ಜಾಲಿಯ ಮಣ್ಣು ತೆಗೆದಿದ್ದಿರಾ ಅಥವಾ ಕೃತಕ ನೆರೆಗೆ ರೆಡಿನಾ?
ಮಂಗಳೂರಿನಲ್ಲಿ ಮಳೆ ಕಾಲಿಟ್ಟ ಕೂಡಲೇ ಮೊದಲು ಕಂಡುಬರುವುದು ಕೃತಕ ನೆರೆ. ಇದರಿಂದ ಮಂಗಳೂರಿನಲ್ಲಿ ಮಳೆಗಾಲ ಎಂದ ಕೂಡಲೇ ಜನ ಕಿರಿಕಿರಿ ಅನುಭವಿಸುವಂತಾಗುವುದು. ಒಂದು ವೇಳೆ ನೀರು ಕೃತಕ ಕೆರೆಗಳಂತೆ ನಿಲ್ಲದಿದ್ದರೆ ನಮ್ಮ ಮಂಗಳೂರಿಗೆ ಮಳೆಗಾಲದ ಸಂದರ್ಭದಲ್ಲಿ ಅಂತಹ ದೊಡ್ಡ ಟೆನ್ಷನ್ ಏನಿಲ್ಲ. ಹಾಗಾದರೆ ಈ ಕೃತಕ ನೆರೆ ಎನ್ನುವ ಒಂದೇ ಒಂದು ಸವಾಲನ್ನು ಪರಿಹರಿಸುವುದು ಅಷ್ಟು ಕಷ್ಟನಾ? ಇಲ್ಲ, ಆದರೆ ಸ್ವಲ್ಪ ಇಚ್ಚಾಶಕ್ತಿ ಮತ್ತು ಚಿಕ್ಕ ಕೆಲಸ ಎಂದು ನಿರ್ಲಕ್ಷ್ಮಿಸದೇ ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಳ್ಳುವ ಹೆಜ್ಜೆ ದೊಡ್ಡ ಪರಿಣಾಮ ಬೀರುವುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಾದರೆ ಏನು ಮಾಡಬೇಕು.
ಮೊದಲನೇಯದಾಗಿ ಮಂಗಳೂರಿನಲ್ಲಿ ಅನೇಕ ರಸ್ತೆಗಳು ಈಗಾಗಲೇ ಕಾಂಕ್ರೀಟಿಕರಣಗೊಂಡಿವೆ. ಇದರಿಂದ ಏನಾಗಿದೆ ಎಂದರೆ ರಸ್ತೆಯ ಅಂಚಿನಲ್ಲಿ ಸೈಡ್ ಕಟ್ ಮಾಡಿ ಅಲ್ಲಿ ಜಾಲಿ ತರಹ ಇಟ್ಟು ನೀರು ಅದರ ಒಳಗೆ ಇಳಿಯುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಬೇಕಾದರೆ ಕಬ್ಬಿನ ಜ್ಯೂಸ್ ತಯಾರಿಸಿದ ನಂತರ ಅಂಗಡಿಯವರು ಒಂದು ಜಾಲಿ ಹಿಡಿದು ಅದರ ಮೇಲೆ ಜ್ಯೂಸ್ ಹಾಕಿ ನಂತರ ಕೆಳಗಿನ ಪಾತ್ರೆಯಲ್ಲಿ ಇಳಿಯಲ್ಪಟ್ಟ ಜ್ಯೂಸ್ ಅನ್ನು ಗ್ಲಾಸಿನಲ್ಲಿ ಹಾಕಿ ಕೊಟ್ಟು ನಂತರ ಜಾಲಿಯಲ್ಲಿ ಉಳಿದ ಕಬ್ಬಿನ ಸಿಪ್ಪೆಯನನ್ನು ಪಕ್ಕದ ಡಸ್ಟ್ ಬಿನ್ ನಲ್ಲಿ ಹಾಕುತ್ತಾರಲ್ಲ. ಹಾಗೆ ಮಾಡಬೇಕು. ಇಲ್ಲಿಯೂ ಹಾಗೆ. ಮಳೆಯ ನೀರು ಬಂದು ಜಾಲಿಯಲ್ಲಿ ಇಳಿಯುತ್ತದೆ. ಅದರೊಂದಿಗೆ ಮಣ್ಣು ಕೂಡ ಒಂದಷ್ಟರ ಮಟ್ಟಿಗೆ ಇಳಿಯುತ್ತದೆ. ಹೀಗೆ ಮಣ್ಣು ನಿರಂತರವಾಗಿ ಇಳಿದು ಹೋದ ಬಳಿಕ ಅದು ಪೈಪಿನಲ್ಲಿ ಸಿಲುಕಿಕೊಳ್ಳುತ್ತದೆ. ಆಗ ಜಾಲಿಯ ಒಳಗೆ ಹಾಕಿರುವ ಪೈಪಿನಿಂದ ಮಣ್ಣನ್ನು ತೆಗೆದುಬಿಡಬೇಕು. ಇಲ್ಲದಿದ್ದರೆ ಮಣ್ಣು ಸಿಲುಕಿಕೊಂಡ ಕಾರಣ ನೀರು ಕೆಳಗೆ ಇಳಿಯಲ್ಲ. ನೀರು ಇಳಿಯದಿದ್ದರೆ ಅದು ಮೇಲೆಯೇ ನಿಲ್ಲುತ್ತದೆ. ನೀರು ಪೈಪಿನಿಂದ ಇಳಿದು ಚರಂಡಿ ಸೇರುವ ವ್ಯವಸ್ಥೆ ಆಗಲೇಬೇಕು. ಆದ್ದರಿಂದ ಮಣ್ಣು ತೆಗೆಯುವುದು ಅನಿವಾರ್ಯ. ಮಣ್ಣು ತೆಗೆದರೆ ಆ ಜಾಲಿಯ ಕೆಳಗಿರುವ ಪೈಪು ಕ್ಲೀನ್ ಆಗಿ ನೀರು ಆರಾಮವಾಗಿ ಕೆಳಗೆ ಇಳಿಯುತ್ತದೆ. ಯಾವ ಕೃತಕ ನೆರೆಯೂ ಆಗುವುದಿಲ್ಲ.
