ಈ-ಖಾತಾ ಮಾಡಿಸಲು ಪಾಲಿಕೆಗೆ ಸದ್ಯ ಬರಬೇಡಿ, ಯಾಕೆಂದರೆ!
ನಮ್ಮಲ್ಲಿ ಯಾರಾದರೂ ಸತ್ತರೆ ಹದಿಮೂರನೇ ದಿನಕ್ಕೆ ವಿಶೇಷ ಮಹತ್ವ ಇದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ 13 ದಿನಗಳಿಂದ ಈ-ಖಾತಾ ಎನ್ನುವ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದೆ. ಕೇಳಿದ್ರೆ ಬೆಂಗಳೂರಿನಲ್ಲಿಯೇ ಸ್ಟಾಫ್ ವೇರ್ ಸರ್ವರ್ ಡೌನ್ ಆಗಿದೆ ಎನ್ನುವ ಮಾಹಿತಿ ಸಿಗುತ್ತದೆ. ಒಂದು ಸಾಫ್ಟ್ ವೇರ್ ಸರಿ ಮಾಡಲು 13 ದಿನಗಳು ಬೇಕಾ ಎನ್ನುವುದು ಮೂಲಭೂತ ಪ್ರಶ್ನೆ. ಬೆಂಗಳೂರಿನಲ್ಲಿ ಕಮಾಂಡ್ ಅಂಡ್ ಕಾನ್ಟ್ರೆಕ್ಟ್ ಸೆಕ್ಷನ್ ಈ ಈ-ಖಾತಾ ಸಾಫ್ಟ್ ವೇರ್ ನಿರ್ವಹಿಸುತ್ತದೆ. ಅದು ಕರ್ನಾಟಕ ರಾಜ್ಯ ಸರಕಾರದ ಅಧೀನಲ್ಲಿಯೇ ಬರುವ ವ್ಯವಸ್ಥೆಯಾಗಿರುವುದರಿಂದ ಅದನ್ನು ನಿರ್ವಹಿಸಲು ಪ್ರತ್ಯೇಕವಾಗಿ ಅಧಿಕಾರಿ ವರ್ಗ ಇರುತ್ತದೆ. ಒಂದೋ ಅವರು ನಿದ್ರೆಯಿಂದ ಎದ್ದು ಬೇಗ ಸರಿ ಮಾಡಿಕೊಡಬೇಕು ಅಥವಾ ಯಾರಿಂದಲಾದರೂ ಸರಿ ಮಾಡಿಸಬೇಕು. ರಾಜ್ಯದಲ್ಲಿ ಇಷ್ಟು ನುರಿತ ತಂತ್ರಜ್ಞರು ಇರುವಾಗ ಒಂದು ಸಾಫ್ಟವೇರ್ ಸರಿ ಮಾಡಲು 13 ದಿನ ಬೇಕಾ? ಹಾಗಾದರೆ ಪಾಲಿಕೆ ಏನು ಮಾಡಬೇಕು? ಬೆಂಗಳೂರಿನ ಕಚೇರಿಯ ಬೆಂಬಿಡದೆ ಯಾಕೆ ಹೀಗಾಯಿತು, ಯಾವಾಗ ಸರಿ ಮಾಡುತ್ತೀರಿ, ಜನ ಕಾಯುತ್ತಿದ್ದಾರೆ ಎಂದು ವಿಭಿನ್ನ ಅಸ್ತ್ರಗಳನ್ನು ಪ್ರಯೋಗಿಸಿ ಕೆಲಸ ಮಾಡಿಸಿಕೊಳ್ಳಬೇಕು. ಆದರೆ ಅಂತಹ ಇಚ್ಚಾಶಕ್ತಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಯಾರಿಗೆ ಇದೆ? ಯಾರಿಗೂ ಇಲ್ಲ. ಅದೇ ಕಾರಣಕ್ಕೆ ಸಾಫ್ಟ್ ವೇರ್ ಸತ್ತು 13 ದಿನಗಳಾಯಿತು.
ಒಂದು ಕಾಲದಲ್ಲಿ ಲಿಖಿತವಾಗಿ ಬರೆದು ಖಾತೆಗಳನ್ನು ತಯಾರು ಮಾಡಲಾಗುತ್ತಿತ್ತು. ಆಗ ಒಂದಿಷ್ಟು ಕೆಲಸಗಳು ಜಾಸ್ತಿ ಇರುತ್ತಿತ್ತು. ಇನ್ನು ಖಾತೆಗಳನ್ನು ತುಂಬಾ ಕಾಲ ಕಾಪಿಡುವುದು ಕೂಡ ಸವಾಲಾಗಿತ್ತು. ಎಷ್ಟೋ ಸಂದರ್ಭದಲ್ಲಿ ಖಾತೆಯ ಕಾಗದಗಳನ್ನು ಹಲವು ವರ್ಷಗಳ ಬಳಿಕ ನೋಡಿದಾಗ ಜೀರ್ಣಾವಸ್ಥೆಗೆ ಬಂದು ಬಿಡುತ್ತಿತ್ತು. ಇನ್ನು ಕಾಗದದ ರೂಪದಲ್ಲಿರುವ ಖಾತಾಗಳನ್ನು ಯಾರಾದರೂ ಕದ್ದು ಗೋಲ್ ಮಾಲ್ ಕೂಡ ಮಾಡಬಹುದಿತ್ತು. ಕೆಲವು ಬಾರಿ ನಕಲಿ ಖಾತಾಗಳಲ್ಲಿ ಯಾರದ್ದೋ ಜಾಗಗಳನ್ನು ಯಾರೋ ಒಳಗೆ ಹಾಕಿ ಅದು ವರ್ಷಗಟ್ಟಲೆ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಾ ಇದ್ದದ್ದು ಕೂಡ ನಾವು ಕೇಳಿದ್ದೇವೆ, ನೋಡಿದ್ದೇವೆ, ಕೆಲವರು ಅನುಭವಿಸಿದ್ದಾರೆ. ಆದ್ದರಿಂದ ಈ-ಖಾತಾ ಎನ್ನುವ ಆಧುನಿಕ ಬದಲಾವಣೆಗೆ ನಮ್ಮ ಪಾಲಿಕೆ ತೆರೆದುಕೊಂಡಾಗ ಸಹಜವಾಗಿ ಅನೇಕರಿಗೆ ಸಮಾಧಾನವಾಗಿತ್ತು. ಆರಂಭದಲ್ಲಿ ಸಾಮಾನ್ಯ ಖಾತಾದಿಂದ ಈ-ಖಾತಾ ಮಾಡಿಸಲು ಒಂದೂವರೆ ತಿಂಗಳುಗಳಿಂದ ಎರಡು ತಿಂಗಳು ತನಕ ಬೇಕಾಗುತ್ತಿತ್ತು. ಆಮೆಗತಿಯಲ್ಲಿ ಕೆಲಸ ನಡೆದದ್ದು ಕೂಡ ಇತ್ತು. ಆದರೆ ನಂತರ ಇದು ಕಡಿಮೆಯಾಗಿ ಸ್ವಲ್ಪ ಬೇಗ ಕೆಲಸ ಆಗಲು ಶುರುವಾಗಿರುವುದನ್ನು ಸಾಧನೆ ಎಂದು ಪಾಲಿಕೆ ಅಂದುಕೊಳ್ಳಬಹುದು. ಪ್ರಧಾನಿ ಮೋದಿಯವರು ಭಾರತವನ್ನು ಡಿಜಿಟಲ್ ಇಂಡಿಯಾ ಮಾಡುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳು ಈ-ಖಾತಾದೊಂದಿಗೆ ಒಂದು ಹಂತಕ್ಕೆ ಸರಕಾರಿ ಕಚೇರಿಯೊಳಗೆ ಕಾಲಿಟ್ಟರೂ ಇದು ಇವತ್ತಿಗೂ ಆಮೆಗತಿಯಂತೆ ಸಾಗುತ್ತಿದೆ.
ಅಷ್ಟಕ್ಕೂ ಈ-ಖಾತಾ ಮಾಡಿಸಲು ನಾವು ಮೊದಲು ಹೋಗಬೇಕಾಗಿರುವುದು ಪಾಲಿಕೆಯಲ್ಲಿ ಕೇಸ್ ವರ್ಕರ್ ಬಳಿ. ಅವರು ಅಲ್ಲಿಂದ ಎಲ್ಲವನ್ನು ಪರಿಶೀಲಿಸಿ ಅದನ್ನು ಸೂಪರಿಟೆಂಡೆಂಟ್ ಅವರ ಬಳಿ ಆನ್ ಲೈನ್ ನಲ್ಲಿಯೇ ಕಳುಹಿಸಿಕೊಡುತ್ತಾರೆ. ಅಲ್ಲಿ ಅದು ಒಪ್ಪಿಗೆ ಆದ ಕೂಡಲೇ ಸಹಾಯಕ ಕಂದಾಯ ಅಧಿಕಾರಿಯವರ ಬಳಿ ಹೋಗುತ್ತದೆ. ಅಲ್ಲಿ ಓಕೆ ಆದ ಕೂಡಲೇ ಅದು ಕಂದಾಯ ಅಧಿಕಾರಿಯವರ ಬಳಿ ಫಾರ್ ವರ್ಡ್ ಆಗುತ್ತದೆ. ಅಲ್ಲಿಂದ ಉಪ ಆಯುಕ್ತ (ಕಂದಾಯ) ರ ಬಳಿ ಹೋಗಿ ಕೊನೆಗೆ ಅದು ಪ್ರಿಂಟ್ ತೆಗೆದರೆ ಅಲ್ಲಿಗೆ ನಿಮ್ಮ ಈ-ಖಾತಾ ರೆಡಿ. ಇದನ್ನು ಮಾಡಲು ತಿಂಗಳು ಬೇಕಾ? ಹಾಗೆ ತೆವಳಿ ಸಾಗುತ್ತಾ ಇದ್ದ ಈ-ಖಾತಾ ಈಗ 13 ದಿನಗಳಿಂದ ಸಂಪೂರ್ಣ ನಿಂತು ಹೋಗಿದೆ. ಇದರಿಂದ ಎಷ್ಟೋ ಜನರಿಗೆ ತೊಂದರೆಯಾಗುತ್ತಿದೆ. ಈಗ ಯಾರಾದರೂ ಈ-ಖಾತಾ ಮಾಡಿಸಲು ಪಾಲಿಕೆಗೆ ಬಂದರೆ ಸರ್ವರ್ ಸ್ಲೋ ಎಂದು ಹೇಳಿ, ನಾಳೆ ಬನ್ನಿ ಎನ್ನುವ ಮಾಮೂಲಿ ಹೇಳಿಕೆ ಕಂಡುಬರುತ್ತದೆ. ಹೀಗೆ ಇವತ್ತು ಬಂದವರಿಗೆ ಸಾಫ್ಟ್ ವೇರ್ ಯಾವಾಗ ಸರಿ ಹೋಗುತ್ತದೆ ಎಂದು ಗೊತ್ತಿರುವುದಿಲ್ಲ. ಇನ್ನು ಪಾಲಿಕೆಯಲ್ಲಿ ಇರುವವರಿಗೂ ಅದು ಯಾವಾಗ ಸರಿಯಾಗುತ್ತದೆ ಎನ್ನುವ ಸಣ್ಣ ಸುಳಿವೂ ಇಲ್ಲ. ಹೀಗಿರುವಾಗ ಜನರಿಗೆ ಆಗುತ್ತಿರುವ ತೊಂದರೆಯನ್ನು ಸರಿ ಮಾಡುವುದು ಯಾರು? ಒಮ್ಮೆ ಈ-ಖಾತಾ ಮಾಡಿಸಿದರೆ ನೆಮ್ಮದಿ ಎಂದುಕೊಂಡು ಪಾಲಿಕೆಗೆ ಬರುವವರಿಗೆ ಇದನ್ನು ಮಾಡಿಸುವುದೇ ಗಜಪ್ರಸವ ಆದಂತೆ ಆಗುತ್ತದೆ. ಅದು ನಮ್ಮ ತಪ್ಪಲ್ಲ, ಬೆಂಗಳೂರಿನಲ್ಲಿ ಸಮಸ್ಯೆಯಾಗಿದೆ ಎಂದು ಹೇಳುವುದರಿಂದ ಪ್ರಾಬ್ಲಂ ಸರಿ ಹೋಗುವುದಿಲ್ಲ. ಒಂದು ಈ-ಖಾತಾ ಮಾಡಿಸಿದರೆ ಅದರಲ್ಲಿ ಮೂರು ಪೀಳಿಗೆಯ ವಂಶವೃಕ್ಷವನ್ನು ಕೂಡ ದಾಖಲಿಸಬಹುದು. ಅದು ಎಷ್ಟು ವರ್ಷವಾದರೂ ಸಾಫ್ಟವೇರ್ ನಲ್ಲಿ ಸುರಕ್ಷಿತವಾಗಿ ಸಂಗ್ರಹವಾಗಿರುತ್ತದೆ ಎನ್ನುವ ಉದ್ದೇಶದಿಂದ ನಾಗರಿಕರು ಈ-ಖಾತಾ ಮಾಡಿಸಲು ಮುಂದಾಗುತ್ತಾರೆ. ಅದನ್ನು ಶೀಘ್ರದಲ್ಲಿ ಮಾಡಿಸಿಕೊಡಬೇಕಾಗಿರುವುದು ಅತ್ಯಗತ್ಯ. ಅದು ಬಿಟ್ಟು ಹೀಗೆ ಏನಾದರೂ ನೆಪ ಹೇಳುತ್ತಾ ಹೋದರೆ ಅದರಿಂದ ಮಾನ ಹೋಗುವುದು ಜನಪ್ರತಿನಿಧಿಗಳದ್ದು. ಆದ್ದರಿಂದ ಅವರು ಎಚ್ಚೆತ್ತು ಇದನ್ನು ತ್ವರಿತವಾಗಿ ಪರಿಗಣಿಸಿ ಅಂತಿಮ ಪರಿಹಾರ ಹುಡುಕುವುದು ಅತ್ಯಗತ್ಯ.
ಈ- ನಿರ್ಮಾಣ್ ಸಾಫ್ಟ್ ವೇರ್ ಕೂಡ 3 ತಿಂಗಳುಗಳಿಂದ ವರ್ಕ್ ಆಗುತ್ತಿಲ್ಲ. ಆದರೆ ಪಾಲಿಕೆಯಲ್ಲಿ ಅದನ್ನು ಆಫ್ ಲೈನ್ ನಲ್ಲಿ ಮಾಡಿಕೊಡುತ್ತಿದ್ದಾರೆ. ಆಫ್ ಲೈನ್ ನಲ್ಲಿ ಮಾಡಿಕೊಡುವುದರಿಂದ ಪಾಲಿಕೆ ನಗರ ಯೋಜನಾ ವಿಭಾಗದ ಅಧಿಕಾರಿಗಳಿಗೆ ವೈಯಕ್ತಿಕ ಲಾಭ ಮಾತ್ರವಲ್ಲ, ಬಿಲ್ಡರ್ ಗಳನ್ನು ರಕ್ಷಿಸುವ ಹಿತಾಸಕ್ತಿ ಕೂಡ ಇದೆ. ಇಂತಹ ದಾಖಲೆಗಳು ಆಫ್ ಲೈನ್ ನಲ್ಲಿ ಇದ್ದರೆ ಅಗತ್ಯ ಬಂದಾಗ ಬಿಲ್ಡರ್ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವುದು ಸುಲಭ. ಆನ್ ಲೈನ್ ಆದರೆ ಬಿಲ್ಡರ್ ಗಳಿಗೆ ಇವತ್ತಲ್ಲ ನಾಳೆ ರಿಸ್ಕ್. ಅದಕ್ಕೆ ಪಾಲಿಕೆ ಅಧಿಕಾರಿಗಳು ಆಫ್ ಲೈನ್ ನಲ್ಲಿಯೇ ಬಿಲ್ಡರ್ ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ.
Leave A Reply