ಮೋದಿ ಬಂದು ಹೋದರು, ವೋಟ್ ಯಾರಿಗೆ ಎಂದು ಗ್ಯಾರಂಟಿಯಾಯಿತು!!
ಸುನಾಮಿ ಎಂದರೆ ನೆಗೆಟಿವ್ ಶಬ್ದ. ಆದರಿಂದ ಮೋದಿ ಆಗಮನವನ್ನು ನಾನು ಸುನಾಮಿಗೆ ಹೋಲಿಸುವುದಿಲ್ಲ. ಅದನ್ನು ಫಲವತ್ತಾದ ಹೊಲದಲ್ಲಿ ಎದ್ದು ನಿಂತ ಹುಲುಸಾದ ಭತ್ತದ ಪೈರಿಗೆ ಹೋಲಿಸುತ್ತೇನೆ. ನೀವು ಪಂಜಾಬ್ ಕಡೆ ಹೋದರೆ ಸಂಕ್ರಾಂತಿ ಆಗುತ್ತಿದ್ದಂತೆ ಸನ್ ಫ್ಲವರ್ ಗಿಡಗಳು ಎದ್ದು ನಿಂತು ಇಡೀ ಹೊಲ ದೂರದೂರಕ್ಕೆ ಹಳದಿ ಶಾಲನ್ನು ಹೊದ್ದು ನಿಂತಂತೆ ಕಾಣುತ್ತದೆ. ಹಾಗೆ ಕೇಂದ್ರ ಮೈದಾನದಲ್ಲಿ ಶನಿವಾರ ಮಧ್ಯಾಹ್ನದ ನಂತರ ಕಂಡಂದು ಕೇಸರಿ ಸಮೃದ್ಧ ನೋಟ.
ಶನಿವಾರ ನರೇಂದ್ರ ಮೋದಿಯವರ ಮಂಗಳೂರು ಕಾರ್ಯಕ್ರಮವನ್ನು ಅಲ್ಲಿ ಸ್ವತ: ಭಾಗವಹಿಸಿ ನೋಡಿದವರಿಗೆ ಜನರಲ್ಲಿ ಮೋದಿಯವರ ಬಗ್ಗೆ ಇವತ್ತಿಗೂ ಇರುವ ಕ್ರೇಜ್ ಅರ್ಥವಾಗುತ್ತದೆ. ಸಾಮಾನ್ಯವಾಗಿ ಒಬ್ಬ ಪ್ರಧಾನಿ ಐದು ವರ್ಷ ನಿರಂತರ ಆಡಳಿತ ಮಾಡಿದರೆ ಇವತ್ತಿನ ದಿನಗಳಲ್ಲಿ ಸಹಜವಾಗಿ ಆಡಳಿತ ವಿರೋಧಿ ಅಲೆ ನಿರ್ಮಾಣವಾಗುತ್ತದೆ. ಹದಿನೈದು, ಇಪ್ಪತ್ತು ವರ್ಷಗಳ ತನಕ ನಿರಂತರವಾಗಿ ಒಬ್ಬನೇ ಪ್ರಧಾನಿಯಾಗುವುದು ನೆಹರೂ, ಇಂದಿರಾ ಕಾಲಕ್ಕೆ ಮುಗಿದು ಹೋಯಿತು. ಆಗ ಸೋಶಿಯಲ್ ಮೀಡಿಯಾ ಇರಲಿಲ್ಲ. ಸೋಶಿಯಲ್ ಮೀಡಿಯಾ ಬಿಡಿ, ಟಿವಿಯೇ ಇರಲಿಲ್ಲ. ಇದ್ದ ನಾಲ್ಕು ಪತ್ರಿಕೆಗಳು ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದದ್ದು ಬಿಟ್ಟರೆ ಹಳ್ಳಿ ಹಳ್ಳಿಗಳನ್ನು ತಲುಪುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಕ್ರಮೇಣ ಟಿವಿ ಬಂತು. ಈಗಂತೂ ಸೋಶಿಯಲ್ ಮೀಡಿಯಾ ಎಷ್ಟರಮಟ್ಟಿಗೆ ಸ್ಟ್ರಾಂಗ್ ಇದೆ ಎಂದರೆ ಸುಳ್ಯದ ಮಂಡೆಕೋಲಿನಂತಹ ಹಳ್ಳಿಯಲ್ಲಿ ಕುಳಿತ ಒಬ್ಬ ವ್ಯಕ್ತಿ ಪ್ರಧಾನಿ ಕಳೆದ ಎರಡು ತಿಂಗಳಲ್ಲಿ ಎಷ್ಟು ಸಲ ಕೆಮ್ಮಿದರು, ಎಷ್ಟು ಸಲ ಸೀನಿದರು ಎಂದು ಹೇಳಬಲ್ಲ. ಹಾಗಿರುವಾಗ ಕೆಲಸ ಮಾಡದ ಜನಪ್ರತಿನಿಧಿಗಳು ಒಂದು ಬಾರಿ ಗೆಲ್ಲಬಹುದು ಆದರೆ ಕ್ರೇಜ್ ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದು ಮೋದಿಜಿಯವರ ವಿಷಯದಲ್ಲಿ ಸುಳ್ಳಾಗಿದೆ. ಮೋದಿ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ಶನಿವಾರದ ಕೇಂದ್ರ ಮೈದಾನವೇ ಸಾಕ್ಷಿ.