ಇನ್ನು 7-8 ವರ್ಷ ಹಿಂದಿನ ರಸ್ತೆಗಳಲ್ಲಿ ರಸ್ತೆಯ ಕೆಲವು ಭಾಗಗಳಲ್ಲಿ ರಸ್ತೆಯಿಂದ ಫುಟ್ ಪಾತ್ ಕಡೆ ಒಂದು ಸಣ್ಣ ಕಿಂಡಿಯಂತಹ ವ್ಯವಸ್ಥೆಯನ್ನು ಮಾಡಿರುವುದನ್ನು ನೀವು ಗಮನಿಸಿರಬಹುದು. ಅದಕ್ಕೆ ಕೂಡ ಕಾಲಕ್ರಮೇಣ ಮಣ್ಣು ಮತ್ತು ಪ್ಲಾಸ್ಟಿಕ್ ಕವರ್ ಗಳು ಅಡ್ಡ ನಿಂತು ನೀರು ತೋಡಿಗೆ ಇಳಿಯದ ಪರಿಸ್ಥಿತಿ ಇದೆ. ಎರಡು ವರ್ಷಗಳ ಹಿಂದೆ ಕೋರ್ಟ್ ವಾರ್ಡಿನ ಪಾಲಿಕೆ ಸದಸ್ಯರಾಗಿದ್ದ ವಿನಯರಾಜ್ ಅವರು ಜ್ಯೋತಿ, ಬಲ್ಮಠ ಸಮೀಪ ನೀರು ತುಂಬಿ ಕೃತಕ ಸಮುದ್ರದಂತಹ ಪರಿಸ್ಥಿತಿ ನಿರ್ಮಾಣವಾದಾಗ ಇದನ್ನು ತಮ್ಮ ಶಾಸಕರ ಗಮನಕ್ಕೆ ತಂದು ಕೂಡಲೇ ಸರಿ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದು ನನಗೆ ನೆನಪಿದೆ. ಅದರ ವಿಡಿಯೋ ಕ್ಲಿಪ್ ಕೂಡ ನನ್ನ ಫೇಸ್ ಬುಕ್ ನಲ್ಲಿ ಇದೆ. ಆದರೆ ಎರಡು ವರ್ಷಗಳ ಬಳಿಕವೂ ಅಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ಈಗ ಲೂ ಅವರೇ ಅಲ್ಲಿ ಕಾರ್ಪೋರೇಟರ್ ಆಗಿದ್ದಾರೆ. ಹಾಗಿರುವಾಗ ಈ ಬಾರಿಯೂ ಸರಿಯಾದ ವ್ಯವಸ್ಥೆ ಮಾಡದಿದ್ದರೆ ಅಲ್ಲಿ ಮತ್ತೆ ಕೃತಕ ಸಮುದ್ರ ನಿರ್ಮಾಣವಾಗುತ್ತದೆ. ಅಂಬೇಡ್ಕರ್ ಸರ್ಕಲ್ ನಲ್ಲಿ ಈ ಬಾರಿ ಹಾಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಕೋರ್ಟ್ ವಾರ್ಡಿನ ಸದಸ್ಯರ ಮೇಲಿದೆ. ಮಂಗಳೂರಿನಲ್ಲಿ ಸರಿಯಾಗಿ ಒಂದು ಗಂಟೆ ಮಳೆ ಬಂದರೆ ಕೃತಕ ನೆರೆ ಎನ್ನುವುದು ಗ್ಯಾರಂಟಿ ಎನ್ನುವಂತಾಗಿದೆ. ಇದನ್ನು ತಪ್ಪಿಸಿ ಕೂಡಲೇ ಜಾಲಿಗಳ ಸ್ವಚ್ಚತೆ ಮತ್ತು ಕಿಂಡಿಗಳ ಮಣ್ಣು ತೆಗೆದರೆ ನಾವು ಸೇಫ್. ಇಲ್ಲದಿದ್ದರೆ ಕೃತಕ ನೆರೆ ಗ್ಯಾರಂಟಿ!
Leave A Reply