ಹೊಂಡದಲ್ಲಿ ಪೆದ್ದು ಪೆಟ್ಟಾದರೆ ಪಾಲಿಕೆಯ ವಿರುದ್ಧ ದೂರು ಕೊಡಿ!
ಮಂಗಳೂರಿನ ಜನ ಅದೃಷ್ಟವಂತರು. ಬೆಂಗಳೂರಿನಲ್ಲಿ ಬಂದಷ್ಟು ಮಳೆ ಬಂದಿಲ್ಲ. ಒಂದು ವೇಳೆ ಬಂದಿದ್ದರೆ ನಮ್ಮ ರಸ್ತೆಗಳು ಕ್ಲೀನ್ ಕೃಷ್ಣಪ್ಪ ಆಗುತ್ತಿತ್ತು. ಒಂದೆರಡು ಜೋರು ಮಳೆ ಬಂದಾಗಲೇ ನಮ್ಮ ರೋಡುಗಳು ಅಂಗಿ ಕಳಚಿ ನಿಂತ ಲೆವೆಲ್ಲಿಗೆ ಬಂದು ಮುಟ್ಟಿದ್ದವು. ಇನ್ನು ಕೆಲವು ಮೈಮೇಲೆ ಬಿಸಿ ಎಣ್ಣೆ ಬಿದ್ದಾಗ ಸಿಪ್ಪೆ ಸುಲಿದು ಹೋದ ಸ್ಥಿತಿಗೆ ಬಂದಿದ್ದವು. ಇನ್ನು ಬೆಂಗಳೂರಿನ ರಸ್ತೆಯ ಮೇಲೆ ಬಿದ್ದಷ್ಟು ಮಳೆ ಬಂದಿದ್ದರೆ ತೂತು ವಡೆ ಸಾಂಬಾರಿನಲ್ಲಿ ಅದ್ದಿದ್ದಾಗ ಹೇಗೆ ಇರುತ್ತದೆ ಆ ದೃಶ್ಯ ಕಾಣುತ್ತಿತ್ತು. ಇಷ್ಟಾಗಿಯೂ ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಇಬ್ಬರು ಶಾಸಕರಲ್ಲಿ ಒಬ್ಬರು ಇಲ್ಲಿಯೇ ಕಮೀಷನರ್ ಆಗಿದ್ದವರು. ಕಮೀಷನರ್ ನಲ್ಲಿ ಕೊನೆಯ “ರ್” ಹೋಗಿ ಉಳಿದದ್ದು ಮಾತ್ರ ಉಳಿದಿದೆಯೋ ಎನ್ನುವಂತಾಗಿದೆ.
ಅಷ್ಟಾಗಿಯೂ ರಸ್ತೆಗಳ ಪ್ಯಾಚ್ ವರ್ಕ್ ಮಾಡಲಿಕ್ಕೆ ಎಂದು ಹಿಂದಿನ ಮೇಯರ್ ನಾಲ್ಕು ಕೋಟಿ ಬಿಡುಗಡೆ ಮಾಡಿದ್ದರಲ್ಲಿ ಇವರು ಎರಡು ಕೋಟಿ ಉಳಿಸಬಹುದಿತ್ತು. ಹೇಗೆ ಹೇಳುತ್ತೇನೆ, ಅದರ ನಂತರ ಇವರು ನಾಲ್ಕು ಕೋಟಿ ಖರ್ಚು ಮಾಡಿಯೂ ಕೆಲಸ ಮಾತ್ರ ಎರಡು ಕೋಟಿಯದ್ದೇ ಆಗಿದೆ ಎನ್ನುವುದನ್ನು ಕೂಡ ವಿವರಿಸುತ್ತೇನೆ. ಯಾವ ರಸ್ತೆಯಲ್ಲಿ ಹೊಂಡ ಗುಂಡಿಗಳು ಜಾಸ್ತಿ ಇದೆಯೋ ಆ ರಸ್ತೆಯನ್ನು ಯಾವಾಗ ಡಾಮರ್ ಹಾಕಿ ನಿರ್ಮಿಸಿದ್ದು ಎಂದು ಮೊದಲು ನೋಡಬೇಕು. ಪಾಲಿಕೆಯ ಸದಸ್ಯರು ಮನಸ್ಸು ಮಾಡಿದರೆ ಅದನ್ನು ತಿಳಿಯುವುದು ಕಷ್ಟವಲ್ಲ. ಪಾಲಿಕೆಯಲ್ಲಿರುವ ಎಂಬಿ ಪುಸ್ತಕದಲ್ಲಿ ರಸ್ತೆಗೆ ಡಾಮರು ಹಾಕಿ ಮುಗಿದ ದಿನ ಯಾವುದು ಎಂದು ಉಲ್ಲೇಖ ಇರುತ್ತದೆ. ಉದಾಹರಣೆಗೆ ಒಂದು ರಸ್ತೆಗೆ ಡಾಮರು ಹಾಕಿದ್ದು 2016 ಮಾರ್ಚಿನಲ್ಲಿ ಎಂದಾದರೆ 2018ರ ಮಾರ್ಚಿನ ತನಕ ಆ ರಸ್ತೆಯನ್ನು ಹೇಮಾಮಾಲಿನಿಯ ಕೆನ್ನೆಯಂತೆ ನೋಡಬೇಕಾದದ್ದು ಆ ಗುತ್ತಿಗೆದಾರನ ಕೆಲಸ. ಕೆನ್ನೆಯಲ್ಲಿ ಗುಳಿ ಬಿದ್ದರೂ ಅದಕ್ಕೆ ಪೌಡರ್, ಕ್ರೀಂ ಹಾಕಿ ಅದನ್ನು ಮುಚ್ಚಲು ಅವನು ಓಡಿ ಬರಬೇಕು. ಆದರೆ ನಮ್ಮಲ್ಲಿ ಏನಾಗುತ್ತೆ ಎಂದರೆ ಕೆನ್ನೆಯಲ್ಲಿ ಗುಳಿಯಲ್ಲ ತೂತಾಗಿ, ಆ ತೂತು ದೊಡ್ಡ ರಂಧ್ರವಾಗಿ, ಆ ರಂಧ್ರದ ಒಳಗಿನಿಂದ ಹಲ್ಲುಗಳು ಕಾಣ್ತಾ ಇದ್ದರೂ ಗುತ್ತಿಗೆದಾರ ಪಕ್ಕದ ರಸ್ತೆಯಿಂದ ಓಡಿ ಹೋಗುತ್ತಾನೆ ಬಿಟ್ಟರೆ ತಾನು ವರ್ಷದ ಹಿಂದೆ ಮಾಡಿದ ರಸ್ತೆ ಹೇಗಿದೆ ಎಂದು ಕಣ್ಣೆತ್ತಿ ನೋಡಲ್ಲ.
ಅವನಿಗೊಂದು ನೋಟಿಸ್ ಕೊಟ್ಟು “ನೀವು ಡಾಮರ್ ಹಾಕಿದ ರಸ್ತೆ ಕುಲಗೆಟ್ಟು ಹೋಗಿದೆ, ಅದಕ್ಕೆ ಸ್ವಲ್ಪ ಮೋಕ್ಷ ಕಾಣಿಸಿ” ಎಂದು ಸೂಚನೆ ಕೊಡಬೇಕಾದ ಪಾಲಿಕೆ ಆ ಗುತ್ತಿಗೆದಾರನಿಗೆ ನೋಟಿಸ್ ಬಿಡಿ, ಒಂದು ಫೋನ್ ಕೂಡ ಮಾಡುವಂತಹ ಕನಿಷ್ಟ ನೈತಿಕತೆ ಕೂಡ ಇಟ್ಟುಕೊಂಡಿರುವುದಿಲ್ಲ. ಕಾರಣ ಅವನಿಂದ ಎಷ್ಟು ಕಿತ್ತುಕೊಳ್ಳಲಾಗುತ್ತದೆಯೋ ಅಷ್ಟು ಕಿತ್ತುಕೊಂಡು ಆಗಿರುತ್ತದೆ. ಅದರ ನಂತರ ಆ ಗುತ್ತಿಗೆದಾರ ಕೂಡ ಎರಡು ವರ್ಷ ಅಲ್ಲ, ತನ್ನ ಬಿಲ್ ಪಾಸ್ ಆದ ಎರಡು ದಿನಗಳ ನಂತರ ಆ ರಸ್ತೆಯಲ್ಲಿ ಕಂದಕ ಬಿದ್ದರೂ ಸರಿ ಮಾಡಲು ಬರುವುದಿಲ್ಲ. ಆದ್ದರಿಂದ ಮೊದಲು ಈ ಕಮೀಷನ್ ವ್ಯವಹಾರ ನಿಲ್ಲಬೇಕು. ಎರಡು ವರ್ಷಗಳ ತನಕ ಆ ರಸ್ತೆಗೆ ನೀನೆ ಕಾವಲುಗಾರ ಎಂದು ಜೋರು ಮಾಡಿ ಹೇಳುಷ್ಟು ಧೈರ್ಯ ಪಾಲಿಕೆ ತೋರಬೇಕು.
