ನೀರು ಹಾಕಲು ಗತಿ ಇಲ್ಲದಿದ್ದರೆ ಹಂಪನಕಟ್ಟೆಯಲ್ಲಿ ನೆಡುವುದು ಯಾಕೆ?
Posted On October 1, 2021
ಅಭಿವೃದ್ಧಿ ಎಂದರೆ ಎರಡು ರೀತಿಯಲ್ಲಿ ಇರುತ್ತದೆ. ಒಂದು ಏನೂ ಇಲ್ಲದ ಪಾಳುಭೂಮಿಯಲ್ಲಿ ಏನಾದರೂ ನಿರ್ಮಾಣ ಮಾಡುವುದು ಮತ್ತು ಎರಡನೇಯದು ನಿರ್ಮಾಣ ಮಾಡಿದ್ದನ್ನು ಉಳಿಸಿ ಬೆಳೆಸುವುದು. ಬೇಕಾದರೆ ನೋಡಿ, ಎಷ್ಟೋ ಸರಕಾರಿ ಕಟ್ಟಡಗಳು ಅನುದಾನ ಇದೆ ಎನ್ನುವ ಕಾರಣಕ್ಕೆ ನಿರ್ಮಾಣವಾಗುತ್ತದೆ. ನಂತರ ಅದನ್ನು ಬಳಕೆಗೆ ಲೋಕಾರ್ಪಣೆ ಮಾಡದೇ ಹಾಗೆ ಬಿಟ್ಟ ಕಾರಣ ಅದು ಪಾಳು ಬಿದ್ದ ಕೊಂಪೆಯಾಗುತ್ತದೆ. ಹಣ ಯಾರದ್ದು ವೇಸ್ಟ್ ಆಯಿತು ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇವತ್ತು ನಾನೇನು ದೊಡ್ಡ ಕಟ್ಟಡಗಳ ವಿಷಯ ತೆಗೆಯಲು ಹೋಗುವುದೇ ಇಲ್ಲ. ನಾನು ಇವತ್ತು ನಿಮಗೆ ಹೇಳುತ್ತಿರುವುದು ಬಹಳ ಸಣ್ಣ ವಿಷಯ ಅನಿಸಬಹುದು. ಆದರೆ ಯಾವ ರೀತಿಯಲ್ಲಿ ನಿರ್ವಹಣೆ ಎನ್ನುವುದನ್ನು ಮಾಡದೇ ಹೋದರೆ ಅದು ಹೇಗೆ ಕರಟಿ ಹೋಗುತ್ತದೆ ಎನ್ನುವುದು ಈ ಜಾಗೃತ ಅಂಕಣದ ವಿಷಯ.
ಮಂಗಳೂರಿನ ಹೃದಯಭಾಗವಾದ ಹಂಪನಕಟ್ಟೆಯನ್ನು ಒಂದಿಷ್ಟು ಚೆಂದ ಮಾಡಬೇಕು ಎನ್ನುವ ಕಾರಣಕ್ಕೆ ಹೇಗೂ ಅನುದಾನ ಇದೆಯಲ್ಲ ಎಂದು ಸ್ಮಾರ್ಟ್ ಸಿಟಿಯವರು ಕೆಲವು ಸಸಿಗಳನ್ನು ನೆಟ್ಟು ಬಿಟ್ಟರು. ಅದು ಡಿವೈಡರ್ ಇರಬಹುದು, ಹಂಪನಕಟ್ಟೆಯ ಬಾವಿಯ ಆಸುಪಾಸಿನ ಜಾಗ ಇರಬಹುದು. ಎಲ್ಲಾ ಕಡೆ ಸಸಿಗಳ ನೆಡುವಿಕೆ ಆಯಿತು. ಇದನ್ನು ನೋಡಿದವರಿಗೆ ಮಂಗಳೂರು ಹೃದಯಭಾಗ ಇಷ್ಟು ಆಕರ್ಷಣೀಯವಾಗಿದೆಯಲ್ಲ ಎಂದು ಅನಿಸುತ್ತಿತ್ತು. ಹೊರಗಿನಿಂದ ಮಂಗಳೂರಿಗೆ ಬರುವವರಿಗೆ ಒಂದು ಕ್ಷಣ ಸೋಜಿಗವೂ ಆಗುವಂತಾಯಿತು. ನಮಗೂ ಕೂಡ ಇಲ್ಲಿನ ನಿವಾಸಿಗಳಿಗೆ ಬಹಳ ಹೆಮ್ಮೆಯ ರೀತಿಯಲ್ಲಿ ಆ ಪ್ರದೇಶ ಕಂಡುಬರುತ್ತಿತ್ತು. ನಮ್ಮ ಖುಷಿ, ಹೆಮ್ಮೆ ಮತ್ತು ಬೇರೆ ಊರಿನವರ ಆಶ್ಚರ್ಯ ಕೆಲವೇ ದಿನಗಳಲ್ಲಿ ಮಧ್ಯಾಹ್ನದ ಸೂರ್ಯನ ಬಿಸಿಲಿಗೆ ಕಪ್ಪಾಗಿ ಹೋಗುತ್ತದೆ ಎಂದು ಯಾರಿಗೆ ಗೊತ್ತು. ಇದು