ತುಳುನಾಡಿನ ಆಟಿ ತಿಂಗಳು!
Posted On August 10, 2017
ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಸಾಮಾನ್ಯವಾಗಿ ತುಳು ಸಂಸ್ಕೃತಿಯನ್ನು ಆಚರಿಸಲಾಗುತ್ತದೆ. ತುಳುನಾಡಿನ ಎಲ್ಲಾ ಹಬ್ಬ ಹರಿದಿನಗಳು ಹಾಗೂ ಒಂದೇ ರೀತಿಯ ಆಚರಣೆಗಳನ್ನು ಕಾಣಬಹುದು. ಪ್ರದೇಶವಾರು ಅಲ್ಪಸ್ವಲ್ಪ ಬದಲಾವಣೆ ಬಿಟ್ಟರೆ ಆಚರಣೆಯ ಮೂಲ ಸತ್ವ ಒಂದೇ ರೀತಿಯಾಗಿದೆ. ಉತ್ತರದ ಬ್ರಹ್ಮಾವರದಿಂದ ಹಿಡಿದು ದಕ್ಷಿಣದ ನೀಲೇಶ್ವರದ ತನಕ ತುಳುನಾಡು ಎಂದು ಸಾಮಾನ್ಯವಾಗಿ ತಿಳಿಯಬಹುದು. ಹಾಗಾಗಿ ಇಲ್ಲಿನ ಎಲ್ಲಾ ರೀತಿ ರಿವಾಜು ಕಟ್ಟು ಕಟ್ಟಳೆಗಳು ಆಚರಣೆಯಲ್ಲಿ ಕಾಣಬಹುದು. ಇಂತಹ ಆಚರಣೆಯಲ್ಲಿ ತುಳುನಾಡಿನ ತುಳು ಪಂಚಾಂಗದ ರೀತಿ ತುಳುವರಿಗೆ ಪಗ್ಗು ತಿಂಗಳಲ್ಲಿ ವರ್ಷ ಪ್ರಾರಂಭವಾದರೆ ಸುಗ್ಗಿ ತಿಂಗಳು ವರ್ಷದ ಕೊನೆಯ ತಿಂಗಳು ಅನ್ನುವುದು ವಾಡಿಕೆ. ಆದರೆ ಇತ್ತೀಚೆಗೆ ಹೊರಗಿನ ಆಚರಣೆಯ ಪ್ರಭಾವದಿಂದ ಈ ತುಳು ತಿಂಗಳು ಹೆಚ್ಚಿನವರಿಗೆ ತಿಳಿದಿಲ್ಲ. ತುಳುವರಿಗೆ ಪ್ರತಿಯೊಂದು ತಿಂಗಳು ವಿಶೇಷವೇ ಆಗಿದೆ. ಈಗ ಚಾಲ್ತಿಯಲ್ಲಿರುವ ಆಟಿ ತಿಂಗಳು ಕೂಡಾ ತುಳುವರಿಗೆ ಒಂದು ರೀತಿಯಲ್ಲಿ ಪವಿತ್ರವೇ ಆಗಿದೆ. ಯಾಕೆಂದರೆ ತುಳುನಾಡಿನ ಮೊದಲ ಹಬ್ಬ ಶುರುವಾಗುವುದು ಆಟಿ ಅಮವಾಸ್ಯೆಯ ದಿನ. ಆವತ್ತು ಬೆಳಿಗ್ಗೆ ಹಾಲೆಯ ಮರದ ಕಷಾಯ ಕುಡಿದು ಆನಂತರ ಆಟಿ ಅಮವಾಸ್ಯೆ ತೀರ್ಥ ಸ್ನಾನ ಮಾಡುವುದು ವಿಶೇಷ. ಅದರ ನಂತರ ಬರುವ ಸಾರ್ವತ್ರಿಕ ಹಬ್ಬ ನಾಗರ ಪಂಚಮಿ ಕೂಡಾ ಇದೇ ಆಟಿ ತಿಂಗಳಲ್ಲಿಯೇ ಬರುವುದು. ಹಾಗಾಗಿ ಆಟಿ ತಿಂಗಳು ತುಳುನಾಡಲ್ಲಿ ಹೊಸ ಕಳೆಯನ್ನು ಕೊಡುತ್ತದೆ ಅನ್ನುವುದು ಸತ್ಯ.