ಇಲ್ಲದಿದ್ದರೆ ಅತ್ತ ರಸ್ತೆ ಮಾಡಿ ಆಚೆ ಬಿಲ್ ಪಾಸಾದ ನಂತರ ಇತ್ತ ಹೊಂಡ ಬಿತ್ತು ಅಂತ ಇವರು ಪ್ಯಾಚ್ ವರ್ಕ್ ಗೆ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದರೆ ಸೋರಿ ಹೋಗುವುದು ಜನರ ತೆರಿಗೆಯ ಹಣ ಮಾತ್ರ. ಮೊನ್ನೆ ಕೂಡ ಹೀಗೆ ಆಗಿದೆ. ನೆಲ್ಲಿಕಾಯಿ ರಸ್ತೆ, ಗೂಡ್ ಶೆಡ್ ರಸ್ತೆ, ಬಿಎಂಇ ರಸ್ತೆ ಗಳಲ್ಲಿ ಇವರು ಪ್ಯಾಚ್ ವರ್ಕ್ ಮಾಡಿದ್ದಾರೆ ಎನ್ನುವುದರ ಕುರಿತು ಬಿಲ್ ಪಾಸ್ ಆಗಿದೆ. ಆದರೂ ಅಲ್ಲಿ ಹೋಗಿ, ಆ ರಸ್ತೆಗಳ ಹೊಂಡಗಳು ನಿಮ್ಮನ್ನು ನೋಡಿ ಕ್ಯಾಕರಿಸಿ ನಗುತ್ತವೆ.
ಹೇಗೂ ಬೆಂಗಳೂರಿನಲ್ಲಿ ಪರಪ್ಪನ ಅಗ್ರಹಾರಕ್ಕೆ ರೇಡ್ ಮಾಡಿ ಅಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿ ಸುದ್ದಿ ಮಾಡಿದ್ದ ರೂಪಾ ಮುದ್ಗಲ್ ಎನ್ನುವ ಐಪಿಎಸ್ ಅಧಿಕಾರಿಣಿ ಒಂದು ಒಳ್ಳೆಯ ಹೇಳಿಕೆ ಕೊಟ್ಟಿದ್ದಾರೆ ” ರಸ್ತೆಗಳ ಹೊಂಡದಲ್ಲಿ ಬಿದ್ದು ಪೆಟ್ಟಾದರೆ, ಸಾವು, ನೋವು ಸಂಭವಿಸಿದರೆ ನೇರವಾಗಿ ಸ್ಥಳೀಯಾಡಳಿತದ ವಿರುದ್ಧ ನ್ಯಾಯಾಲಯದಲ್ಲಿ ದೂರು ಕೊಡಿ ಎಂದು ಹೇಳಿದ್ದಾರೆ. ನಾವು ಕೂಡ ಹಾಗೆ ಮಾಡಬೇಕು. ಮಂಗಳೂರಿನಲ್ಲಿ ಯಾರಾದರೂ ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ ಹೊಂಡದಲ್ಲಿ ಬಿದ್ದು ಮೈ ಕೈಗೆ ಗಾಯ ಮಾಡಿಕೊಂಡರೆ ತಕ್ಷಣ ಪಾಲಿಕೆಯ ವಿರುದ್ಧ ದೂರು ಕೊಡಿ. ಪರಿಹಾರ ಕೇಳಿ. ಪರಿಹಾರ ಸಿಗುತ್ತಾ ಇಲ್ಲವಾ ಬಿದ್ದು ಪೆಟ್ಟು ತಿಂದ ನೋವಿಗೆ ಏನಾದರೂ ಮಾಡಿದೆ ಎನ್ನುವ ಸಮಾಧಾನವಾದರೂ ಇರುತ್ತದೆ!
Leave A Reply