ಅಕ್ಷರಶ: ಸತ್ಯ. ಎರಡ್ಮೂರು ದಿನಗಳಿಂದ ಮಂಗಳೂರು ನಗರದಲ್ಲಿ ಹನಿ ನೀರು ಆಗಸದಿಂದ ಕೆಳಗೆ ಬೀಳಲು ಸಿದ್ಧವಿಲ್ಲ. ಅದರ ನಡುವೆ ಸೂರ್ಯ ಸಿಕ್ಕಿದ್ದೇ ಚಾನ್ಸ್ ಅಂತ ಲೆಕ್ಕಕ್ಕಿಂತ ಹೆಚ್ಚು ಹೊಳೆಯುತ್ತಿದ್ದಾನೆ. ಅವನ ಕೆಳಗೆ ಮಂಗಳೂರಿನ ಹೃದಯಭಾಗದ ಸ್ಮಾರ್ಟ್ ಸಿಟಿ ಸಸಿಗಳು ಜೀವ ಬಿಡಲು ತಯಾರಾಗಿ ಹೋಗಿವೆ. ಯಾಕೆಂದರೆ ಅವುಗಳಿಗೆ ಇಲ್ಲಿಯ ತನಕ ವರುಣ ದೇವ ನೀರು ಹಾಕುತ್ತಿದ್ದ. ಅವನ ಅನುಪಸ್ಥಿತಿಯಲ್ಲಿ ಯಾರು ಹಾಕುವುದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸ್ಮಾರ್ಟ್ ಸಿಟಿಯವರು ತಮ್ಮ ಕೆಲಸ ಮುಗಿಸಿ ಕೈ ತೊಳೆದುಕೊಂಡು ಹೋಗಿ ಆಗಿದೆ. ಮಂಗಳೂರು ಮಹಾನಗರ ಪಾಲಿಕೆಯವರಿಗೆ ಗಿಡಗಳಿಗೆ ನೀರು ಹಾಕುವ ಉಮ್ಮೇದು ಇಲ್ಲ. ಹಾಗಿರುವಾಗ ಜೀವ ಬಿಡದೆ ಆ ಗಿಡಗಳು ಏನು ತಾನೆ ಮಾಡಿಯಾವು. ನಾನು ಹೇಳುವುದು, ಇಲ್ಲಿ ಯಾರ ಕೆಲಸ ಎಂದು ಯಾಕೆ ಕರೆಕ್ಟಾಗಿ ಒಂದು ನಿರ್ಣಯಕ್ಕೆ ಬಂದು ಇದಮಿತ್ಥಂ ಮಾಡಲು ಸಾಧ್ಯವಿಲ್ಲವೇ? ಒಂದು ವೇಳೆ ಆಗದಿದ್ದರೆ ಕನಿಷ್ಟ ಪಾಲಿಕೆ-ಸ್ಮಾರ್ಟ್ ಸಿಟಿಯವರು ಒಂದು ನಿರ್ಧಾರಕ್ಕೆ ಬರುವ ತನಕ ಮನಪಾ ಸದಸ್ಯರು ಈ ಕೆಲಸ ಮಾಡಿದ್ದರೆ ಕನಿಷ್ಟ ಆ ಸಸಿಗಳು ಥ್ಯಾಂಕ್ಸ್ ಹೇಳುತ್ತಿದ್ದವು. ಅದು ಯಾರ ವಾರ್ಡಿಗೆ ಬರುತ್ತದೆಯೋ ಅವರಾದರೂ ಮನಸ್ಸಿಟ್ಟು ಆ ವಾರ್ಡಿನಿಂದ ಗೆದ್ದದ್ದಕಾದರೂ ಮಾಡಬಹುದಲ್ಲ. ಅಂತಹ ವಾರ್ಡಿನಲ್ಲಿ ಗೆಲ್ಲುವುದು ಕೂಡ ಒಂದು ಹೆಮ್ಮೆಯ ವಿಷಯ. ಯಾಕೆಂದರೆ ಆ ಭಾಗದಲ್ಲಿ ಅನೇಕ ಸರಕಾರಿ ಕಟ್ಟಡ ಮತ್ತು ಆಡಳಿತಾತ್ಮಕ ಕೆಲಸಗಳು ನಡೆಯುವಂತಹ ಜಾಗ ಅದು. ಅಲ್ಲಿ ಯಾವುದೇ ಸರಕಾರಿ ಉದ್ಘಾಟನೆ ಆಗಲಿ, ಕಾರ್ಯಕ್ರಮ ಆಗಲಿ, ಆ ಭಾಗದ ಮನಪಾ ಸದಸ್ಯರಿಗೆ ವಿಶೇಷವಾಗಿ ವೇದಿಕೆಯಲ್ಲಿ ಆಹ್ವಾನ ಇರುತ್ತದೆ. ಅದನ್ನು ಹೆಮ್ಮೆಯಿಂದ ಬಳಸುವ ಅವರು ಈ ಗಿಡಗಳು ಮಾತನಾಡುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ ನೀರು ಹಾಕುವುದು ದೇವರಿಗೆ ಬಿಟ್ಟರೆ ಪಾಪ ಬರುವುದಿಲ್ಲವೇ?
