ನನ್ನ ಚಾಲೆಂಜ್ ಸ್ವೀಕರಿಸುತ್ತೀರಾ ಮಂಗಳೂರಿನ ಜನಪ್ರತಿನಿಧಿಗಳೇ??
ಸಾವಿಲ್ಲದ ಮನೆಯ ಸಾಸಿವೆ ಕಾಳು ತಾ ಎಂದು ಗೌತಮ ಬುದ್ಧ ಮಹಿಳೆಯೊಬ್ಬಳಿಗೆ ಹೇಳಿದಂತೆ ನಾನು ಇವತ್ತು ಒಂದು ಹೊಸ ಸವಾಲನ್ನು ನಮ್ಮ ಜನಪ್ರತಿನಿಧಿಗಳಿಗೆ ನೀಡುತ್ತಿದ್ದೇನೆ. ನನ್ನ ಚಾಲೆಂಜನ್ನು ಕಾರ್ಪೋರೇಟರ್ ರಿಂದ ಹಿಡಿದು ಮೇಯರ್, ಶಾಸಕರು, ಸಂಸದರು, ಪಾಲಿಕೆ ಕಮೀಷನರ್, ಪೊಲೀಸ್ ಕಮೀಷನರ್ ಕೊನೆಗೆ ಜಿಲ್ಲಾಧಿಕಾರಿಯವರ ತನಕ ಯಾರು ಬೇಕಾದರೂ ಸ್ವೀಕರಿಸಬಹುದು. ಸವಾಲು ಏನೆಂದರೆ ನೀವು ಅನೇಕ ರಸ್ತೆಗಳನ್ನು ಅಗಲ ಮಾಡಿದ್ದೀರಿ. ಇಂತಹ ಒಂದಾದರೂ ರಸ್ತೆ ಪಾರ್ಕಿಂಗ್ ಇಲ್ಲದೆ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಬಳಕೆಯಾಗುತ್ತಿದೆಯಾ? ಇಂತಹ ಒಂದಾದರೂ ರಸ್ತೆ ಮಂಗಳೂರು ನಗರದಲ್ಲಿ ಇದ್ರೆ ತೋರಿಸಿ. ಇಲ್ಲ, ತೋರಿಸಲು ಸಾಧ್ಯವೇ ಇಲ್ಲ. ಯಾವ ಅಗಲಗೊಳಿಸಿದ ರಸ್ತೆಯಲ್ಲಿ ನೋಡಿದರೂ ಪಾರ್ಕಿಂಗ್, ಪಾರ್ಕಿಂಗ್ ಮತ್ತು ಪಾರ್ಕಿಂಗ್. ಹಿಂದೆ ಜಾಗ ಕೊಟ್ಟವರು ರಸ್ತೆ ಅಗಲವಾಗಲಿ ಎನ್ನುವ ಸದುದ್ದೇಶದಿಂದ ಜಾಗ ಕೊಟ್ಟಿದ್ದಾರೆ. ಆದರೆ ಈಗ ರಸ್ತೆ ಅಗಲವಾದ ನಂತರ ಅವರ ಅಂಗಡಿ, ಮನೆಗಳ ಎದುರೇ ವಾಹನಗಳ ಪಾರ್ಕಿಂಗ್ ಶುರುವಾಗಿದೆ. ಟಿಡಿಆರ್ ತೆಗೆದುಕೊಂಡು ಜಾಗ ಬಿಟ್ಟುಕೊಟ್ಟವರು ಜನಪ್ರತಿನಿಧಿಗಳನ್ನು ಬೈಯುತ್ತಿದ್ದಾರೆ.
