ಮಂಗಳೂರಿನಲ್ಲಿ ಮತ್ತೆ ಕ್ಲಬ್ಬುಗಳು ತೆರೆದಿವೆ, ರೇಡ್ ಕಾಟಾಚಾರಕ್ಕೆ!!
ಮಂಗಳೂರಿನಲ್ಲಿ ಕ್ಲಬ್ಬುಗಳು ಮತ್ತೆ ಆರಂಭವಾಗಿದೆ. ಜಿಲ್ಲಾಧಿಕಾರಿಯವರು ಅವುಗಳನ್ನು ಬಂದ್ ಮಾಡಿಸಿದ್ದರು. ಕೊರೊನಾ ಲಾಕ್ಡೌನ್ ಇರುವಾಗ ಅವು ಬಂದ್ ಆಗಿದ್ದವು. ಆದರೆ ಈಗ ರಾಜ್ಯ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ ಎಂದು ಹೇಳಿ ಮಂಗಳೂರಿನಲ್ಲಿರುವ ಅಷ್ಟು ಕ್ಲಬ್ಬುಗಳು ಮತ್ತೆ ಆರಂಭವಾಗಿದೆ. ಆದರೆ ಹೈಕೋರ್ಟ್ ಅನುಮತಿ ನೀಡಿದ್ದು ಕೇವಲ ನಾಲ್ಕು ರಿಕ್ರಿಯೇಷನ್ ಕ್ಲಬ್ಬುಗಳನ್ನು ತೆರೆಯಲು ಮಾತ್ರ. ಹಾಗಾದರೆ ನಾಲ್ಕು ಮಾತ್ರ ಓಪನ್ ಆಗಬೇಕಿತ್ತಲ್ವಾ? ಎಂದು ನೀವು ಕೇಳಿದರೆ ಇದಕ್ಕೆ ನೇರ ಕಾರಣ ನಮ್ಮ ಪೊಲೀಸರು. ಅವರ ಕೃಪೆಯಿಂದ ಎಲ್ಲಾ ಕ್ಲಬ್ಬುಗಳ ಮಾಲೀಕರು ತಮ್ಮ ವ್ಯಾಪಾರ ತೆರೆದು ಕುಳಿತುಕೊಂಡಿದ್ದಾರೆ. ಹಾಗಂತ ಒಳಗೆ ಏನು ನಡೆಯಬೇಕು ಎನ್ನುವುದರ ಬಗ್ಗೆ ನಿಯಮಗಳಿವೆ. ಅದು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವುದೇ ಈಗ ಇರುವ ಪ್ರಶ್ನೆ. ಅಲ್ಲಿ ಕೇರಂ ಸಹಿತ ಕೆಲವು ಗೇಮ್ಸ್ ಇರಬೇಕು. ಆದರೆ ಈ ಕ್ಲಬ್ಬುಗಳು ಜುಗಾರಿ ಅಡ್ಡೆಗಳಾಗಿವೆ. ಇತ್ತೀಚೆಗೆ ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದಿಂದ ಕೆಲವು ಕ್ಲಬ್ಬುಗಳ ಮೇಲೆ ರೇಡ್ ಆಗಿದೆ. ಆದರೆ ಒಳಗೆ ನೋಡಿದರೆ ಯಾರೂ ಇಲ್ಲ. ಇದು ಹೇಗೆ ಸಾಧ್ಯ? ರಿಕ್ರಿಯೇಶನ್ ಕ್ಲಬ್ಬುಗಳನ್ನು ಇತರ ಸಮಯದಲ್ಲಿ ನೋಡಿದರೆ ಅಲ್ಲಿ ಜನ ಫುಲ್ ಇರುತ್ತಾರೆ. ಆದರೆ ರೇಡ್ ಆಗುವಾಗ ಅಲ್ಲಿ ಯಾರೂ ಇರುವುದಿಲ್ಲ. ಇದರಿಂದ ಕ್ಲಬ್ಬಿನ ಮಾಲೀಕರು ಸಾಚಾಗಳು ಎಂದು ಯಾರಿಗಾದರೂ ಅನಿಸುತ್ತದೆ. ಆದರೆ ವಿಷಯ ಹಾಗಲ್ಲ. ಮೊದಲನೇಯದಾಗಿ ಇಲ್ಲಿ ರೇಡ್ ಮಾಡುವಾಗ ಆರೋಗ್ಯ ವಿಭಾಗಕ್ಕೆ ಪೊಲೀಸ್ ಸಿಬ್ಬಂದಿಗಳು ಬೇಕು ತಾನೆ? ಅವರಿಗೆ ರೇಡ್ ಆಗುವ ಕೊನೆಯ ಕ್ಷಣದಲ್ಲಿ ಹೇಳಿದರೆ ಮಾತ್ರ ಅದು ನಿಜವಾದ ಅರ್ಥದಲ್ಲಿ ರೇಡ್ ಎಂದು ಅನಿಸುತ್ತದೆ. ಆದರೆ ನಮಗೆ ನೀವು ಒಂದು ದಿನದ ಮೊದಲೇ ಹೇಳಬೇಕು. ನೀವು ಕೊನೆಯ ಹೊತ್ತಿಗೆ ಕೇಳಿದರೆ ನಿಮಗೆ ಬೇಕಾದಷ್ಟು ಪೊಲೀಸರನ್ನು ನಮಗೆ ಹೊಂದಿಸಿಕೊಡಲು ಆಗುವುದಿಲ್ಲ. ನಮ್ಮಲ್ಲಿ ಕೆಲವೊಮ್ಮೆ ಸಿಬ್ಬಂದಿಗಳ ಕೊರತೆ ಇದೆ ಎಂದು ಪೊಲೀಸ್ ಇಲಾಖೆಯಿಂದ ಬಂದಿರುವ ಕಂಡೀಷನ್. ಇನ್ನು ಇಂತಹ ಕ್ಲಬ್ಬುಗಳ ಮೇಲೆ ಯಾವುದೇ ರೇಡ್ ಆಗುವ ಮೊದಲೇ ಪಾಲಿಕೆಯ ಆರೋಗ್ಯ ವಿಭಾಗಕ್ಕೆ ಗೊತ್ತಿರುತ್ತದೆ. ಆರೋಗ್ಯ ವಿಭಾಗ ಅದು ಪಾಲಿಕೆಯ ಅತ್ಯಂತ ಸಮೃದ್ಧವಾಗಿರುವ ಹುಲ್ಲುಗಾವಲು. ಅಲ್ಲಿ ದೊಡ್ಡ ಗಾತ್ರದ ಎಮ್ಮೆ, ಕೋಣಗಳು ಮೇಯುತ್ತಾ ಇರುತ್ತವೆ. ಅವರು ರೇಡ್ ಮಾಡಲು ಹೊರಟರೆ ಸ್ವತ: ಸತ್ಯ ಹರಿಶ್ಚಂದ್ರನೇ ನಾಚಿಕೊಳ್ಳಬೇಕು, ಹಾಗಿರುತ್ತೆ. ಇನ್ನು ಪೊಲೀಸರ ಸಹಕಾರದಿಂದ ನಡೆಯುವ ಕ್ಲಬ್ಬುಗಳು ಒಂದು ಕಡೆಯಾದರೆ ಮತ್ತು ರೇಡಿಗೆ ಒಂದು ದಿನ ಮೊದಲೇ ಹೇಳಬೇಕಾದ ಒತ್ತಡ ಇನ್ನೊಂದು ಕಡೆ. ಇನ್ನು ಇದನ್ನು ರೇಡ್ ಎಂದು ಯಾರಾದರೂ ಕರೆಯಬೇಕಾ? ಒಳ್ಳೆಯ ಮದುವೆ ದಿಬ್ಬಣ ಸಿಂಗರಿಸಿಕೊಂಡು ಮದುವೆ ಛತ್ರಕ್ಕೆ ಹೋಗುವಂತೆ ಕಾಣುತ್ತದೆ. ಇಷ್ಟಾದ ಮೇಲೆ ಯಾವ ಕ್ಲಬ್ಬು ತಾನೆ, ತೆರೆದಿರುತ್ತದೆ. ಅವರಿಗೇನು ಹುಚ್ಚಾ? ಒಂದೋ ಪೊಲೀಸ್ ಇಲಾಖೆಯಿಂದಲೇ ಕ್ಲಬ್ಬಿನ ಮಾಲೀಕರಿಗೆ ಸುದ್ದಿ ತಲುಪಿರುತ್ತದೆ. ಅದಕ್ಕೆ ಸರಿಯಾಗಿ ಬರಬೇಕಾದ ಭಕ್ಷೀಸು ಬಂದಿರುತ್ತದೆ. ಇನ್ನೊಂದು ಕಡೆ ಆರೋಗ್ಯ ವಿಭಾಗದಿಂದಲೂ ಸುದ್ದಿ ಲೀಕ್ ಆಗಿರಬಹುದು. ಆದರಿಂದ ಸ್ಪರ್ಧೆಗೆ ಬಿದ್ದವರಂತೆ ಎರಡೂ ಕಡೆಯಿಂದ ಮಾಲೀಕರಿಗೆ ಸುದ್ದಿ ನೀಡುವ ಧಾವಂತ ಇರುತ್ತದೆ. ಇಷ್ಟೆಲ್ಲ ವ್ಯವಸ್ಥೆ ಇಲ್ಲದೆ ಯಾವ ಕ್ಲಬ್ಬಿನ ಮಾಲೀಕ ತಾನೆ ಕ್ಲಬ್ಬು ತೆರೆದು ಕುಳಿತುಕೊಳ್ಳುವ ಧೈರ್ಯ ಮಾಡುತ್ತಾರೆ?