ಇನ್ನು ಸ್ಮಾರ್ಟ್ ಸಿಟಿಯವರು ಕೂಡ ತಮಗೆ ರಸ್ತೆ ಮಾತ್ರ ಅಭಿವೃದ್ಧಿ ಅಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅವರಿಗೆ ನೀರು ಪೂರೈಕೆ ವ್ಯವಸ್ಥೆ, ವಿದ್ಯಾಕ್ಷೇತ್ರಗಳಿಗೆ ಅಭಿವೃದ್ಧಿ ಸಹಾಯ, ಪರಿಸರ ಸಹ್ಯವಾಗಿ ಕಾಣಲು ಹಸಿರು ವಲಯ ಸಹಿತ ಬೇರೆ ಕೆಲವು ಯೋಜನೆಗಳನ್ನು ಮಾಡಲು ಇದೆ. ಆದರೆ ಇವರಿಗೆ ರಸ್ತೆ ಮೊದಲ ಪ್ರಾಶಸ್ತ್ಯ. ಹಾಗಂತ ಏನೋ ಬೇಕಾಬಿಟ್ಟಿ ಮಾಡಿ ಇಂತಹ ಉತ್ತಮ ಕಾರ್ಯಗಳನ್ನು ಅರ್ಧದಲ್ಲಿ ಕೈಬಿಡಬಾರದು. ಸ್ಮಾರ್ಟ್ ಸಿಟಿಯವರಿಗೆ ಸರಕಾರಿ ಶಾಲಾ, ಕಾಲೇಜುಗಳಲ್ಲಿ ಕೂಡ ಏನಾದರೂ ಸ್ಮಾರ್ಟ್ ಕೆಲಸ ಮಾಡಬೇಕು ಎನ್ನುವ ನಿರ್ದೇಶನ ಇದೆ. ಅದಕ್ಕಾಗಿ ಅವರು ಈ ಒಪನ್ ಸ್ಟೇಜ್ ಇರುವ ಶಾಲಾ-ಕಾಲೇಜುಗಳಲ್ಲಿ ಅದಕ್ಕೆ ಸುಣ್ಣ, ಬಣ್ಣ ಬಳಿದು ನಾಲ್ಕು ಕಾಂಕ್ರೀಟ್ ತರಹದ್ದು ಎದುರಿಗೆ ಹಾಕಿ ಮುಗಿಸುತ್ತಾರೆ. ಕೆಲವು ಕಡೆ ನಾಲ್ಕು ಮಕ್ಕಳು ಇದ್ದರೂ ಆ ಶಾಲೆಗಳಿಗೆ ಏನೋ ಮಾಡಲು ಹೋಗಿ ಅವು ಬಳಕೆ ಆಗದೇ ಉಳಿದುಬಿಡುವಂತದ್ದು ಇದೆ. ಆದ್ದರಿಂದ ಈಗ ಅರ್ಜೇಂಟಾಗಿ ಇವತ್ತು ನಾನು ಪೋಸ್ಟ್ ಮಾಡಿದ ಫೋಟೋಗಳಲ್ಲಿರುವ ಸಸಿಗಳಿಗೆ ನೀರು ಹಾಕುವುದು ಯಾರು ಎಂದು ನಿರ್ಧಾರಕ್ಕೆ ಪಾಲಿಕೆ ಅಥವಾ ಸ್ಮಾರ್ಟ್ ಸಿಟಿಯವರು ಬರುವುದು ಒಳ್ಳೆಯದು. ಇಲ್ಲದೇ ಹೋದರೆ ಹೀಗೆ ಒಂದು ಕಡೆ ಮಾಡುವುದು, ಮತ್ತೊಂದೆಡೆ ಅದನ್ನು ದೇವರು ನೋಡಿಕೊಳ್ಳಲಿ ಎಂದು ಬಿಟ್ಟರೆ ಆ ಸಸಿಗಳ ಶಾಪ ನಿಮಗೆ ಗ್ಯಾರಂಟಿ!
- Advertisement -
Trending Now
ಕಾಶ್ಮೀರ ಅಸೆಂಬ್ಲಿಯಲ್ಲಿ ಆರ್ಟಿಕಲ್ 370 ಮರುಸ್ಥಾಪನೆಗೆ ಒತ್ತಾಯ!
November 5, 2024
ಕ್ಲೀನ್ ಸ್ವೀಪ್ ಬಳಿಕ ಮತ್ತೆರಡು ದೊಡ್ಡ ಸಿರೀಸ್ ಗಳಿಗೆ ಸಜ್ಜಾಗಬೇಕಿದೆ ಭಾರತ!
November 4, 2024
Leave A Reply