ಜನ ಮರಗಳ ಮೇಲೆ ಕುಳಿತು ಮೋದಿಯನ್ನು ವೀಕ್ಷಿಸಿದ್ದಾರೆ. ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ಮೋದಿಯನ್ನು ನೋಡಿದ್ದಾರೆ. ಸುಡುಬಿಸಿಲಿಗೆ ಎರಡು ಗಂಟೆ ಕಾದು ಕುಳಿತು ಮೋದಿಯನ್ನು ಕಂಡಿದ್ದಾರೆ. ಇದು ಇವತ್ತಿನ ದಿನಗಳಲ್ಲಿ ಅಕ್ಷರಶ: ಅದ್ಭುತ.
ಮೋದಿ ಎನು ಮಾತನಾಡಿದರು ಎನ್ನುವುದು ಮುಖ್ಯವಲ್ಲ. ಅದು ಜನರಿಗೆ ಅಷ್ಟು ಬೇಕಾಗಿಯೂ ಇಲ್ಲ. ಅವರಿಗೆ ಬೇಕಾಗಿರುವುದು ಮೋದಿಯವರನ್ನು ಸಾಕ್ಷಾತ್ ನೋಡುವ ತವಕ. ಮೋದಿಯವರ ಮೇಲೆ ಇರುವ ವಿಶ್ವಾಸದಿಂದ ಅವರು ಏನಾದರೂ ಒಳ್ಳೆಯದು ಮಾಡುತ್ತಾರೆ ಎನ್ನುವುದು ಜನರಿಗೆ ಗೊತ್ತಿದೆ. ಆದ್ದರಿಂದ ಅಲ್ಲಿ ಸೇರಿದ್ದ ಜನರಿಗೆ ಮೋದಿ ಪ್ರೆಸೆನ್ಸ್ ಮಾತ್ರ ಮುಖ್ಯ. ಜನ ಬಂದದ್ದು ಅಪ್ಪಟ ಮೋದಿಯನ್ನು ನೋಡಲು ಮಾತ್ರ. ಸಾಮಾನ್ಯವಾಗಿ ಇವತ್ತಿನ ಕಾಲದಲ್ಲಿ ಜನ ಯಾವುದಕ್ಕೂ ಲಕ್ಷದ ಸಂಖ್ಯೆಯಲ್ಲಿ ಸೇರುವುದು ಸಾಧ್ಯವಿಲ್ಲ. ಅದರಲ್ಲಿಯೂ ಮಂಗಳೂರಿನಲ್ಲಿ ಜನರನ್ನು ಲಕ್ಷದ ಸಂಖ್ಯೆಯಲ್ಲಿ ಸೇರಿಸಬೇಕಾದರೆ ಅದಕ್ಕೆ ಆಯೋಜಕರು ತಪಸ್ಸಿಗೆ ಕುಳಿತುಕೊಳ್ಳಬೇಕು. ಇನ್ನು ಒಂದು ವೇಳೆ ಮೋದಿಜಿ ಬರುವುದಿಲ್ಲ ಎಂದಾದರೆ ಅಷ್ಟು ಸಂಖ್ಯೆಯಲ್ಲಿ ಜನ ಸೇರಲು ಸಾಧ್ಯವಿಲ್ಲ. ಹಾಗಿದ್ದರೆ ಮೋದಿ ಆಗಮನ ಯಶಸ್ವಿಯಾಗಿ ಅದರ ಫಲ ಇಲ್ಲಿನ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುತ್ತದೆ ಎನ್ನುವುದು ಸಂಶಯವಿಲ್ಲ.
Leave A Reply