ಹಾಗಂತ ಕ್ಲಬ್ಬುಗಳೇ ನಡೆಯುತ್ತಿಲ್ವಾ? ಮೊನ್ನೆಯಷ್ಟೇ ಒಬ್ಬ ಡಿಸಿ ಕಚೇರಿಗೆ ಬಂದು ತಾನು ಒಂದು ಕ್ಲಬ್ಬಿನಲ್ಲಿ ಇಸ್ಪೀಟಿನಿಂದ ಮೂವತ್ತು ಸಾವಿರ ಕಳೆದುಕೊಂಡೆ ಎಂದು ಗೋಳೋ ಎಂದು ಅತ್ತಿದ್ದಾನೆ. ಅಂದರೆ ಯಾವ ಕ್ಲಬ್ಬುಗಳು ತೆರೆಯಲು ಅನುಮತಿ ಇಲ್ಲವೋ ಅಂತಹ ಎಲ್ಲಾ ಕ್ಲಬ್ಬುಗಳು ನಡೆಯುತ್ತಿವೆ. ಆದರೆ ಪಾಲಿಕೆಯ ಕೈಗೆ ಯಾರೂ ಸಿಗುತ್ತಿಲ್ಲ. ಯಾಕೆಂದರೆ ಬೇಲಿಗಳನ್ನೇ ಹೊಲ ಮೇಯಲು ಬಿಟ್ಟರೆ ಏನಾಗುತ್ತದೆ? ಹಾಗಾದರೆ ಇದಕ್ಕೆ ಏನು ಮಾಡಬೇಕು. ಇಂತಹ ರೇಡ್ ಗಳಿಗೆ ಡಿಸಿಯವರೇ ಅತ್ಯಂತ ನಂಬಿಕಸ್ಥ ತಂಡವನ್ನು ರೆಡಿ ಮಾಡಬೇಕು. ಪಾಲಿಕೆಯಿಂದ ಅನುಮತಿ ಇಲ್ಲದೆ ನಡೆಯುತ್ತಿರುವ ಕ್ಲಬ್ಬುಗಳ ಲಿಸ್ಟ್ ತರಿಸಬೇಕು. ಈ ತಂಡಕ್ಕೆ ಮತ್ತು ಆರೋಗ್ಯ ವಿಭಾಗದ ಒಬ್ಬ ಅಧಿಕಾರಿಗೆ ಕೊನೆಯ ಕ್ಷಣದಲ್ಲಿ ಮಾಹಿತಿ ನೀಡಿ ರೇಡ್ ಮಾಡಿಸಬೇಕು. ಆಗ ಏನಾದರೂ ಆದರೂ ಆಗಬಹುದು. ಈಗ ಏನಾಗಿದೆ ಎಂದರೆ ಪೊಲೀಸ್ ಸ್ಟೇಶನ್ ಗಳಿಗೆ ಮಾಮೂಲಿ ಹೋಗುತ್ತದೆ. ಪಾಲಿಕೆಯಲ್ಲಿ ಯಾರಿಗೆ ಮಾಮೂಲಿ ಕೊಡಬೇಕೋ ಅವರಿಗೆ ಕೊಡುತ್ತಾರೆ. ಹಾಗಾದರೆ ರೇಡ್ ಯಾರಿಗೆ? ಯಾರದ್ದೋ ಎಂಜಿಲು ಹಣ ತಿಂದು ಇನ್ಯಾರದ್ದೋ ಭವಿಷ್ಯ ಹಾಳು ಮಾಡುವ ಕೆಲವರಿಂದ ನಗರದ ಸ್ವಾಸ್ಥ ಹಾಳಾಗುತ್ತದೆ. ಇದನ್ನು ತಪ್ಪಿಸಬೇಕು. ಯಾವ ಕ್ಲಬ್ಬಿಗೆ ನ್ಯಾಯಾಲಯದ ಅನುಮತಿ ಇದೆಯೋ ಅವುಗಳು ಮಾತ್ರ ಕಾರ್ಯ ಮಾಡಬೇಕು. ಒಂದು ಕಾಲದಲ್ಲಿ ರಿಕ್ರಿಯೇಶನ್ ಕ್ಲಬ್ ಮಾಡಿದ ಉದ್ದೇಶ ವ್ಯಾಪಾರ, ವ್ಯವಹಾರದಲ್ಲಿ ಬ್ಯುಸಿಯಾಗಿರುವವರು, ಆಡಳಿತ, ಕಚೇರಿ ಎಂದು ವ್ಯಸ್ತರಾಗಿರುವವರು ಒಂದಿಷ್ಟು ಹೊತ್ತು ಆ ಒತ್ತಡವನ್ನು ಮರೆತು ಒಂದು ನಿರ್ದಿಷ್ಟ ಸ್ಥಳದಲ್ಲಿ ಕುಳಿತು ಹಾಯಾಗಿ ಸಮಯ ಕಳೆಯಲಿ ಎಂದು ಆರಂಭಿಸಲಾಗಿತ್ತು. ಅಲ್ಲಿ ದಂಧೆ ಇರಲಿಲ್ಲ. ಆದರೆ ದಂಧೆಯೇ ಈ ಕ್ಲಬುಗಳ ಜೀವಾಳ. ಇವರು ರೇಡ್ ಮಾಡಿ ಬರಿಕೈಯಲ್ಲಿ ಬರುವುದು ಕಾಟಾಚಾರಕ್ಕೆ ಮಾತ್ರ!
Leave A Reply