಇರುತ್ತದೆ, ಅದ್ಯಾವುದೋ ಗೊತ್ತಿಲ್ಲದೆ ತಲೆಗೆ ಟೊಪ್ಪಿ ಏರಿಸಿ, ಕಾಲಿಗೆ ಶೂ ಕಟ್ಟಿ ಕ್ರೀಸ್ ಗೆ ಇಳಿದ ಆಟಗಾರ ಹೇಗೆ ಬೌನ್ಸರ್ ಬಂದಾಗ ತಡವರಿಸಿ ಬ್ಯಾಟ್ ಮೇಲೆ ಎತ್ತಿ ಬೋಲ್ಡ್ ಆದ ಹಾಗೆ ನಮ್ಮ ಉತ್ತರ ಕರ್ನಾಟಕದ ಪೊಲೀಸ್ ಕಾನ್ ಸ್ಟೇಬಲ್ ಗಳು ಟ್ರಾಫಿಕ್ ಜಾಮ್ ಆದಾಗ ಮೆಲ್ಲನೆ ಟೊಪ್ಪಿ ಕೈಯಲ್ಲಿ ಹಿಡಿದು ಹತ್ತಿರದ ಗೂಡಂಗಡಿಯ ಹತ್ತಿರ ನಿಂತು ಎಂತಹಾ ಟ್ರಾಫಿಕ್ ಅಂತಹ ಹೇಳುತ್ತಿರುತ್ತಾರೆ. ಇದು ಟ್ರಾಫಿಕ್ ಜಾಮ್ ಆಗಲು ಒಂದು ಕಾರಣ. ಎರಡನೇಯ ಕಾರಣ ಏನು ಗೊತ್ತಾ? ಟ್ರಾಫಿಕ್ ಪೊಲೀಸರನ್ನು ಕಂಡ ತಕ್ಷಣ ನಮಗೆ ನಾವೇ ಹೆದರಿಕೊಳ್ಳುವುದು. ಅದನ್ನು ನಾಳೆ ವಿವರಿಸುತ್ತೇನೆ!
Leave A Reply