ಆಟಿ ತಿಂಗಳು ಅಂದರೆ ಆಟಿಕಲೆಂಜ ಇರಲೇಬೇಕು. ಒಂದು ಕಾಲದಲ್ಲಿ ತುಳುನಾಡಿನ ಆಟಿ ತಿಂಗಳು ಅಂದರೆ ಹೊರಗೆ ಬಿಡದೇ ಸುರಿಯುವ ಜಡಿಮಳೆ. ಹಾಗಾಗಿ ಯಾವುದೇ ಕೆಲಸ ಕಾರ್ಯಗಳು ನಡೆಯದೇ ಒಂದು ರೀತಿಯ ತಟಸ್ಥ ಜೀವನ. ಈ ರೀತಿಯ ತಟಸ್ಥತೆಯ ಜೀವನದಲ್ಲಿ ಉಲ್ಲಾಸ ಬರಲು ಚೆನ್ನೆಮನೆಯಂತಹ ಒಳಾಂಗಣ ಆಟ ಆಡುತ್ತಿದ್ದರು. ಹೊರಗೆ ಯಾವುದೇ ಪದಾರ್ಥ ದೊಯದಿರುವ ಕಾರಣ ಬೇಸಿಗೆಯಲ್ಲಿ ಹಲಸಿನ ಕಾಯಿಯನ್ನು ಉಪ್ಪಲ್ಲಿ ಹಾಕಿ ಇಡುವ ಕ್ರಮ ಇತ್ತು ಅದಕ್ಕೆ ಉಪ್ಪಡಚ್ಚಿಲ್ ಹೇಳುತ್ತಿದ್ದರು. ಅದೇ ರೀತಿ ಹಲಸಿನ ಬೀಜ ಬೇಯಿಸಿ ಒಣಗಿಸಿ ಅದನ್ನು ಮಳೆಗಾಲಕ್ಕೆ ಸಂಗ್ರಹಣೆ ಮಾಡುತ್ತಿದ್ದರು. ಅದಕ್ಕೆ ಸಾಂತಾನಿ ಅಂತ ಹೇಳುತ್ತಿದ್ದರು. ಅದಲ್ಲದೆ ಹಲಸಿನ ಹಣ್ಣಿನ ಹಪ್ಪಳ ಇತ್ಯಾದಿ ಪದಾರ್ಥಗಳು ಆಟಿತಿಂಗಳ ಬೇಸರ ಕಳೆಯಲು ಅಥವಾ ತಿನ್ನಲು ಉಪಯೋಗಿಸುತ್ತಿದ್ದರು. ಆಟಿ ತಿಂಗಳು ಅಂತ ಹೇಳಿ ಆಟಿಕಲೆಂಜನನ್ನು ಮರೆಯುವುದು ಹೇಗೆ ?. ಮಳೆಗಾಲದಲ್ಲಿ ವಿಪರೀತ ಮಳೆ ಬಂದು ಕ್ರಿಮಿ ಕೀಟಗಳ ಸಂತತಿ ಜಾಸ್ತಿ ರೋಗ ರುಜಿನಗಳು ಬರುತ್ತಿತ್ತು. ಇಂತಹ ರೋಗ ರುಜಿನಗಳನ್ನು ದೂರ ಮಾಡಲು ದೇವರ ಪ್ರತಿನಿಧಿಯಾಗಿ ಆಟಿಕಲೆಂಜ ಊರಲ್ಲಿ ಸುತ್ತಿ ಊರಿಗೆ ಬಂದ ಮಾರಿಯನ್ನು ಓಡಿಸುವುದೇ ಆಟಿಕಲೆಂಜನ ಉದ್ದೇಶ. ಹಾಗಾಗಿ ಕಲೆಂಜನು ದೋಷ ನಿವಾರಣೆಗಾಗಿ ಮನೆ ಮನೆಗೆ ತಿರುಗುತ್ತಾ ದೋಷ ನಿವಾರಣೆ ಮಾಡುವ ಪದ್ದತಿ ಹಿಂದೆ ಇತ್ತು. ಕಲೆಂಜ ಪ್ರದರ್ಶನ ಸಂದರ್ಭದಲ್ಲಿ ಕೆಲವು ದೋಷ ನಿವಾರಣೆಗಾಗಿ ಪ್ರದರ್ಶಕರಿಂದ ನೀರು ಹೊಯ್ಯುವ ಪದ್ಧತಿ ಇದೆ. ಪ್ರದರ್ಶನದ ಸಂದರ್ಭದಲ್ಲಿ ಮನೆಯ ಯಜಮಾನ ಅಥವಾ ಹಿರಿಯರು ಕಲೆಂಜನಲ್ಲಿ ತಮ್ಮ ಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ.
ನೀರು ಹೊಯ್ಯುವ ಈ ಕೆಳಗಿನ ಸಂದರ್ಭಗಳನ್ನು ನಾವು ಗುರುತಿಸಬಹುದು.
1. ಮಕ್ಕಳಿಗೆ ಸೌಖ್ಯ ಇಲ್ಲದಿದ್ದರೆ ಮಕ್ಕಳ ತಲೆಗೆ
2. ವಯಸ್ಸಾದರೂ ಋತುಮತಿಯಾಗದ ಹುಡುಗಿಯ ತಲೆಗೆ
3. ಮದುವೆಯಾಗಿ ಗರ್ಭಿಣಿಯಾಗದ ಹೆಂಗಸರ ತಲೆಗೆ
4. ದನ ಕರು ಹಾಕದಿದ್ದರೆ ಅದರ ತಲೆಗೆ
5. ತೆಂಗು ಫಲ ನೀಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವುದು.
1. ಮಕ್ಕಳಿಗೆ ಸೌಖ್ಯ ಇಲ್ಲದಿದ್ದರೆ ಮಕ್ಕಳ ತಲೆಗೆ
2. ವಯಸ್ಸಾದರೂ ಋತುಮತಿಯಾಗದ ಹುಡುಗಿಯ ತಲೆಗೆ
3. ಮದುವೆಯಾಗಿ ಗರ್ಭಿಣಿಯಾಗದ ಹೆಂಗಸರ ತಲೆಗೆ
4. ದನ ಕರು ಹಾಕದಿದ್ದರೆ ಅದರ ತಲೆಗೆ
5. ತೆಂಗು ಫಲ ನೀಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವುದು.
ಹೀಗೆ ಮನುಷ್ಯ, ಪ್ರಾಣಿ, ಪಕ್ಷಿಗಳ ರೋಗ ರುಜಿನಾದಿಗಳನ್ನು ತನ್ನ ಮಾಂತ್ರಿಕ ಶಕ್ತಿಯಿಂದ ಹೋಗಲಾಡಿಸಿ ಜನಸಮುದಾಯ ಮತ್ತು ಸಾಕುಪ್ರಾಣಿಗಳ,ನಾಡಿನ ಫಸಲಿನ ಸಂರಕ್ಷಕನಾಗಿ ಕಲೆಂಜ ಕಾಣುತ್ತಾನೆ. ಊರಿಗೆ ಬಂದ ಮಾರಿಯನ್ನು ಓಡಿಸಿ ನೆಮ್ಮದಿಯ ಬದುಕನ್ನು ಜನಸಮುದಾಯಕ್ಕೆ ತರುವುದೇ ಕಲೆಂಜ ಕುಣಿತದ ಆಶಯವಾಗಿದೆ.(ಮಾಹಿತಿ: ಡಾ. ಕೋಯಿರಾ ಎನ್. ಬಾಳೆಪುಣಿ ರವರ ಮುಗೇರರ ದುಡಿ ಕುಣಿತಗಳು: ಸ್ವರೂಪ ಮತ್ತು ಸಂಸ್ಕೃತಿ ಕೃತಿಯಿಂದ)
ಇನ್ನು ಮಳೆಗಾಲದ ಆಹಾರ ಪದ್ದತಿ ಇನ್ನೂ ವಿಶೇಷವಾಗಿದೆ. ಮಳೆಗಾಲದಲ್ಲಿ ಅಂದರೆ ತುಳುನಾಡಿನ ಆಟಿ ತಿಂಗಳಲ್ಲಿ ಮಾತ್ರ ಮಾಡುವ ತಿಂಡಿ ತಿನಿಸುಗಳು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವಂತದು. ಮೊದಲು ಹೇಳಿದ ಹಾಗೆ ಮಳೆಗಾಲದಲ್ಲಿ ಬರುವ ಸಾಮಾನ್ಯ ಕಾಯಿಲೆಗಳಾದ ಶೀತ ಜ್ವರ ಇತ್ಯಾದಿಗಳನ್ನು ನಿಯಂತ್ರಣದಲ್ಲಿ ಇಡಲು ಈ ಆಹಾರ ಪದ್ದತಿ ಸಹಕಾರಿಯಾಗಿದೆ. ಆಟಿ ಅಮವಾಸ್ಯೆಯಂದು ಮಾತ್ರ ಕುಡಿಯುವ ಹಾಲೆಮರದ ಕಷಾಯ, ಆದಿನ ಅದರಲ್ಲಿ ಎಲ್ಲಾ ರೋಗ ನಿವಾರಣೆ ಮಾಡುವ ಅಂಶಗಳು ಸೇರಿರುತ್ತದೆ ಅನ್ನುವ ನಂಬಿಕೆ ತುಳುವರದು. ಹಾಗಾಗಿ ಅವತ್ತು ಹಾಲೆಮರದ ಕೆತ್ತೆಯನ್ನು ಕೆತ್ತಿ ಅದನ್ನು ಜಜ್ಜಿ ಅದರ ರಸಕ್ಕೆ ಕಾಳು ಮೆಣಸು ಬೆಳ್ಳುಳ್ಳಿ ಇತ್ಯಾದಿ ವಸ್ತುಗಳನ್ನು ಸೇರಿಸಿ ಬಿಳಿ ಕಲ್ಲನ್ನು ಕಾಯಿಸಿ ಒಗ್ಗರಣೆ ಕೊಟ್ಟು ಎಲ್ಲರೂ ಕುಡಿಯುವುದು ಆನಂತರ ತೆಂಗಿನಕಾಯಿ ಗಂಜಿ ಅಥವಾ ಕೆಲವು ಕಡೆ ಮೆಂತ್ಯ ಗಂಜಿ ಮಾಡಿ ತಿನ್ನುತ್ತಾರೆ. ಆಟಿ ತಿಂಗಳಲ್ಲಿ ಮಾಡುವ ಇನ್ನೊಂದು ಪ್ರಮುಖ ತಿಂಡಿ ಪತ್ರೊಡ್ಡೆ. ಕೆಸುವಿನ ಎಲೆಯಿಂದ ಮಾಡಿದ ತಿಂಡಿ ಈಗೀಗ ಬೇರೆ ಬೇರೆ ಎಲೆಗಳನ್ನು ಉಪಯೋಗಿಸುತ್ತಾರೆ. ಆದರೆ ಕೆಸುವಿನ ಎಲೆಯಿಂದ ಮಾಡಿದ ಸ್ವಾಧ ಬೇರೆ ಎಲೆಗಳಿಂದ ಬರುವುದಿಲ್ಲ. ಆಟಿ ತಿಂಗಳಲ್ಲಿ ಮಾಡುವ ಇನ್ನೊಂದು ಪಲ್ಯ ಅಥವಾ ಪದಾರ್ಥ ಕಳಲೆ ಅಥವಾ ಕಣಿಲೆ ಅನ್ನುತ್ತಾರೆ. ಬಿದಿರಿನ ಮೊಳಕೆಯನ್ನು ಕಣಿಲೆ ಎನ್ನುತ್ತಾರೆ. ಅದನ್ನು ಮಳೆಗಾಲದಲ್ಲಿ ಮಾತ್ರ ಪದಾರ್ಥ ಮಾಡತಕ್ಕದ್ದು.
ಹೀಗೆ ತುಳುನಾಡಿನಲ್ಲಿ ಮಳೆಗಾಲ ಅನ್ನುವುದು ಒಂದು ರೀತಿಯ ಆಚರಣೆ ಅಂತಲೇ ಹೇಳಬಹುದು. ಈಗೀಗ ಆಟಿಡೊಂಜಿ ಕೂಟ ಅಂತ ಆಚರಣೆ ಮಾಡುತ್ತಾರೆ. ಮುಖ್ಯವಾದ ಅಂಶಗಳನ್ನು ಹೊರತು ಪಡಿಸಿ ಇದು ಒಂದು ರೀತಿಯ ಒಣ ಆಚರಣೆಯಂತಾಗಿದೆ. ತುಳುನಾಡಿನ ನಿಜವಾದ ಆಟಿ ಆಚರಣೆ ಮಾಡಬೇಕಾದರೆ ಹಿಂದೆ ಬಂದ ರೀತಿಯಲ್ಲೇ ಮಳೆ ಬರಬೇಕು. ಅಂತಹ ಮಳೆಯಲ್ಲಿ ಸಾಂಪ್ರಾದಾಯಿಕ ಆಟಿ ಆಚರಣೆ ಮಾಡಬೇಕು. ಅದಕ್ಕಾಗಿ ಈಗಿರುವ ಪರಿಸರದ ಅಸಮತೋಲನ ನಿವಾರಣೆ ಮಾಡಬೇಕು. ಮಳೆಯ ಪ್ರಮಾಣ ಹೆಚ್ಚು ಮಾಡಿ ನಿಜವಾದ ಆಟಿ ಆಚರಣೆ ಮುಂದೆ ಮಾಡೋಣ.
- Advertisement -
Trending Now
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
ರಸ್ತೆ ಸುರಕ್ಷತೆ ಮತ್ತು ಸೈಬರ್ ಅಪರಾಧದ ಕುರಿತು ಜಾಗೃತಿ -ಅನುಪಮ್ ಅಗರ್ವಾಲ್
September 27, 2024
Leave A Reply