ನಾನು ಇವತ್ತಿನ ಜಾಗೃತ ಅಂಕಣದಲ್ಲಿ ಪೋಸ್ಟ್ ಮಾಡಿದ ಫೋಟೋಗಳನ್ನು ನೀವು ಗಮನಿಸಿರುತ್ತೀರಿ. ಇದನ್ನು ಐಲ್ಯಾಂಡ್ ಎಂದು ಕರೆಯಲಾಗುತ್ತದೆ. ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಏನೆಲ್ಲಾ ಪ್ರಯೋಗಗಳನ್ನು ಮಾಡಲು ಸಾಧ್ಯವಿದೆಯೋ ಅದೆಲ್ಲವನ್ನು ಮಾಡುತ್ತಿರುವ ಅಧಿಕಾರಿಗಳು ಈಗ ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಕ್ಲಾಕ್ ಟವರ್ ಬಳಿ ಈ ಐಲ್ಯಾಂಡ್ ನಿರ್ಮಿಸಿದ್ದಾರೆ. ಒಂದು ಐಲ್ಯಾಂಡ್ ತರಹದ್ದು ನಿರ್ಮಿಸಬೇಕಾದರೆ ಅದಕ್ಕೆ ಅದರದ್ದೇ ಆದ ಮಾನದಂಡಗಳಿವೆ. ತಮಗೆ ಖುಷಿ ಬಂದಾಗ ಖುಷಿ ಬಂದ ಕಡೆ ಖುಷಿ ಬಂದ ಶೈಲಿಯಲ್ಲಿ ಐಲ್ಯಾಂಡ್ ರಚಿಸಲು ಆಗುವುದಿಲ್ಲ. ಆದರೂ ಇವರು ರಚಿಸುತ್ತಿದ್ದಾರೆ. ಅಲ್ಲಿ ಮೊದಲೇ ರಸ್ತೆ ಎಷ್ಟು ಅಗಲ ಇದ್ದರೂ ಸಾಕಾಗುವುದಿಲ್ಲ ಎನ್ನುವ ಪರಿಸ್ಥಿತಿ ಇದೆ. ಹಾಗಿರುವಾಗ ಇವರು ಇರುವ ರಸ್ತೆಯನ್ನು ಕೂಡ ಚಿಕ್ಕದು ಮಾಡಿ ಐಲ್ಯಾಂಡ್ ನಿರ್ಮಿಸಿದ್ದು ಎಷ್ಟು ಸರಿ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಹಾಗಂತ ಮಂಗಳೂರಿನಲ್ಲಿ ಇಲ್ಲಿ ಮಾತ್ರ ಈ ದೃಶ್ಯ ಕಾಣುವುದು ಅಲ್ಲ. ಇವರು ಎಲ್ಲೆಲ್ಲ ರಸ್ತೆ ಅಗಲ ಮಾಡಲು ಕೈ ಹಾಕಿದರೋ ಅಲ್ಲೆಲ್ಲ ರಸ್ತೆ ಅಗಲವಾದ ಕಡೆಗಳಲ್ಲಿ ನಿಮಗೆ ಕಾಣ ಸಿಗುವುದು ಬರೀ ಪಾರ್ಕಿಂಗ್ ಮಾಡಿದ ವಾಹನಗಳು ಮಾತ್ರ.
ಮಂಗಳೂರು ಸಿಕ್ಕಾಪಟ್ಟೆ ವೇಗದಲ್ಲಿ ಬೆಳೆಯುತ್ತಿದೆ. ಇದರ ಬೆಳವಣಿಗೆ ಎತ್ತ ಸಾಗಬಹುದು ಎನ್ನುವ ಐಡಿಯಾ ಈಗ ಯಾರಿಗೂ ಸಿಗುತ್ತಿಲ್ಲ. ಹೇಗೂ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಅನುದಾನ ದಂಡಿಯಾಗಿ ಹರಿದು ಬರುತ್ತಿದೆ. ಹಾಗಿರುವಾಗ ಬಂದ ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಲ್ಲ, ಅದಕ್ಕಾಗಿ ರಸ್ತೆ ಅಗಲ ಮಾಡುವ ಕೆಲಸಕ್ಕೆ ಕೈ ಹಾಕುತ್ತಾರೆ. ಅದಕ್ಕಾಗಿ ರಸ್ತೆ ಬದಿ ಇರುವ ಮನೆ ಮಾಲೀಕರಿಗೆ ಅಥವಾ ಅಂಗಡಿಯವರಿಗೆ ಟಿಡಿಆರ್ ಕೊಟ್ಟು ಅವರ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಅಲ್ಲಿ ಜಾಗ ವಶಪಡಿಸಿಕೊಂಡ ಬಳಿಕ ಕಾಂಕ್ರೀಟ್ ಕಲ್ಲುಗಳನ್ನು ಹಾಕಿ ಪುಟ್ ಪಾತ್, ರಸ್ತೆಯನ್ನು ಅಗಲ ಮಾಡಲಾಗುತ್ತದೆ. ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದರ ಮುಖ್ಯ ಉದ್ದೇಶ ಇರುವುದೇ ವಾಹನಗಳ ಸಂಚಾರ ಸುಗಮವಾಗಿ ಆಗಲಿ ಎನ್ನುವ ಕಾರಣಕ್ಕೆ. ರಸ್ತೆಗಳು ಕೂಡ ಅಗಲವಾಗಿರುವುದರಿಂದ ಇನ್ನು ಮುಂದೆ ಇಂತಹ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಲ್ಲ ಎನ್ನುವ ವಾತಾವರಣ ಮೇಲ್ನೋಟಕ್ಕೆ ಇರುತ್ತದೆ. ಆದರೆ ಎಷ್ಟು ದಿನ. ಒಂದೊಂದೇ ವಾಹನದವರು ಬಂದು ಅಲ್ಲಿ ಅಗಲವಾಗಿರುವ ರಸ್ತೆಯ ಪಕ್ಕದಲ್ಲಿ ಪಾರ್ಕಿಂಗ್ ಮಾಡಿ ಎಲ್ಲಿಯೋ ಹೊರಟು ಹೋಗಿರುತ್ತಾರೆ. ಯಾವಾಗ ಒಂದು ವಾಹನ ನಿಂತಿದೆಯೋ ಇನ್ನೊಬ್ಬನಿಗೆ ಅದರ ಹಿಂದೆ ನಿಲ್ಲಿಸಲು ಪರ್ಮಿಷನ್ ತನ್ನಿಂದ ತಾನೆ ಸಿಕ್ಕಂತೆ ಆಗುತ್ತದೆ. ನಾಲ್ಕು ದಿನಗಳ ನಂತರ ನೋಡಿದರೆ ಅಗಲವಾಗಿರುವ ರಸ್ತೆಯ ಎರಡು ಬದಿಗಳಲ್ಲಿ ಫುಲ್ ವೆಹಿಕಲ್ಸ್. ಇದರಿಂದ ಮೊದಲಿಗಿಂತ ಹೆಚ್ಚು ಟ್ರಾಫಿಕ್ ಜಾಮ್ ಶತ:ಸಿದ್ಧ. ಹಾಗಾದರೆ ಕೋಟಿ ಖರ್ಚು ಮಾಡಿ ಟಿಡಿಆರ್ ಅದು ಇದು ಎಂದು ಸಮಯ, ಶ್ರಮ, ಹಣ ವ್ಯಯಿಸಿ ರಸ್ತೆ ಅಗಲ ಮಾಡಿ, ಅದನ್ನು ಜನಪ್ರತಿನಿಧಿಗಳು ಉದ್ಘಾಟನೆ ಮಾಡಿ ನಂತರ ಅದರ ಫೋಟೋ, ವಿಡಿಯೋ ಮಾಧ್ಯಮಗಳಲ್ಲಿ ಬಂದು ಕೊನೆಗೆ ಆ ರಸ್ತೆ ಹಿಂದಿಗಿಂತಲೂ ಹೆಚ್ಚು ಕಿಷ್ಕಿಂದೆ ತರಹ ಆಗುವುದಾದರೆ ರಸ್ತೆಗಳನ್ನು ಅಗಲ ಮಾಡುವುದು ಯಾಕೆ? ಇನ್ನು ಈಗ ಜಾಗ ಬಿಟ್ಟುಕೊಟ್ಟವರು ಟಿಡಿಆರ್ ಪಡೆದುಕೊಳ್ಳಲು ಅನುಭವಿಸುತ್ತಿರುವ ಸಂಕಷ್ಟದ್ದೇ ಇನ್ನೊಂದು ಕಥೆ ಇದೆ. ಅದು ನಾಳಿನ ಅಂಕಣದಲ್ಲಿ ಹೇಳ್ತೇನೆ!!
Leave A Reply